ಬೆಂಗಳೂರು: ಬಳ್ಳಾರಿಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಮಾರಾಟ ಮಾಡುತ್ತಿದ್ದ ಎಬಿವಿಪಿ ಮುಖಂಡನನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮತ್ತು ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ. ಕೆ ಆಗ್ರಹಿಸಿದ್ದಾರೆ.
ಕೊರೋನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಎಬಿವಿಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ ಬಿಜೆಪಿ ಬೆಂಬಲಿತ ಉದ್ಯಮಿಗಳಾದ ಪೋಲಾ ಪ್ರವೀಣ, ಮಾಲೀಕ ವೆಂಕಟೇಶ ಬಾಬು ಎಂಬ ಮೂವರನ್ನು ಗುರುವಾರ ಬಳ್ಳಾರಿ ಎಸ್ಪಿ ಸೈದುಲು ಅದಾವತ್ ಬಂಧಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
3 ಸಾವಿರ ಮುಖಬೆಲೆಯ ಒಂದು ರೆಮ್‌ಡಿಸಿವಿರ್ ಔಷಧಿಯ ಬಾಟಲ್ ಅನ್ನು 30 ರಿಂದ 35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಈ ಅಕ್ರಮ ದಂಧೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಬೆಂಬಲಿತ ಎಬಿವಿಪಿ ಮತ್ತು ವಿಶ್ವಹಿಂದೂ ಪರಿಷತ್ ಮುಖಂಡರು ಭಾಗಿಯಾಗಿರುವುದು ಬಯಲಾಗಿದೆ ಎಂದಿದ್ದಾರೆ.
ಇವರ ಹಿಂದೆ ಬಿಜೆಪಿ ರಾಜಕೀಯ ನಾಯಕರ ಕೈವಾಡವಿದೆ ಈ ಸಂಬಂಧ ಪೋಲಿಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆರೋಪಿಗಳ ನ್ಯಾಯಾಂಗ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಬಂಧನಕ್ಕೆ ಈ ಅಕ್ರಮ ದಂಧೆಯಲ್ಲಿ ತೊಡಗಿದ್ದ ಉಳಿದವರನ್ನು ಸಹ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್‌ನಂತಹ ಜೀವಾಪಾಯದ ಸಂಕಷ್ಟದ ಕಾಲದಲ್ಲೂ ದುಡ್ಡು ಮಾಡಲು ಹೊರಟಿರುವ ಮುಖಗಳ ಅನಾವರಣವಾಗಬೇಕೆಂದು ಆಗ್ರಹಿಸಿದ್ದಾರೆ.




