ಚಿತ್ರದುರ್ಗ: ಕೋವಿಡ್-19, ಕೊರೋನಾ ತೀವ್ರ ಸಂಕಷ್ಟವನ್ನು ತಂದೊಡ್ಡಿದ್ದು, ದಲಿತರು, ಶೋಷಿತರು, ಅಲ್ಪಸಂಖ್ಯಾತರು, ಅಲೆಮಾರಿ, ಆದಿವಾಸಿ ಜನಾಂಗದವರಿಗೆ ಜೀವನ ನಡೆಸಲೂ ಸಹ ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಡಾ.ಬೊಮ್ಮನಹಳ್ಳಿ ಬಾಬು ಹೇಳಿದರು.
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ದಲಿತ ಮತ್ತು ಶೋಷಿತ ಮುಖಂಡರ ಸಭೆಯಲ್ಲಿ ಮಾತಾಡಿದ ಅವರು, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಜನರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಕೊರೋನಾ ಮೊದಲ ಅಲೆಗಿಂತಲೂ ಎರಡನೇ ಅಲೆಯ ಭೀಕರವಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಸರ್ಕಾರದ ಜವಾಬ್ದಾರಿ ಎಂದರು.
ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಡಾ.ಖಾಸಿಂ ಸಾಬ್ ಮಾತನಾಡಿ, ಡಾ.ಬೊಮ್ಮನಹಳ್ಳಿ ಬಾಬು ಅವರು ಶೋಷಿತ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಪರ ಕಾಳಜಿ ಹೊಂದಿದ್ದಾರೆ. ಇಂತಹ ಸಾಮಾಜಿಕ ಕಳಕಳಿ ಇರುವಂತಹ ವ್ಯಕ್ತಿ ರಾಜಕೀಯದ ಮೂಲಕ ಸಮಾಜ ಸೇವಾ ಕಾರ್ಯವನ್ನು ಮಾಡಿದರೆ ಹೆಚ್ಚು ಮಹತ್ವ ಬರುತ್ತದೆ. ಆದ್ದರಿಂದ ಶೋಷಿತರು, ಪರಿಶಿಷ್ಟ ಜಾತಿ, ವರ್ಗದ ಜನರು ಹೆಚ್ಚಾಗಿರುವ ಚಿತ್ರದುರ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರೆ ಹೆಚ್ಚಿನ ಮಹತ್ವ ಬರುತ್ತದೆ ಎಂದರು.
ಕೊರೋನಾ ಸಂಕಷ್ಟದ ಪರಿಸ್ಥಿತಿ ಕುರಿತು ಚರ್ಚಿಸಲು ಸಮಾವೇಶಗೊಂಡಿದ್ದ ಸಭೆಯಲ್ಲಿ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿದರು. ಸಭೆಯಲ್ಲಿ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ತಮಟಕಲ್ಲು ತಿಪ್ಪೇಸ್ವಾಮಿ, ಜಾನುಕೊಂಡ ನರಸಿಂಹಮೂರ್ತಿ, ವೈ.ಕುಮಾರ್, ಮಹಮದ್ ಹನೀಫ್, ವೇಣುಗೋಪಾಲ, ತುರುವನೂರು ಪ್ರಕಾಶ್ ಮೊದಲಾದವರು ಹಾಜರಿದ್ದರು.




