ಗ್ಯಾರಂಟಿಯ ವಾರಂಟಿ ಮುಗಿಯುವ ಸಾಧ್ಯತೆ ಹೆಚ್ಚಾಗಿದೆ!: ಸಿ.ಎನ್.ಅಶ್ವತ್ಥ ನಾರಾಯಣ

2 years ago

ಬೆಂಗಳೂರು: ನಮ್ಮ ನಿಮ್ಮೆಲ್ಲರ ಊಹೆ ಸರಿಯಾಗಿದೆ, ಗ್ಯಾರಂಟಿಯ ವಾರಂಟಿ ಮುಗಿಯುವ ಸಾಧ್ಯತೆ ಹೆಚ್ಚಾಗಿದೆ! ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ವಿಧಾನಸಭಾ ಚುನಾವಣೆಗೂ ಮುನ್ನ ರೋಷಾವೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸದೇ ಜನತೆಯ ಕಣ್ಣಿಗೆ ಸುಣ್ಣ ಬಳಿಯುವ ವಿಫಲ ಯತ್ನ ನಡೆಸಿತ್ತು ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮೋಸದಾಟದ ಮರ್ಮವನ್ನು ಅರಿತ ರಾಜ್ಯದ ಜನತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಚುನಾವಣೆಗೆ ಸೀಮಿತವಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಈಗ ಕಾಂಗ್ರೆಸ್‌ ಸಚಿವರೇ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

“ಗ್ಯಾರಂಟಿ” ಹೆಸರಲ್ಲಿ ಕಾಂಗ್ರೆಸ್‌ ಸರ್ಕಾರ ಕರ್ನಾಟಕದ ಜನತೆಗೆ ಮಾಡಿದ ಮೋಸ ಒಂದೆರಡಲ್ಲ!

  • “ಗ್ಯಾರಂಟಿ” ನೆಪವೊಡ್ಡಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ ಎಂದರು
  • “ಗ್ಯಾರಂಟಿ” ನೆಪವೊಡ್ಡಿ ಜನಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಬಿಟ್ಟರು
  • “ಗ್ಯಾರಂಟಿ” ನೆಪವೊಡ್ಡಿ ರೈತರಿಗೆ ಬರ ಪರಿಹಾರ ನೀಡದೇ ಸತಾಯಿಸಿದರು
  • “ಗ್ಯಾರಂಟಿ” ನೆಪವೊಡ್ಡಿ ಬೆಲೆ ಏರಿಕೆ ಮಾಡಿದರು
  • “ಗ್ಯಾರಂಟಿ” ನೆಪವೊಡ್ಡಿ ನಿಗಮ ಮಂಡಳಿಗಳಿಗೆ ಅನುದಾನ ನೀಡದೇ ಸುಮ್ಮನಾದರು
  • “ಗ್ಯಾರಂಟಿ” ನೆಪವೊಡ್ಡಿ ಸ್ವಪಕ್ಷದ ಶಾಸಕರ ಕ್ಷೇತ್ರಗಳಿಗೇ ಅನುದಾನ ನೀಡಲ್ಲ ಎಂದರು ಎಂದಿದ್ದಾರೆ.

“ಗ್ಯಾರಂಟಿ” ನೆಪವೊಡ್ಡಿ ನಾಡಿನ ಜನತೆಯನ್ನು ನಡು ನೀರಿನಲ್ಲಿ ಕೈಬಿಟ್ಟ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಸಿಎಂ ಪುತ್ರನ ಅಧಿಕಾರ ಹಸ್ತಕ್ಷೇಪ, ಎಐಸಿಸಿ ಅಧ್ಯಕ್ಷರ ಪುತ್ರನ ಸರ್ವಾಧಿಕಾರ, ನಿಗಮ ಮಂಡಳಿಗಳಲ್ಲಿ ಕೋಟಿ ಕೋಟಿ ಅವ್ಯವಹಾರ, ನಾಡಿನ ಜನತೆಗೆ ದ್ರೋಹ ಬಗೆದು ನೆರೆ ರಾಜ್ಯದ ಇಂಡಿ ಒಕ್ಕೂಟದ ಸದಸ್ಯರ ಮನವೊಲಿಕೆ, ಮತಾಂಧರ ಓಲೈಕೆಗಳು ಮಾತ್ರ ಎಗ್ಗಿಲ್ಲದೇ ನಡೆದವು! ಎಂದು ಆರೋಪಿಸಿದ್ದಾರೆ.

ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸಚಿವರೇ ರಾಜಿನಾಮೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಕೋಟಿ ಕೋಟಿ ಲೂಟಿ ಮಾಡಿ ಕೋಟೆಬಾಗಿಲು ಹಾಕುವ ನಾಟಕವಾಡುತ್ತಿರುವ ಕಾಂಗ್ರೆಸ್ಸಗರ ಕಳ್ಳಾಟ ನಿಲ್ಲವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.

Leave a Reply