D2G ಮಾರುಕಟ್ಟೆಗೆ ಬರುತ್ತಿದೆ. ಡಾ.ರೆಡ್ಡೀಸ್ ಲ್ಯಾಬೊರೇಟೊರಿ ಇದನ್ನು ತಯಾರಿಸುತ್ತಿದೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಇದು ಎಷ್ಟರಮಟ್ಟಿಗೆ ಅನುಕೂಲವಾಗಲಿದೆ ಎಂಬುದನ್ನು ಕಾದು ನೋಡಬೇಕು. ಡಿಆರ್ ಡಿಓ ಅಭಿವೃದ್ಧಿಪಡಿಸಿರುವ 2-deoxy-D-Glucose (2-DG)ಯನ್ನು ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಆರ್ಗನೈಸೇಶನ್ ನ ಒಂದು ಘಟಕವಾಗಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್ (INMAS) ಅತ್ಯಂತ ಮುತುವರ್ಜಿ ವಹಿಸಿ ಸಿದ್ಧಪಡಿಸಿದೆ.
D2G ಇಂಜಕ್ಷನ್ನೂ ಅಲ್ಲ, ಮಾತ್ರೆಯೂ ಅಲ್ಲ. ಒಆರ್ ಎಸ್ ಅಥವಾ ಗ್ಲೂಕೋಸ್ ಪುಡಿಗಳ ಹಾಗೆ ಇದೂ ಕೂಡ ಸಣ್ಣ ಪ್ಯಾಕೇಟಿನಲ್ಲಿ ಪ್ಯಾಕ್ ಆಗಿ ಬರುತ್ತದೆ. ಅದನ್ನು ನೀರಿನಲ್ಲಿ ಹಾಕಿ ಕುಡಿಯುವುದು ಚಿಕಿತ್ಸೆ ಪಡೆಯುವ ಸರಳ ವಿಧಾನ.
ಡಿಆರ್ ಡಿಓ ಯೋಜನಾ ನಿರ್ದೇಶಕ ಡಾ. ಸುಧೀರ್ ಚಂದಾನ ಅವರಿಗೆ ಈ ಹೊಸ ಔಷಧಿಯ ಕುರಿತು ವಿಶ್ವಾಸವಿದೆ. ಅದಕ್ಕೆ ಕಾರಣವೂ ಇದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿಯೇ ಸುಧೀರ್ ನೇತೃತ್ವದ ವಿಜ್ಞಾನಿಗಳ ತಂಡ ಸಂಶೋಧನೆ ಆರಂಭಿಸಿತು. ಮೇ ತಿಂಗಳಿನಲ್ಲಿ ಇದಕ್ಕಾಗಿ DCGI ದಿಂದ ಮೇ ತಿಂಗಳಿನಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿಯೂ ದೊರೆಯಿತು. ಅಕ್ಟೋಬರ್ ತಿಂಗಳ ಹೊತ್ತಿಗೆ ಎರಡು ಹಂತದ ಟ್ರಯಲ್ ಗಳು ನಡೆದು ಫಲಿತಾಂಶಗಳು ಉತ್ತೇಜನಕಾರಿಯಾಗಿತ್ತು. ಈಗ ಮೂರನೇ ಹಂತದ ಟ್ರಯಲ್ ಕೂಡ ಪೂರ್ಣಗೊಂಡಿದ್ದು, ತುರ್ತು ಚಿಕಿತ್ಸೆಗಾಗಿ DCGI ಅನುಮತಿಯನ್ನೂ ನೀಡಿದೆ.
ಡಾ.ಸುಧೀರ್ ಅವರ ಪ್ರಕಾರ ಕೋವಿಡ್ ರೋಗಿಗಳಿಗೆ ಈಗ ನೀಡುತ್ತಿರುವ ಸಾಮಾನ್ಯ ಚಿಕಿತ್ಸೆಗಳ ಜತೆಗೆ D2G ಬಳಸಿದರೆ ಅದು ಪರಿಣಾಮಕಾರಿಯಾಗಿರುತ್ತದೆ. ಕ್ಲಿನಿಕಲ್ ಟ್ರಯಲ್ ಗಳ ಸಂದರ್ಭದಲ್ಲಿ ರಿಕವರಿ ರೇಟ್ ಹೆಚ್ಚಾಗಿರುವುದು ವಿಜ್ಞಾನಿಗಳಿಗೆ ಸಮಾಧಾನ ತಂದಿದೆ. D2G ಕರೋನಾ ವೈರಸ್ ದೇಹದಲ್ಲಿ ಹರಡುವುದನ್ನು ತಡೆಯುವುದರ ಜತೆಗೆ ಆಕ್ಸಿಜನ್ ಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಿರುವುದು ಆಶಾದಾಯಕ ಅಂಶ.
ಕ್ಲಿನಿಕಲ್ ಟ್ರಯಲ್ ಗಳ ಫಲಿತಾಂಶಗಳ ಹಾಗೆಯೇ ಈ ಔಷಧಿ ಕರೋನಾರೋಗಿಗಳ ಜೀವ ಉಳಿಸುವಂತಾದರೆ ಅದಕ್ಕಿಂತ ದೊಡ್ಡ ಸಂತೋಷದ ಸುದ್ದಿ ಇನ್ನೇನಿರಲು ಸಾಧ್ಯ? ಇನ್ನೊಂದು ಸಮಾಧಾನದ ವಿಷಯವೆಂದರೆ ಈ ಔಷಧಿಯ ಕಚ್ಛಾವಸ್ತುಗಳಿಗಾಗಿ ಪರದಾಡುವ ಅಗತ್ಯವೂ ಇಲ್ಲದಿರುವುದರಿಂದ ರೆಡ್ಡೀಸ್ ಸಂಸ್ಥೆ ಬೇಕಾದಷ್ಟು ಔಷಧಿಯನ್ನು ತಯಾರುಮಾಡಿ ಮಾರುಕಟ್ಟೆಗೆ ನೀಡಬಹುದು. ಹೀಗಾಗಿ ರೆಮ್ಡಿಸಿವಿರ್ ನ ಹಾಗೆ ಕಾಳಸಂತೆಯಲ್ಲಿ ಹುಡುಕುವ ಅಗತ್ಯ ಬೀಳದು.
D2G ಕುರಿತು ಕೇಳಿಬರುತ್ತಿರುವ ಪಾಜಿಟಿವ್ ಸುದ್ದಿಗಳೆಲ್ಲ ನಿಜವಾಗಲಿ. ದೇಶ ನರಕವಾಗುತ್ತಿರುವಾಗ ನಮ್ಮನ್ನು ರಕ್ಷಿಸಲು ಏನಾದರೊಂದು ಪವಾಡ ಆಗಿಬಿಡಲಿ.
– ದಿನೇಶ್ ಕುಮಾರ್ ಎಸ್.ಸಿ., ಹಿರಿಯ ಪತ್ರಕರ್ತರು




