ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ವೈಖರಿ ನಾಚಿಕೆಗೇಡಿನದು

2 years ago

1980ರಿಂದ ಸತತವಾಗಿ ಎಂಟು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆ ಆಗಿರುವ ಸಭಾಪತಿಗಳಾಗಿರುವ ಬಸವರಾಜ್ ಹೊರಟ್ಟಿಯವರನ್ನು ಭೇಟಿ ಮಾಡಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವಂತಹ ಮತ್ತು ನಡೆದಂತಹ ಕೆಲವು ಘಟನೆಗಳ ಬಗ್ಗೆ ಪ್ರಸ್ತಾಪಿಸಿದಾಗ ಅವರು ಸಹ ಅತ್ಯಂತ ಬೇಸರದಿಂದ ನಮ್ಮಂತವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದೇವೆ ಎಂದು ಹೇಳಿಕೊಳ್ಳಲು ಈಗ ನಮಗೂ ನಾಚಿಕೆಯಾಗುತ್ತಿದೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಾ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಬಳಕೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ವಿಧಾನ ಪರಿಷತ್ತಿನ ಸದಸ್ಯತ್ವಕ್ಕಾಗಿ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಕ್ಕೆ ಚುನಾವಣೆಗಳು ನಡೆಯುತ್ತಿವೆ. ಪ್ರಥಮ ಬಾರಿಗೆ 1958ರಲ್ಲಿ ಈ ಕ್ಷೇತ್ರಗಳು ಸ್ಥಾಪನೆ ಆಗಿದೆ. ಕಳೆದ ಒಂದು ದಶಕದ ತನಕ ಇಲ್ಲಿ ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಶಿಕ್ಷಕರಾಗಿರುತ್ತಿದ್ದರು, ಇಲ್ಲವೇ ಸಾರ್ವಜನಿಕ ಜೀವನದಲ್ಲಿ ಪ್ರಮುಖವಾದಂತಹ ಪತ್ರವನ್ನು ವಹಿಸಿದಂತಹ ಗೌರವಾನ್ವಿತ ವ್ಯಕ್ತಿಗಳಾಗಿರುತ್ತಿದ್ದರು. ಅವರು ಕೇವಲ ಮತದಾರರನ್ನ ನೋಂದಾಯಿಸಿ ಮನವಿ ಪತ್ರವನ್ನು ನೀಡಿ ತಮ್ಮ ಸೇವೆ ಮತ್ತು ಅನುಭವದ ಆಧಾರದ ಮೇಲೆ ಆದ್ಯತೆ ನೀಡಬೇಕೆಂದು ಕೋರಿಕೊಳ್ಳುತ್ತಿದ್ದರು.

ಮತದಾರರು ಸಹ ಅದೇ ರೀತಿಯಲ್ಲಿ ಇವರಿಗೆ ಸ್ಪಂದಿಸುತ್ತಾ ಯಾವುದೇ ರೀತಿಯ ಹಣದ ಪ್ರಭಾವವಿಲ್ಲದೆ ಜಾತಿಯ ಸೋಂಕು ಇಲ್ಲದೆ ಯೋಗ್ಯರನ್ನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಬಸವರಾಜ್ ಹೊರಟ್ಟಿರವರು ಎಂಟು ಬಾರಿ ಗೆದ್ದಿರುವುದು, ಈ ಹಿಂದೆ ವಿ ಎಸ್ ಕೃಷ್ಣ ಅಯ್ಯರ್, ಗುಂಡಯ್ಯ ಶೆಟ್ಟರು, ಶಂಕರ್ ಮೂರ್ತಿ, ಡಾ. ತಂಗಾ ಅವರು ಡಾ. ಎಂಪಿ ನಾಡಗೌಡ, ಮಧುಸೂದನ್, ಪೂಜಾರವರು, ಬಸವರಾಜ್ ರವರು ಹೀಗೆ ಅನೇಕರ ಹೆಸರುಗಳನ್ನ ಉದಾಹರಣೆಯಾಗಿ ಕೊಡಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಚುನಾವಣೆ ನಾಚಿಕೆ ಬರುವ ರೀತಿಯಲ್ಲಿ ನಡೆಯುತ್ತಿದೆ. ಮತದಾರ ಅನೇಕ ಸಂದರ್ಭದಲ್ಲಿ ಹಣದ ಪ್ರಭಾವಕ್ಕೆ ಗುರಿಯಾಗುತ್ತಿದ್ದಾರೆ. ಇಲ್ಲವೇ ಕ್ಷಣಿಕ ಆಮಿಶಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿಯೊಂದು ಮತಕ್ಕೆ 2,000 ದಿಂದ 10,000 ತನಕ ನಿಗದಿ ಮಾಡುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಸಾರ್ವಜನಿಕ ಚುನಾವಣೆಗಳಲ್ಲಿ ಬಡವರು ಹಣವನ್ನು ಬಯಸುತ್ತಾರೆ ಎನ್ನುವ ಮಾತಿದೆ. ಆದರೆ ಬಹಳಷ್ಟು ಬಡವರು ಸ್ವಾಭಿಮಾನದಿಂದ ಇಂತಹ ಸಂದರ್ಭದಲ್ಲಿ ತಮ್ಮ ನೈತಿಕತೆಯನ್ನು ಪ್ರದರ್ಶಿಸಿ ದೊಡ್ಡತನವನ್ನು ತೋರಿದ್ದಾರೆ. ಅದೇ ರೀತಿಯಲ್ಲಿ ಶಿಕ್ಷಕರು ಮತ್ತು ಪದವೀಧರರು ಬಹಳಷ್ಟು ಮಂದಿ ಯಾವುದೇ ರೀತಿಯ ಆಮಿಶಗಳಿಗೆ ಬಲಿಯಾಗದೆ ತಮ್ಮ ಮತವನ್ನ ಸರಿಯಾದ ರೀತಿಯಲ್ಲಿ ಯೋಗ್ಯರಿಗೆ ಚಲಾವಣೆಯನ್ನು ಮಾಡುವ ಮನಸ್ಥಿತಿಯವರು ಸಾಕಷ್ಟು ಮಂದಿ ಇದ್ದಾರೆ. ಆದರೂ ದುರ್ಬಲ ಮನಸ್ಸಿನ ಮತದಾರರನ್ನ ಗುರಿಯನ್ನಾಗಿಸಿಕೊಂಡು ಅವರಿಗೆ ಹಣವನ್ನ ಕೊಟ್ಟು ಮತವನ್ನು ಪಡೆಯುವಂತಹ ತಂತ್ರಗಾರಿಕೆಯನ್ನ ಅನುಸರಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ವಿಧಾನ ಪರಿಷತ್ತು ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಸಲಹೆಗಳನ್ನ ನೀಡಬಲ್ಲ ಮಾರ್ಗದರ್ಶನ ಮಾಡಬಲ್ಲ ಅತ್ಯಂತ ಸಜ್ಜನರು ಸಂಭವಿಸಲು ಮತ್ತು ಮೇಧಾವಿಗಳಿಂದ ತುಂಬಿರುವಂತಹ ವೇದಿಕೆ ಎಂಬ ಅಭಿಪ್ರಾಯವಿದೆ. ಇಲ್ಲಿ ಹಣದ ಬಲದಿಂದ ಜಾತಿಯ ಬಲದಿಂದ ಆಯ್ಕೆಯಾಗಿ ಬರುವುದಾದರೆ ಇಂತಹ ಚುನಾವಣೆಗಳಿಗೆ ಬಂಡವಾಳವನ್ನು ಹಾಕುವವರು ಸಹ ಬೇರೆ ಬೇರೆ ರೀತಿಯಲ್ಲಿ ಹಣವನ್ನ ಸಂಪಾದನೆ ಮಾಡುವವರಾಗಿರುತ್ತಾರೆ. ಇಂತಹ ವ್ಯಕ್ತಿಗಳಿಂದ ವಿಧಾನಪರಿಷತ್ತು ಯಾವ ಗುಣಮಟ್ಟದ ಚರ್ಚೆಯನ್ನ ನಿರೀಕ್ಷಿಸಲು ಸಾಧ್ಯವಿದೆ?

ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಲ್ಲಿನ ಹಣದ ಪ್ರಭಾವವನ್ನ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಸಭ್ಯರು ಯಾರು ಚುನಾವಣೆಗೆ ಬರಲು ಸಾಧ್ಯವೇ ಇಲ್ಲ. ಬಂಡವಾಳ ಶಾಹಿಗಳು ಮಾತ್ರವೇ ಇಂತಹ ಚುನಾವಣೆಗಳಲ್ಲಿ ಆಯ್ಕೆಯಾಗಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಸಭಾಪತಿಗಳು ಒಂದು ಗಂಭೀರವಾದಂತಹ ಚರ್ಚೆಯನ್ನ ವಿಧಾನ ಪರಿಷತ್ತಿನಲ್ಲಿ ಆದರೂ ಸರಿಯೇ ಇಲ್ಲವೇ ಸಾರ್ವಜನಿಕ ವೇದಿಕೆಗಳಲ್ಲಿ ಆರಂಭಿಸಬೇಕಾಗಿದೆ. ಮತದಾರರಲ್ಲಿ ಜಾಗೃತಿಯನ್ನು ಉಂಟು ಮಾಡಬೇಕಾಗಿದೆ. ಇಲ್ಲದಿದ್ದರೆ ಇಂತಹ ಕ್ಷೇತ್ರಗಳ ಅವಶ್ಯಕತೆಯಾದರು ಇದೆಯೇ ಎನ್ನುವ ಪ್ರಶ್ನೆ ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳನ್ನ ಬಯಸುವ ಜನರಿಗೆ ಕಾಡುತ್ತದೆ.

ಚುನಾವಣೆಗೆ ನಿಂತ ಅಭ್ಯರ್ಥಿಗಳು ತಾವು ಯಾವ ಕ್ಷೇತ್ರಕ್ಕೆ ನಿಂತಿದ್ದೇವೆ? ಯಾವ ಪ್ರತಿನಿಧಿ ಆಗುತ್ತಿದ್ದೇವೆ ಎನ್ನುವಂತಹ ಕಲ್ಪನೆಯಾದರು ಇರಬೇಕು. ಅದೇ ರೀತಿಯಲ್ಲಿ ಲಕ್ಷಾಂತರ ಮಕ್ಕಳಿಗೆ ಮಾದರಿಯಾಗ ಬೇಕಾಗಿರುವ ಶಿಕ್ಷಕರ ಪೈಕಿ ಕೆಲವರು ಯಾರೋ ಮಾಡುವಂತಹ ಇಂತಹ ಕೃತ್ಯಗಳಿಗೆ ಇಡೀ ಶಿಕ್ಷಕ ಸಮುದಾಯವೇ ತಲೆ ಬಾಗಿಸಿ ನಿಲ್ಲಬೇಕಾಗುತ್ತದೆ. ಆದುದರಿಂದ ದಯಮಾಡಿ ಶಿಕ್ಷಕ ಬಂಧುಗಳು ಮತ್ತು ಪದವೀಧರ ಬಂಧುಗಳು ನಿಮ್ಮ ಜವಾಬ್ದಾರಿಯನ್ನು ಅರಿತು ಆಗುತ್ತಿರುವಂತಹ ಅನಾಹುತಗಳನ್ನು ತಪ್ಪಿಸಿ ಚುನಾವಣೆ ವಿಚಾರಗಳ ಮೇಲೆ ನಡೆಯಬೇಕು ಮತ್ತು ವ್ಯಕ್ತಿತ್ವಗಳ ಮೇಲೆ ನಿರ್ಧಾರಗಳಾಗಬೇಕು.

ಒಟ್ಟಾರೆಯಾಗಿ ಒಂದೊಂದು ಮತಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಗಳಿಸುವುದಾದರೆ ಕೋಟಿ ಕೋಟಿ ಲೆಕ್ಕದಲ್ಲಿ ಹಣವನ್ನ ಖರ್ಚು ಮಾಡಿ ಗೆಲ್ಲುವವರ ಮುಂದೆ ಮುಂದಿನ ದಿನಗಳಲ್ಲಿ ಹೊರಟ್ಟಿರವರು ಸಹ ಚುನಾವಣೆಗೆ ನಿಲ್ಲುವ ವಿಚಾರದಲ್ಲಿ 10 ಬಾರಿ ಯೋಚಿಸುವಂತಹ ದಿನಗಳು ಬರಬಹುದು. ಒಂದೊಮ್ಮೆ ಶಾಂತವೇರಿ ಗೋಪಾಲಗೌಡರು ಬದುಕಿದ್ದರೆ ಚುನಾವಣೆಯ ಖರ್ಚಿನ ಲೆಕ್ಕವನ್ನು ನೋಡಿ ಅದೆಷ್ಟು ಸಿಟ್ಟಾಗುತ್ತಿದ್ದರು ಕಲ್ಪನೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply