ಬೆಂಗಳೂರು: ಆಂದ್ರಪ್ರದೇಶ, ಕೇರಳದಲ್ಲಿ ವಿಶೇಷ ನೆರವಿನ ಪ್ಯಾಕೇಜ್ ನೀಡಿದ್ದಾರೆ, ಅದೇ ರೀತಿ ನಮ್ಮ ರಾಜ್ಯದಲ್ಲೂ ಲಾಕ್ ಡೌನ್ ಅವಧಿಯಲ್ಲಿ ದುಡಿಯುವ ವರ್ಗ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಮ್ಮಿಕೊಂಡಿದ್ದ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಅವರು ಹಾಜರಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಸೋಂಕು ಪರೀಕ್ಷೆ ಹೆಚ್ಚಾದರೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತದೆ, ಆಗ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದೆ. ಇದು ಸರ್ಕಾರವೇ ಜನರನ್ನು ಸಾವಿನ ದವಡೆಗೆ ತಳ್ಳಿದಂತೆ ಎಂದು ಅವರು ಆರೋಪಿಸಿದ್ದಾರೆ.
ನಿತ್ಯ 50,000 ಪಾಸಿಟಿವ್ ಕೇಸ್ ಗಳು ದಾಖಲಾಗ್ತಿವೆ. ಹೀಗಾಗಿ ಎರಡು ವಾರ ಸಂಪೂರ್ಣ ಲಾಕ್ ಡೌನ್ ಮಾಡಬೇಕು. ಜನರಿಗೆ ಆರ್ಥಿಕ ನೆರವು ಮತ್ತು ಅಗತ್ಯ ದಿನಸಿ ವಸ್ತುಗಳನ್ನು ಸರ್ಕಾರವೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹೈಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಈವರೆಗೆ ನಮ್ಮ ರಾಜ್ಯಕ್ಕೆ ಅಗತ್ಯ ಪ್ರಮಾಣದ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಆಕ್ಸಿಜನ್ ನೀಡದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯದ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾದ ಬಳಿಕ ಕೋರ್ಟ್ ಮಧ್ಯೆ ಪ್ರವೇಶಿಸಿದೆ, ಅಂದರೆ ದೇಶದಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದರ್ಥ. ಈವರೆಗೆ ಸಂಭವಿಸಿರುವ ಸಾವು, ನೋವುಗಳಿಗೆ ಬಿಜೆಪಿ ಪಕ್ಷವೇ ನೇರಹೊಣೆ ಎಂದಿದ್ದಾರೆ.
ನಾನು ನಮ್ಮ ಶಾಸಕರೊಂದಿಗೆ ಮಾತನಾಡಿದ್ದೇನೆ. ಕೆಲವರು ವೈದ್ಯಕೀಯ ನೆರವು ನೀಡುತ್ತಿದ್ದಾರೆ, ಇನ್ನು ಕೆಲವರು ಆಹಾರ ಧಾನ್ಯ, ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಸಹಕಾರ ಸದಾ ಇರುತ್ತೆ. ಆದರೆ ಆಸ್ಪತ್ರೆ, ಅಂಬುಲೆನ್ಸ್, ಆಕ್ಸಿಜನ್ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.




