163. ರಾಜ್ಯಪಾಲನಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ:- (1) ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು, ತನ್ನ ಎಲ್ಲ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರ ಚಲಾಯಿಸಲು ಅವನನ್ನು ಅಗತ್ಯಪಡಿಸಿರುವಷ್ಟರ ಮಟ್ಟಿಗೆ ಹೊರತು, ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವನಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು.
(2) ಯಾವುದೇ ವಿಷಯವು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರ ಕಾರ್ಯ ನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸಿರುವ ವಿಷಯವೆ ಅಥವಾ ಅಲ್ಲವೆ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ರಾಜ್ಯಪಾಲನು ತನ್ನ ವಿವೇಚನಾನುಸಾರ ಕೈಗೊಂಡ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು ಮತ್ತು ರಾಜ್ಯಪಾಲನು ಕೈಗೊಂಡ ಯಾವುದೇ ಕಾರ್ಯದ ಸಿಂಧುತ್ವವನ್ನು ಅವನು ತನ್ನ ವಿವೇಚನಾನುಸಾರವಾಗಿ ಕಾರ್ಯನಿರ್ವಹಿಸಬೇಕಾಗಿತ್ತು ಅಥವಾ ಕಾರ್ಯನಿರ್ವಹಿಸಬಾರದಾಗಿತ್ತು ಎಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ.
(3) ಮಂತ್ರಿಗಳು ರಾಜ್ಯಪಾಲನಿಗೆ ಯಾವುದೇ ಸಲಹೆಯನ್ನು ನೀಡಿದ್ದರೇ ಮತ್ತು ಹಾಗೆ ನೀಡಿದ್ದರೆ ಯಾವ ಸಲಹೆಯನ್ನು ನೀಡಿದ್ದರು ಎಂಬ ಪ್ರಶ್ನೆಯನ್ನು ಕುರಿತು ಯಾವುದೇ ನ್ಯಾಯಾಲಯವು ವಿಚಾರಣೆ ಮಾಡತಕ್ಕದ್ದಲ್ಲ.
164. ಮಂತ್ರಿಗಳಿಗೆ ಸಂಬಂಧಿಸಿದ ಇತರ ಉಪಬಂಧಗಳು:- (1) ರಾಜ್ಯಪಾಲನು ಮುಖ್ಯಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಮುಖ್ಯಮಂತ್ರಿಯ ಸಲಹೆಗನುಸಾರ ಇತರ ಮಂತ್ರಿಗಳನ್ನು ರಾಜ್ಯಪಾಲನು ನೇಮಕ ಮಾಡತಕ್ಕದ್ದು ಮತ್ತು ಮಂತ್ರಿಗಳು ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು:
ಪರಂತು, [ಛತ್ತಿಸ್‌ಘಡ, ಝಾರ್ಖಂಡ,] (2006 ನೆಯ ಇಸವಿಯ ಸಂವಿಧಾನ (ತೊಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ‘ಬಿಹಾರ್” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗಗಳ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಒಬ್ಬ ಮಂತ್ರಿಯಿರತಕ್ಕದ್ದು ಮತ್ತು ಅವನು ಅದರ ಜೊತೆಗೆ ಅನುಸೂಚಿತ ಜಾತಿಗಳ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ಇತರ ಯಾವುದೇ ಕಾರ್ಯವನ್ನು ನೋಡಿಕೊಳ್ಳಬಹುದು.
[(1ಎ) (2003 ನೆಯ ಇಸವಿಯ ಸಂವಿಧಾನ (ತೊಂಬತ್ತೊಂದನೇ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) ಒಂದು ರಾಜ್ಯದ ಮಂತ್ರಿಮಂಡಲದಲ್ಲಿ, ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಒಟ್ಟು ಸಂಖ್ಯೆಯು ಆ ರಾಜ್ಯದ ವಿಧಾನ ಸಭೆಯ ಸದಸ್ಯರುಗಳ ಒಟ್ಟು ಸಂಖ್ಯೆಯ ಶೇಕಡ ಹದಿನೈದನ್ನು ಮೀರತಕ್ಕದ್ದಲ್ಲ:
ಪರಂತು, ಒಂದು ರಾಜ್ಯದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಸಂಖ್ಯೆಯು ಹನ್ನೆರಡಕ್ಕಿಂತ ಕಡಿಮೆಯಿರತಕ್ಕದ್ದಲ್ಲ:
ಮತ್ತೂ ಪರಂತು, ಸಂವಿಧಾನ (ತೊಂಬತ್ತೊಂದನೇ ತಿದ್ದುಪಡಿ) ಅಧಿನಿಯಮ, 2003ರ ಪ್ರಾರಂಭದಲ್ಲಿ ಯಾವುದೇ ರಾಜ್ಯದ ಮಂತ್ರಿ ಮಂಡಲದಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಮಂತ್ರಿಗಳ ಒಟ್ಟು ಸಂಖ್ಯೆಯನ್ನು ಸಂದರ್ಭಾನುಸಾರ ಸದರಿ ಶೇಕಡ ಹದಿನೈದನ್ನು ಅಥವಾ ಮೊದಲನೇ ಪರಂತುಕದಲ್ಲಿ ನಿರ್ದಿಷ್ಟಪಡಿಸಿದ ಸಂಖ್ಯೆಯನ್ನು ಮೀರಿದ್ದರೆ, ಆಗ, ಆ ರಾಜ್ಯದಲ್ಲಿ ಮಂತ್ರಿಗಳ ಒಟ್ಟು ಸಂಖ್ಯೆಯು, ರಾಷ್ಟ್ರಪತಿಯು ಸಾರ್ವಜನಿಕ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಿಂದ (7.1.2004, ಎಸ್ ಒ 21 (ಇ), ದಿನಾಂಕ: 7.1.2004ನ್ನು ನೋಡಿ) ಆರು ತಿಂಗಳುಗಳ ಒಳಗಾಗಿ ಈ ಖಂಡದ ಉಪಬಂಧಗಳಿಗೆ ಅನುಗುಣವಾಗಿರುವಂತೆ ಮಾಡತಕ್ಕದ್ದು.
(ಬಿ) ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರುವ, ರಾಜ್ಯದ ವಿಧಾನ ಸಭೆಯ ಅಥವಾ ವಿಧಾನಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಮಂಡಲದ ಎರಡೂ ಸದನಗಳಲ್ಲಿ ಯಾವುದೇ ಸದನದ ಸದಸ್ಯನು, ಹತ್ತನೇ ಅನುಸೂಚಿಯ 2ನೇ ಕಂಡಿಕೆಯಡಿಯಲ್ಲಿ ಆ ಸದನದ ಸದಸ್ಯನಾಗಲು ಅನರ್ಹನಾಗಿದ್ದಲ್ಲಿ, ಸಂದರ್ಭಾನುಸಾರ ಆತನು ಅನರ್ಹತೆ ಹೊಂದಿದ ದಿನಾಂಕದಿಂದ ಪ್ರಾರಂಭವಾಗಿ ಆತನು ಹಾಗೆ ಸದಸ್ಯನಾಗಿರುವ ಪದಾವಧಿಯು ಮುಕ್ತಾಯಗೊಳ್ಳುವ ದಿನಾಂಕದವರೆಗೆ ಅಥವಾ ಅಂಥ ಅವಧಿಯು ಮುಕ್ತಾಯವಾಗುವ ಮೊದಲು ಆತನು ರಾಜ್ಯದ ವಿಧಾನ ಸಭೆಯ ಅಥವಾ ವಿಧಾನ ಪರಿಷತ್ತನ್ನು ಹೊಂದಿರುವ ರಾಜ್ಯದ ವಿಧಾನಮಂಡಲದ ಎರಡು ಸದನಗಳಲ್ಲಿ ಯಾವುದೇ ಸದನದ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆತನು ಚುನಾಯಿತನಾಗಿದ್ದಾನೆ ಎಂದು ಘೋಷಿಸುವ ದಿನಾಂಕದವರೆಗೆ, ಅವೆರಡರಲ್ಲಿ ಯಾವುದು ಮುಂಚೆಯೋ ಅಲ್ಲಿಯವರೆಗಿನ ಅವಧಿಯಲ್ಲಿ ಆತನು ಮಂತ್ರಿಯಾಗಿ ನೇಮಕಗೊಳ್ಳುವುದಕ್ಕೂ ಅನರ್ಹನಾಗತಕ್ಕದ್ದು.]
(2) ಮಂತ್ರಿ ಮಂಡಲವು ಆ ರಾಜ್ಯದ ವಿಧಾನಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರತಕ್ಕದ್ದು.
(3) ಯಾರೇ ಮಂತ್ರಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯಪಾಲನು ಅವನಿಗೆ ಪದದ ಮತ್ತು ಗೋಪ್ಯತಾ ಪಾಲನೆಯ ಪ್ರಮಾಣವಚನಗಳನ್ನು, ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಡಲಾದ ನಮೂನೆಗಳಿಗೆ ಅನುಸಾರವಾಗಿ ಬೋಧಿಸತಕ್ಕದ್ದು.
(4) ಯಾರೇ ಮಂತ್ರಿಯು ನಿರಂತರವಾಗಿ ಆರು ತಿಂಗಳ ಅವಧಿಯವರೆಗೆ ರಾಜ್ಯದ ವಿಧಾನಮಂಡಲದ ಸದಸ್ಯನಾಗದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಅವನು ಮಂತ್ರಿಯಾಗಿರುವುದು ನಿಂತುಹೋಗತಕ್ಕದ್ದು.
(5) ಮಂತ್ರಿಗಳ ಸಂಬಳಗಳು ಹಾಗೂ ಭತ್ಯೆಗಳು ಕಾಲಕಾಲಕ್ಕೆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ವಿಧಾನಮಂಡಲವು ಆ ರೀತಿ ನಿರ್ಧರಿಸುವವರೆಗೆ ಅವು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 63-64




