ಮೌಢ್ಯದಿಂದ ಹೊರಬಂದು ನೆಮ್ಮದಿಯಿಂದ ಬದುಕಿ: ಸತೀಶ್ ಜಾರಕಿಹೊಳಿ

5 years ago

ಬೆಳಗಾವಿ: ಮೌಢ್ಯದಿಂದ ಹೊರಬಂದು, ನೆಮ್ಮದಿಯಿಂದ ಬದುಕಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕರೆ ನೀಡಿದರು.

ಯರಗಟ್ಟಿಯ ಶಾಂತಿಧಾಮ ಸ್ಮಶಾನದಲ್ಲಿ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಚಿಂತನಗೋಷ್ಠಿ ಹಾಗೂ ನೂತನ ವಾಹನ ಚಾಲನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಢ್ಯದ ಆಚರಣೆ ನಡೆಯುತ್ತಿವೆ. ಸುಮಾರು 5 ಸಾವಿರ ವರ್ಷಗಳಿಂದಲೂ ಇದು ಗೊತ್ತುಗುರಿಯಿಲ್ಲದೇ ನಡೆದುಕೊಂಡು ಬಂದಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರು ಜನರಲ್ಲಿನ ಮೌಢ್ಯಗಳನ್ನು ಹೊಡೆದೋಡಿಸಲು ಅನೇಕ ರೀತಿಯಲ್ಲಿ ಶ್ರಮಿಸಿದ್ದಾರೆ. ಜನ ಈಗಲಾದರು ಎಚ್ಚೆತ್ತು ಮೌಢ್ಯಗಳಿಂದ ಹೊರಬರಬೇಕು ಎಂದರು.

ಪೂಜೆ, ಪುನಸ್ಕಾರದಿಂದ ಎಲ್ಲವೂ ಸಾಧ್ಯವಾಗುವುದಿಲ್ಲ. ಹಾಗೇನಾದರು ಆಗುವುದಿದ್ದರೆ ಎಲ್ಲರೂ ತಾವು ಮಾಡುವ ಕಾಯಕ ಬಿಟ್ಟು ಅದನ್ನೇ ಮಾಡುತ್ತಾ ಕೂರಬೇಕಾಗಿತ್ತು. ನಂಬಿಕೆಗಳು ಮೂಢನಂಬಿಕೆಗಳಾಗಿ ಪರಿವರ್ತನೆ ಆಗಿವೆ ಎಂದರು.

ಮಕ್ಕಳು ತಿಂಡಿ ತಿನ್ನಲು ಹಣ ಕೊಡಲು ಹಿಂದೇಟು ಹಾಕುವ ನಾವು, ದೇವರ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡುತ್ತೇವೆ. ದೇವರು ಹೀಗೆ ಮಾಡಿ ಎಂದು ನಮಗೆ ಹೇಳುವುದಿಲ್ಲ. ಮಧ್ಯವರ್ತಿಗಳ ಮಾತು ಕೇಳಿ ಜನ ದಾರಿ ತಪ್ಪುತ್ತಿದ್ದಾರೆ ಎಂದರು.

ಚುನಾವಣೆಗೆ ಒಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಎಲ್ಲರೂ ದೇವಸ್ಥಾನ, ಜ್ಯೋತಿಷಿಗಳ ಬಳಿ ಹೋಗುತ್ತಾರೆ. ಎಲ್ಲರಿಗೂ ಗೆಲ್ಲುತ್ತೀರೆಂದೇ ಅವರು ಹೇಳಿರುತ್ತಾರೆ. ಸೋತ ನಂತರ ನೀವು ಮಾಡಿದ ಪೂಜೆಯಲ್ಲಿ ದೋಷವಿದೆ ಎನ್ನುತ್ತಾರೆ. ಪೂಜೆ, ಪುನಸ್ಕಾರ, ಜ್ಯೋತಿಷ್ಯದಿಂದ ಗೆಲುವು ಸಾಧ್ಯವಿಲ್ಲ. ಜನ ನಮ್ಮನ್ನು, ನಮ್ಮ ಕೆಲಸವನ್ನು ಮೆಚ್ಚಿ ಮತ ನೀಡಿದರೆ ಮಾತ್ರ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಮೌಢ್ಯದ ವಿರುದ್ಧ ನಿರಂತರ ಹೋರಾಡಿದ್ದರು. ಅವರ ವಿಚಾರಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲು, ಹಾಸ್ಟೆಲ್ ಗಳಲ್ಲಿ ವಾಸಿಸುವ ಅಥವಾ ಬಡ ಮಕ್ಕಳಿಗೆ ಹಾಲು ನೀಡಬೇಕು ಎಂದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಕಾರಿಗೆ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿಯೇ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಇದೇ ವೇಳೆ ಮೌಢ್ಯನಿವಾರಣೆಗೆ ಶ್ರಮಿಸುತ್ತಿರುವ ಸತೀಶ್ ಜಾರಕಿಹೊಳಿಯವರನ್ನು ಸ್ಥಳೀಯರು ಸನ್ಮಾನಿಸಿದರು.

ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಚರಂತೇಶ್ವರ ಮಠದ ಶರಣಬಸವ ದೇವರು, ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು,  ಬಿಲಿವರ್ಸ್ ಈಸ್ಟರ್ನ್ ಚರ್ಚ್ ನ ರೆವರೆಂಡ್ ಫಾದರ್ ಚನ್ನಪ್ಪ ಎಲ್.ಜಿ., ಮರಖದ್ ಮಸೀದಿಯ ಹಾಫೀಜ್ ಲಿಯಾಕತ್ ಬಾಗವಾನ್, ಮುನವಳ್ಳಿಯ ಮೊಹತಾಮ್ ಮದರಸಾದ ಹಾಫೀಜ್ ಅಬ್ದುಲ್ ಮಜೀದ್ ಬೈರಕದಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply