ಬೆಂಗಳೂರು: ಬಿ.ಜೆ.ಪಿ. ಸರ್ಕಾರದ ಅಣತಿಯಂತೆ ಇ.ಡಿ. ಮತ್ತು ಐ.ಟಿ. ಇಲಾಖೆ ವರ್ತಿಸುತ್ತಿದೆ ಎಂದು ಮಾಜಿ ಮೇಯರ್ ಜಿ.ಪದ್ಮಾವತಿ ಆರೋಪಿಸಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಂಜುನಾಥನಗರ ಮುಖ್ಯರಸ್ತೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿಚಾರಣೆ ಖಂಡಿಸಿ, ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತಾಡಿದ ಅವರು, ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕಬಹುದೆಂದು ರಾಜಕೀಯ ಕ್ಷೇತ್ರದಲ್ಲಿ ಅಡ್ಡ ದಾರಿ ಹಿಡಿದಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಮಾರಕ ಆಡಳಿತ ಮತ್ತು ಪ್ರತಿಭಟನೆ, ಹೋರಾಟಗಾರರ ಹಕ್ಕನ್ನು ಹತ್ತಿಕ್ಕುವ ಕಾರ್ಯ ಬಿ.ಜೆ.ಪಿ. ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದ್ದರಿಂದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ರಾಜಾಜಿನಗರ ಬ್ಲಾಕ್ ಸಮಿತಿ ಅಧ್ಯಕ್ಷ ಟಿ.ಎನ್.ರಾಧಾಕೃಷ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುಳ ವಿಜಯಕುಮಾರ್, ವಿಜಯಕುಮಾರ್, ರಾಜಾಜಿನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಲ್ಲವಿ ಪ್ರಭು, ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




