ಬೆಂಗಳೂರು: ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ಸ್ವಾರ್ಥ, ಅಹಂ, ದುರಹಂಕಾರ ಹಾಗೂ ಹುಸಿ ಜಾತ್ಯಾತೀತತೆಗೆ ದೆಹಲಿ ಚುನಾವಣೆ ಬಲಿಯಾಗಿದೆ. ಅದರ ಲಾಭ ಪಡೆದಿರುವ ಕೋಮುವಾದಿ ಬಿಜೆಪಿ ಪಕ್ಷ ಚುನಾವಣೆಯನ್ನು ಗೆದ್ದಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶಕ್ಕೆ ಯಾವ ಕಂಟಕ ಎದುರಾದರೂ ಸರಿ, ನಮ್ಮ ಸ್ವಾರ್ಥವೇ ನಮಗೆ ಮುಖ್ಯ ಎಂಬಂತೆ ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳು ವರ್ತಿಸಿವೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಗೆ ಹೋಗಿವೆ. ಆ ಮೂಲಕ ದಲಿತ, ಅಲ್ಪಸಂಖ್ಯಾತ ಹಾಗೂ ಸಂವಿಧಾನ ಪರ ಇರುವ ಜಾತ್ಯಾತೀತ ಮತಗಳ ವಿಭಜನೆಗೆ ಕಾರಣವಾಗಿವೆ ಎಂದಿದ್ದಾರೆ.
ದೆಹಲಿಯಲ್ಲಿ ಕೋಮುವಾದಿ ಬಿಜೆಪಿ ಗೆಲ್ಲಲು ಇದೇ ಪ್ರಮುಖ ಕಾರಣ ಎಂದಿರುವ ಅವರು, ಅಲ್ಲಿ ಬಿಜೆಪಿಯ ಮತ ಪ್ರಮಾಣ ಸುಮಾರು 45.8% ಆಗಿದೆ. ಎಎಪಿ ಅಲ್ಲಿ 43.6% ಮತ್ತು ಕಾಂಗ್ರೆಸ್ 6.3% ಮತ ಪಡೆದಿವೆ. ರಾಷ್ಟ್ರದ ಹಿತದೃಷ್ಟಿಯಿಂದ ತಮ್ಮ ಸ್ವಾರ್ಥವನ್ನು ಬದಿಗೊತ್ತಿ ಇವರಿಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದರೆ ಅಲ್ಲಿ ಕೋಮುವಾದಿ ಶಕ್ತಿಗಳನ್ನು ನಿರಾಯಾಸವಾಗಿ ಸೋಲಿಸಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸೋಲಿಗೆ ಕಾಂಗ್ರೆಸ್ ಹಾಗೂ ಎಎಪಿಯ ಸ್ವಾರ್ಥ ಒಂದೇ ಕಾರಣವಲ್ಲ. ಅವರು ಹುಸಿ ಜಾತ್ಯಾತೀತತೆಯೂ ಪ್ರಮುಖ ಕಾರಣ. ದೆಹಲಿಯಲ್ಲಿ ಮುಸ್ಲಿಮರ ವಿರುದ್ಧ ದಂಗೆಗಳು ನಡೆದಾಗ, ಮುಸ್ಲಿಮರ ಮನೆಗಳನ್ನು ಬಿಜೆಪಿ ಬುಲ್ಡೋಜ್ ಮಾಡುವಾಗ ಅದನ್ನು ತಡೆಯುವುದು ಬಿಡಿ, ಈ ಎರಡೂ ಪಕ್ಷಗಳು ತುಟಿ ಬಿಚ್ಚಲಿಲ್ಲ ಎಂದಿದ್ದಾರೆ.
ಎಎಪಿಯ ಮಾಜಿ ಕಾರ್ಪೋರೇಟರ್ ತಾಹಿರ್ ಹುಸೇನ್ ಅವರನ್ನು ಬಿಜೆಪಿ ಷಡ್ಯಂತ್ರ ರೂಪಿಸಿ ಗಲಭೆ ಸೃಷ್ಟಿಸಿದ ಆರೋಪ ಹೊರಿಸಿ ಬಂಧಿಸಿದಾಗ, ಅವರ ಬೆನ್ನಿಗೆ ನಿಲ್ಲಬೇಕಿದ್ದ ಎಎಪಿ ಪಕ್ಷ ಅವರನ್ನು ಪಕ್ಷದಿಂದ ಉಚ್ಛಾಟಿಸಿತು. ಈ ಎಲ್ಲ ಬೆಳವಣಿಗೆಗಳು ಅಲ್ಪಸಂಖ್ಯಾತರಲ್ಲಿ ಈ ಎರಡೂ ಪಕ್ಷಗಳ ಮೇಲಿನ ನಂಬಿಕೆಯನ್ನು ಅಲುಗಾಡಿಸಿದವು. ಅದರ ಲಾಭ ಪಡೆದ ಬಿಜೆಪಿ ಮುಸ್ಲಿಂ ಬಾಹುಲ್ಯ ಇರುವ 12 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂದಿದ್ದಾರೆ.
ತಾಹಿರ ಹುಸೇನ್ ಅವರು ಹೊರ ಬಂದ ನಂತರ ಎಂಐಎಂ ಪಕ್ಷ ಸೇರಿ ಈಗ 33 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂಲಕ ಮುಸ್ತಫಾಬಾದ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳೆಲ್ಲ ನಿಜವಾಗಿಯೂ ದೇಶ ಮೊದಲು ಅನ್ನುವ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿರುವವರಾಗಿದ್ದರೆ ಇಂತಹ ಸೋಲು ಎದುರಾಗುತ್ತಿರಲಿಲ್ಲ. ಕೇವಲ ಸಂವಿಧಾನದ ಪ್ರತಿ ಕೈಯ್ಯಲ್ಲಿ ಹಿಡಿದು ಓಡಾಡಿದರೆ ಸಾಲದು. ತಮ್ಮ ವಯಕ್ತಿಕ ಸ್ವಾರ್ಥ, ಅಹಂಕಾರಗಳನ್ನು ಬದಿಗೊತ್ತಿ ಸಮ ಸಮಾಜದಲ್ಲಿ ನಂಬಿಕೆ ಇಟ್ಟಿರುವ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುಂದೆ ಸಾಗಬೇಕು. ಇಲ್ಲವಾದರೆ ಭಾರತ ಫ್ಯಾಸಿಸ್ಟ್ ಸರ್ವಾಧಿಕಾರ ಆಡಳಿತದ ರಾಷ್ಟ್ರವಾಗುವ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ.




