ಕಾಂಗ್ರೆಸ್ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನರಿಗೆ ವಂಚನೆ ಮಾಡಿದೆ: ಯಡಿಯೂರಪ್ಪ

3 years ago

#Congress #came #power #guarantees #cheat #people #Yeddyurappa

ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನಿಂದ ತತ್ತರಿಸಿರುವ ಬಿಜೆಪಿ ಇದೀಗ ಪುಟಿದೇಳಲು ಮತ್ತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊರೆ ಹೋಗಿದೆ.

ರಾಜ್ಯ ಸರ್ಕಾರ ಆಡಳಿತದ ಎಲ್ಲಾ ಹಂತದಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪಕ್ಷದ ನಾಯಕತ್ವ ರಾಜ್ಯವ್ಯಾಪಿ ಕರೆ ನೀಡಿದ್ದ ಪ್ರತಿಭಟನೆಯ ನೇತೃತ್ವವನ್ನು ಯಡಿಯೂರಪ್ಪ ವಹಿಸಿದ್ದಾರೆ. ಪಕ್ಷದ ಶಾಸಕರು ಮತ್ತು ಮುಖಂಡರೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುವ ಮೂಲಕ ಯಡಿಯೂರಪ್ಪ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನರಿಗೆ ವಂಚನೆ ಮಾಡಿದೆ. ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲಗೊಂಡಿದೆ. ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ನಡೆಸುತ್ತೇವೆ ಎಂದು ಗುಡುಗಿದರು.

ರೈತರಿಗೆ ಏಳು ಗಂಟೆ 3ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೇವಲ 3 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಮಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಅಷ್ಟೊ ಇಷ್ಟೋ ಬೆಳೆದುಕೊಂಡಿದ್ದ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಐದು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಜನರಿಗೆ ಹೇಳಿ ಈಗ ಪ್ರತಿಯೊಂದಕ್ಕೂ ಷರತ್ತುಗಳನ್ನು ವಿಧಿಸಿದ್ದಾರೆ. ಈ ಸರ್ಕಾರವನ್ನು ಯಾಕಾದರೂ ಅಧಿಕಾರಕ್ಕೆ ತಂದಿದ್ದೇವೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ ತೊಲಗಲಿ ಎನ್ನುತ್ತಿದ್ದಾರೆ. ನಾವು ಒಂದು ಹಂತದವರೆಗೂ ಪ್ರತಿಭಟನೆ ನಡೆಸಬಾರದೆಂದು ಸುಮ್ಮನಿದ್ದೆವು. ಆದರೆ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಪರಿಹಾರ ಹೆಚ್ಚಳವಾದ ನಂತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಸಚಿವರು ಹೇಳುತ್ತಾರೆ. ಇದು ಬೇಜವಾಬ್ದಾರಿತನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮ ಸರ್ವೋಚ್ಛ ನಾಯಕ ಯಡಿಯೂರಪ್ಪ  ನೇತೃತ್ವದಲ್ಲಿ ಸರ್ಕಾರದ ವಿರುದ್ಧ ರಣಕಹಳೆ ಊದಿದ್ದೇವೆ. ಇದನ್ನು ಮುಂದಿನ ಒಂದು ವರ್ಷ ರಾಜ್ಯದ ಎಲ್ಲ ಮನೆಗಳಿಗೆ ತಲುಪಿಸಿ ಮತ್ತೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಟ ಆರಂಭಿಸಿದ್ದೇವೆ ಎಂದರು.

ಗ್ಯಾರೆಂಟಿಗಳ ಹೆಸರಲ್ಲಿ ಸಹಿ ಮಾಡಿ ಕೊಟ್ಟರು, ಆದರೆ ಈಗ ಯಾವುದನ್ನೂ ಸಮರ್ಪಕವಾಗಿ ಜಾರಿ ಮಾಡಿಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಇವರು ಕೊಡುತ್ತಿರುವ ಐದು ಕೆಜಿ ಅಕ್ಕಿ ನರೇಂದ್ರ ಮೋದಿಯವರು ಕೊಡುತ್ತಿರುವ ಅಕ್ಕಿ. ಅಕ್ಕಿ ಬದಲು ಹಣ ಕೊಡುತ್ತೇವೆ ಎಂದೇಳಿ ಗ್ರಾಮೀಣ ಮಹಿಳೆಯ ಅರ್ಧ ದಿನದ ಕೂಲಿ ಅನ್ನ ಭಾಗ್ಯದಲ್ಲಿ ದ್ರೋಹ ಮಾಡಿದ್ದಾರೆ. ರಾಜ್ಯದಲ್ಲಿ ಝೀರೋ ಕರೆಂಟ್ ಝೀರೋ ಬಿಲ್ ಯೋಜನೆ ಜಾರಿಗೆ ಬರುತ್ತದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ನವೆಂಬರ್ ನಿಂದ ರಾಜ್ಯದಲ್ಲಿ ಕತ್ತಲೆ ಆವರಿಸುತ್ತದೆ. ಗ್ಯಾರೆಂಟಿಗಳಲ್ಲಿ ದ್ರೋಹ, ಭ್ರಷ್ಟಾಚಾರ ಜೋರಾಗಿದೆ. ಅಧಿಕಾರಿಗಳ ಹುದ್ದೆ ಹರಾಜು ಆಗುತ್ತಿವೆ.

ವಿಧಾನಸೌಧ, ಕುಮಾರಕೃಪಾದಲ್ಲಿ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಸಣ್ಣಪುಟ್ಟ ವಿಷಯಗಳಿಗೆ ಬಂಧನ ಮಾಡುತ್ತಿದ್ದಾರೆ. ಹಾಸನದ ಕಾರ್ಯಕರ್ತರನ್ನು ಬೆಂಗಳೂರಿಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದರು.

ಕಾವೇರಿ ನೀರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನ್ಯಾಯಾಲಯದ ಮುಂದೆ ಸಮರ್ಪಕವಾದ ಮಾಡಿಲ್ಲ. ಸಿಡಬ್ಲುಎಂಎನಲ್ಲಿ ವಾದ ಮಾಡಿಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.

Leave a Reply