ಬಜೆಟ್ ಮಂಡಿಸಲು ಬಸವರಾಜ ಬೊಮ್ಮಾಯಿ ಸಿದ್ಧತೆ

3 years ago

ಬೆಂಗಳೂರು: ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಬರುವ ಫೆಬ್ರವರಿ 17ರಂದು ಮಂಡನೆಯಾಗಲಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಹಣಕಾಸು ಖಾತೆಯನ್ನು ಹೊಂದಿರುವ ಬಸವರಾಜ ಬೊಮ್ಮಾಯಿ ಈ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಸೇರಿ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ತಿಂಗಳ 2ನೇ ವಾರದಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನದ ಮೂಲಕ ಪ್ರಸಕ್ತ ವರ್ಷದ ಕಾರ್ಯ ಕಲಾಪಗಳಿಗೆ ಚಾಲನೆ ನೀಡಲಾಗುತಿತ್ತು. ಅಲ್ಪ ಕಾಲಾವಧಿಯ ಬಿಡುವಿನ ನಂತರ ಬಜೆಟ್ ಅಧಿವೇಶನ ಆರಂಭವಾಗುತಿತ್ತು.
ಆದರೆ ಕಳೆದೆರಡು ವರ್ಷಗಳಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿರುವ ಬಿಜೆಪಿ ಸರ್ಕಾರ, ಜಂಟಿ ಅಧಿವೇಶನ ಮತ್ತು ಬಜೆಟ್ ಮಂಡನೆಯನ್ನು ಏಕಕಾಲದಲ್ಲಿ ನಡೆಸುತ್ತಿದೆ. ಈ ಬಾರಿಯೂ ಅದೇ ರೀತಿ ನಡೆಯುತ್ತಿದ್ದು, ಫೆಬ್ರವರಿ 16ರಂದು ಗುರುವಾರ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಸಿಎಂ ಬೊಮ್ಮಾಯಿ ಶುಕ್ರವಾರ ಬಜೆಟ್ ಮಂಡಿಸಲಿದ್ದು, ನಂತರ ಸೋಮವಾರದಿಂದ ಬಜೆಟ್ ಮೇಲೆ ಚರ್ಚೆ ಆರಂಭವಾಗಲಿದೆ.
ತಮ್ಮ ಕನಸಿನ ಬಜೆಟ್ ಮಂಡಿಸಲು ಸಿ ಎಂ ಬೊಮ್ಮಾಯಿ ಸಿದ್ದತೆ ನಡೆಸಿದ್ದಾರೆ. ಬಜೆಟ್ ಸಿದ್ದತೆಗಾಗಿ ಬರುವ ಸೋಮವಾರದ ನಂತರ ಇಲಾಖಾವಾರು ಅಧಿಕಾರಿಗಳ ಸಭೆ ಮತ್ತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಸಹಜವಾಗಿ ಮತದಾರರ ಮನಗೆಲ್ಲುವ ಆಕರ್ಷಕ ಯೋಜನೆಗಳನ್ನು ಘೋಷಿಸುವ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಇದ್ದಾರೆ.
ಬಡವರು, ಮಹಿಳೆಯರು ಹಾಗೂ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಈ ಬಾರಿಯ ಬಜೆಟ್ನಲ್ಲಿ ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಿಸುವ ಘೋಷಣೆ ಮಾಡಲಿದ್ದಾರೆ. ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಚಿಸುವವರಿಗೆ 50,000 ರೂ. ಧನಸಹಾಯ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಆ ಮೂಲಕ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದ್ದು, ಉಳಿದಂತೆ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ ಬಿಡುಗಡೆ ಮಾಡಲಿದ್ದಾರೆ, ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ಏಳನೇ ವೇತನವನ್ನು ಘೋಷಿಸುವ ಚಿಂತನೆ ಇದೆ ಎಂದು ತಿಳಿದುಬಂದಿದೆ.

Leave a Reply