ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ

3 years ago

#Congress #releases #second #list #kpcc

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು  ಪ್ರಕಟಿಸಿದೆ.

ಕಳೆದ ಬಾರಿ ವಿಧಾನಸಭೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಿಂದ ಬಿ. ಬಿ. ಚಿಮ್ಮನಕಟ್ಟಿಗೆ ಟಿಕೆಟ್‌ ನೀಡಲಾಗಿದೆ. ಆದರೆ ಕೋಲಾರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಹೆಸರನ್ನು ಪ್ರಕಟಿಸದೆ ಗುಟ್ಟಾಗಿ ಉಳಿಸಿಕೊಂಡಿದೆ.

ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡದಿಂದ ಟಿಕೆಟ್‌ ನೀಡಲಾಗಿದೆ. ಇತ್ತ, ಕಡೂರು ಕ್ಷೇತ್ರದಲ್ಲಿ ವೈ.ಎಸ್‌.ವಿ ದತ್ತ ಬದಲಿಗೆ ಆನಂದ್‌ಗೆ ಟಿಕೆಟ್‌ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್‌ ಬಿಟ್ಟು ಬಂದಿದ್ದ ಎಸ್‌.ಆರ್‌ ಶ್ರೀನಿವಾಸ್‌ ಅವರಿಗೆ ಗುಬ್ಬಿಯಲ್ಲಿ ಟಿಕೆಟ್‌ ಸಿಕ್ಕಿದೆ.

ಇತ್ತೀಚೆಗೆ ಬಿಜೆಪಿ ತೊರೆದಿದ್ದ ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಮತ್ತೊಂದೆಡೆ ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ.ಪಿ. ವಿರೇಂದ್ರಗೆ (ಪಪ್ಪಿ) ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿದೆ.

ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಪದ್ಮನಾಭನಗರದಿಂದ ವಿ.ರಘುನಾಥ ನಾಯ್ಡುಗೆ ಟಿಕೆಟ್ ಘೋಷಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದೇಗೌಡ (ಮಾವಿನಹಳ್ಳಿ ಸಿದ್ದೇಗೌಡ) ಅವರಿಗೆ ಮಣೆ ಹಾಕಲಾಗಿದ್ದು, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಬಾಗಲಕೋಟೆ ಕ್ಷೇತ್ರದಿಂದ ಎಚ್.ವೈ. ಮೇಟಿ, ಬಾದಾಮಿ ಕ್ಷೇತ್ರದಿಂದ ಚಿಮ್ಮನಕಟ್ಟಿ, ಬೀಳಗಿ ಕ್ಷೇತ್ರದಿಂದ ಜೆ.ಟಿ. ಪಾಟೀಲ ಹಾಗೂ ಮುಧೋಳ ಕ್ಷೇತ್ರದಿಂದ ಅರ್. ಬಿ. ತಿಮ್ಮಾಪುರ ಅವರಿಗೆ ಟಿಕೆಟ್ ನೀಡಲಾಗಿದೆ.

ಗುರುಮಠಕಲ್ ಕ್ಷೇತ್ರಕ್ಕೆ ಬಾಬುರಾವ ಚಿಂಚನಸೂರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಈಗಾಗಲೇ ಹುನಗುಂದ, ಜಮಖಂಡಿ ಕ್ಷೇತ್ರಗಳಿಗೆ ಘೋಷಣೆ ಮಾಡಲಾಗಿದೆ. ತೇರದಾಳ ಕ್ಷೇತ್ರಕ್ಕೆ ಉಮಾಶ್ರೀ ಸೇರಿದಂತೆ ಹಲವರು ಆಕಾಂಕ್ಷಿಗಳು ಇರುವುದರಿಂದ ಒಮ್ಮತ ಮೂಡದ್ದರಿಂದ ಘೋಷಣೆ ಮಾಡಿಲ್ಲ.

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರಕ್ಕೆ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಈ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ.

ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ. ಪೈಪೋಟಿ ಹೆಚ್ಚಿರುವ ಕುಮಟಾ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಿಲ್ಲ.

ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ‘ಕೈ’ ಪಡೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ನಿಪ್ಪಾಣಿ- ಕಾಕಾ ಸಾಹೇಬ್ ಪಾಟೀಲ್
ಗೋಕಾಕ್- ಮಹಂತೇಶ ಕಡಾಡಿ
ಕಿತ್ತೂರು- ಬಾಬಾಸಾಹೇಬ್ ಡಿ.ಪಾಟೀಲ್
ಸವದತ್ತಿ- ವಿಶ್ವಾಸ್ ವಸಂತ್ ವಿದ್ಯಾ
ಮುಧೋಳ್- ಆರ್.ಬಿ.ತಿಮ್ಮಾಪುರ್
ಬಿಳಗಿ -ಜಿ.ಟಿ.ಪಾಟೀಲ್
ಬಾದಾಮಿ – ಬಿ ಚಿಮ್ಮನಕಟ್ಟಿ
ಬಾಗಲಕೋಟೆ- ಹುಲ್ಲಪ್ಪ ವೈ.ಮೇಟಿ
ಬಿಜಾಪುರ ನಗರ -ಅಬ್ದುಲ್ ಹಮೀದ್ ಕಾಜಾಸಾಹೇಬ್ ಮುರ್ಷಿಫ್
ನಾಗಠಾಣಾ (ಮೀಸಲು)- ವಿಠಲ್ ಕಠಗೊಂಡ
ಅಫ್ಜಲ್‍ಪುರ್ -ಎಂ.ವೈ.ಪಾಟೀಲ್
ಯಾದಗಿರಿ -ಚನ್ನರೆಡ್ಡಿ ಪಾಟೀಲ್ ತುನ್ನೂರು
ಗುರುಮಿಠ್ಕಲ್ -ಬಾಬುರಾವ್ ಚಿಂಚನಸೂರ್
ಗುಲ್ಬರ್ಗ ದಕ್ಷಿಣ -ಅಲ್ಲಂ ಪ್ರಭುಪಾಟೀಲ್
ಬಸವಕಲ್ಯಾಣ- ವಿಜಯ್ ಧರ್ಮಸಿಂಗ್
ಗಂಗಾವತಿ -ಇಕ್ಬಾಲ್ ಅನ್ಸಾರಿ
ನರಗುಂದ -ಬಿ.ಆರ್.ಯಾವಗಲ್
ಧಾರವಾಡ -ವಿನಯ್ ಕುಲಕರ್ಣಿ
ಕಲಘಟಗಿ -ಸಂತೋಷ್ ಎಲ್.ಲಾಡ್
ಶಿರಸಿ -ಭಿಮಣ್ಣನಾಯಕ್
ಯಲ್ಲಾಪುರ್ -ವಿ.ಎಸ್.ಪಾಟೀಲ್
ಕುಡ್ಲಿಗಿ -ಡಾ.ಶ್ರೀನಿವಾಸ್ ಎನ್‍ಟಿ.
ಮೊಳಕಾಲ್ಮೂರು -ಎನ್.ವೈ.ಗೋಪಾಲಕೃಷ್ಣ
ಚಿತ್ರದುರ್ಗ -ಕೆ.ಸಿ.ವೀರೇಂದ್ರ(ಪಪ್ಪಿ)
ಹೊಳಲ್ಕೆರೆ- ಎಚ್.ಆಂಜನೇಯ
ಚನ್ನಗಿರಿ -ಬಸವರಾಜು ವಿ.ಶಿವಗಂಗಾ
ತೀರ್ಥಹಳ್ಳಿ -ಕಿಮ್ಮನ್ನೆ ರತ್ನಾಕರ
ಉಡುಪಿ -ಪ್ರಸಾದ್‍ರಾಜ್ ಕಾಂಚನ್
ಕಡೂರು -ಆನಂದ್ ಕೆ.ಎಸ್.
ತುಮಕೂರು ನಗರ -ಇಕ್ಬಾಲ್ ಅಹಮ್ಮದ್
ಗುಬ್ಬಿ -ಎಸ್.ಆರ್.ಶ್ರೀನಿವಾಸ್
ಯಲಹಂಕ- ಕೇಶವ ರಾಜಣ್ಣ ಬಿ
ಯಶವಂತಪುರ- ಎಸ್.ಬಾಲರಾಜ್‍ಗೌಡ
ಮಹಾಲಕ್ಷ್ಮೀ ಲೇಔಟ್- ಕೇಶವಮೂರ್ತಿ
ಪದ್ಮನಾಭನಗರ- ವಿ.ರಘುನಾಥ್ ನಾಯ್ಡು
ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ
ಮಂಡ್ಯ- ಪಿ.ರವಿಕುಮಾರ್
ಕೆ.ಆರ್.ಪೇಟೆ- ಬಿ.ಎಲ್.ದೇವರಾಜ್
ಬೇಲೂರು -ಬಿ.ಶಿವರಾಮ್
ಮಡಕೇರಿ- ಡಾ.ಮಂಥರ್ ಗೌಡ
ಚಾಮುಂಡೇಶ್ವರಿ -ಸಿದ್ದೇಗೌಡ
ಕೊಳ್ಳೆಗಾಲ -ಎ.ಆರ್.ಕೃಷ್ಣಮೂರ್ತಿ

Leave a Reply