ಗುತ್ತಿಗೆದಾರರೇ ನಾವು ನಿಮ್ಮ ಪರವಾಗಿದ್ದೇವೆ: ಸಿದ್ದರಾಮಯ್ಯ ಅಭಯ

2 years ago

ಬೆಂಗಳೂರು: ಎರಡು ಅವಧಿಗೆ ರಾಜ್ಯದ ಸಿಎಂ ಆಗಿರುವ ತಾವು ಯಾವುದೇ ಸಮಯದಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಪಾವತಿ ಅಥವಾ ಎಲ್ ಓ ಸಿ ಬಿಡುಗಡೆಗೆ 5 ಪೈಸೆ ಲಂಚ ಪಡೆದಿದ್ದೇನೆ ಎಂದು ಹೇಳಿದರೆ ಅಂದೇ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಸವಾಲೆಸಿದಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಸಚಿವನಾಗಿ 16 ಬಜೆಟ್ ಮಂಡನೆ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಅತ್ಯಂತ ಪಾರದರ್ಶಕವಾಗಿದೆ. ಗುತ್ತಿಗೆದಾರರಿಂದ ನಾನು ಲಂಚ ಪಡೆದಿದ್ದೇನೆ ಎಂದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವಿಚಾರದಲ್ಲಿ ಸಾಕಷ್ಟು ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿರುವುದು ನಿಜ. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಂಬಂಧಪಟ್ಟ ಮಂಡಳಿಗಳ ಅನುಮೋದನೆ ಪಡೆಯದೆ 1.20 ಲಕ್ಷ ಕೋಟಿ ರೂಪಾಯಿಗಳ ಕಾಮಗಾರಿಗೆ ಆದೇಶ ಕೊಡಲಾಗಿದೆ. ಈ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಬಿಲ್ ಬಾಕಿ ಪಾವತಿಗೆ ಮನವಿ ಮಾಡುತ್ತಿದ್ದಾರೆ. ಒಮ್ಮೆಲೇ ಇಷ್ಟೊಂದು ಪ್ರಮಾಣದ ದುಡ್ಡು ಕೊಡಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಹಂತ ಹಂತವಾಗಿ ನೀಡಲಾಗುವುದು ಎಂದರು.

ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶವಾಗಿದೆ. ಆಯೋಗದ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಸರ್ಕಾರ ನೀಡಿದ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ತಪ್ಪು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಸರ್ಕಾರ ಹೇಳಿದ್ದರಿಂದಲೇ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಕೆಲಸಕ್ಕೆ ನಿಗದಿ ಪಡಿಸಿರುವ ಮೊತ್ತ ಬಿಡುಗಡೆ ಮಾಡಲಾಗುವುದು ಎಂದರು.

ಕಾಮಗಾರಿಗಳ ಬಿಲ್ ಬಾಕಿ ಬಿಡುಗಡೆ ಮಾಡುವಲ್ಲಿ ಅಥವಾ ಹೊಸ ಕಾಮಗಾರಿಗಳ ಗುತ್ತಿಗೆ ನೀಡಲು ಯಾರಾದರೂ ಕಮಿಷನ್ ಹೇಳಿದರೆ ತಕ್ಷಣವೇ ಆ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ದೂರು ಸಲ್ಲಿಸಬೇಕು ಎಂದರು.

ನಮ್ಮ ಸರ್ಕಾರ ಭ್ರಷ್ಟಾಚಾರ ಮಟ್ಟ ಹಾಕಿ, ಜನಪರ ಹಾಗೂ ಸರ್ವತೋಮುಖ ಅಭಿವೃದ್ಧಿ ಕೆಲಸ ಮಾಡಲಿದೆ. ಗುತ್ತಿಗೆದಾರರ ಸಹಕಾರ ಇಲ್ಲದೆ ಸರ್ಕಾರ ಒಳ್ಳೆಯ ಕೆಲಸ ಮಾಡಲು ಕಷ್ಟವಾಗುತ್ತದೆ. ಗುತ್ತಿಗೆದಾರರ ಯಾವುದೇ ಅಹವಾಲು ಇದ್ದರೂ ಕಾರ್ಯಕ್ರಮದಲ್ಲಿ ಇರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತನ್ನಿ. ಸರ್ಕಾರ ಸ್ಪಂದಿಸಲಿದೆ. ನಾವು ನಿಮ್ಮ ಪರವಾಗಿದ್ದೇವೆ ಎಂದರು.

ಒಂದೇ ಸಾರಿ ಬಿಲ್ ಕೊಡಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಬಜೆಟ್ನಲ್ಲಿ ಘೋಷಿಸಿತ್ತು. ಈವರೆಗೂ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ನಾವು ತೆರಿಗೆ ಸಂಗ್ರಹಿಸಿ ಕೊಟ್ಟರೆ ಕೇಂದ್ರ ಸರ್ಕಾರದಿಂದ 13 ಸಾವಿರ ರೂಪಾಯಿ ಮಾತ್ರ ವಾಪಾಸ್ ಬರುತ್ತಿದೆ. ಅದರಲ್ಲಿ ಸಂಬಳ ನೀಡಬೇಕು, ಬೇರೆಲ್ಲಾ ಕೆಲಸ ಮಾಡಬೇಕಿದೆ, ಜೊತೆಗೆ ಅಭಿವೃದ್ಧಿಯನ್ನೂ ಮಾಡಬೇಕು ಎಂದರು.

Leave a Reply