ದೆಹಲಿ: ಜಾತಿವಾರು ಜನಗಣತಿ ಕುರಿತಂತೆ ರಾಜ್ಯದ ಪ್ರಭಾವಿ ಸಮುದಾಯಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸೇರಿದಂತೆ ಇತರೆ ಸಮುದಾಯದ ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದೆ. ರಾಜ್ಯದಲ್ಲಿ ಮತ್ತೊಮ್ಮೆ ಜಾತಿವಾರು ಜನಗಣತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಜಾತಿವಾರು ಜನಗಣತಿ ಎಂದೆ ಗುರುತಿಸಲ್ಪಡುತ್ತಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಾದ ವರದಿ ಅನುಷ್ಠಾನಕ್ಕೆ ಈ ತಿಂಗಳ 12ರಂದು ವಿಶೇಷ ಸಂಪುಟ ಸಭೆ ಕರೆದಿರುವ ಬೆನ್ನಲ್ಲೇ ಹೈಕಮಾಂಡ್ ಈ ಸೂಚನೆ ನೀಡಿದೆ.
ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನ ಕುರಿತಂತೆ ಚರ್ಚಿಸಲು ವಿಶೇಷ ಸಂಪುಟ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ ಹೈಕಮಾಂಡ್ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿತು.
ಈ ಸಭೆ ಬಳಿಕ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿವಾರು ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದರು.
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಆರ್ಥಿಕ ಗಣತಿಯನ್ನು ಪಕ್ಷ ತಾತ್ವಿಕವಾಗಿ ಒಪ್ಪಿಕೊಂಡಿದೆ. ಜೂನ್ 12 ರಂದು ಈ ವರದಿಯ ಅನುಷ್ಠಾನ ಕುರಿತಂತೆ ವಿಶೇಷ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಹೈಕಮಾಂಡ್ ಬದ್ಧವಾಗಿದೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷೆಗೆ 10 ವರ್ಷವಾಗಿದೆ. ಹೀಗಾಗಿ ಇದರಲ್ಲಿನ ಜಾತಿವಾರು ಜನಸಂಖ್ಯೆ, ಸಮರ್ಪಕವಾಗಿಲ್ಲ ಎಂದು ಹಲವಾರು ಸಂಘಟನೆಗಳು ಮತ್ತು ನಾಯಕರು ಅಪಸ್ವರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೈಕಮಾಂಡ್ ಸಹಮತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜಾತಿವಾರು ಜನಸಂಖ್ಯೆಯ ಬಗ್ಗೆ ಮರುಗಣತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ ಎಂದರು.
ಜಾತಿವಾರು ಜನಸಂಖ್ಯೆ ಕುರಿತು ಹಲವು ಸಮುದಾಯಗಳಲ್ಲಿ ಉಂಟಾಗಿರುವ ಅಪನಂಬಿಕೆಯನ್ನು ನಿವಾರಿಸುವ ದೃಷ್ಟಿಯಿಂದ ಇಂತಹ ಗಣತಿಯ ಅಗತ್ಯವಿದೆ. ಇದನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ್ದು, ಇದಕ್ಕೆ ಸಿಎಂ ಮತ್ತು ಡಿಸಿಎಂ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕಾಂತರಾಜು ನೇತೃತ್ವದಲ್ಲಿ ನಡೆಸಿದ ಆರ್ಥಿಕ ಸಾಮಾಜಿಕ ಸಮೀಕ್ಷೆಯಲ್ಲಿ ಜಾತಿವಾರು ಜನಗಣತಿ ಕುರಿತಂತೆ ನೀಡಲಾಗಿರುವ ಅಂಕಿ ಅಂಶಗಳ ಬಗ್ಗೆ ರಾಜ್ಯದ ಪ್ರಭಾವಿ ಸಮುದಾಯಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಗಣತಿಯ ಆಧಾರದಲ್ಲಿ ವರದಿ ಅನುಷ್ಠಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಲಿಂಗಾಯತರು ತೀವ್ರ ವಿರೋಧ ವ್ಯಕ್ತಪಡಿಸಿದರೆ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗರು ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವರದಿಯ ಅನುಸಾರ ಕುರಿತಂತೆ ರಾಜ್ಯ ಸರ್ಕಾರದಲ್ಲಿ ದೊಡ್ಡ ಮಟ್ಟದ ಅಪಸ್ವರ ಉಂಟಾಗಿದೆ. ವರದಿಯ ಅನುಷ್ಠಾನ ಕುರಿತಂತೆ ಎರಡು ಬಾರಿ ಸಂಪುಟ ವಿಶೇಷ ಸಭೆ ನಡೆಸಿದರೂ ಕೂಡ ಒಮ್ಮತ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 12ರಂದು ಮತ್ತೊಮ್ಮೆ ಸಂಪುಟ ವಿಶೇಷತೆ ಕರೆಯಲಾಗಿದೆ. ಇದರಲ್ಲಿ ವರದಿ ಅನುಷ್ಠಾನ ಕುರಿತಂತೆ ಮಹತ್ವದ ನಿರ್ಣಯ ಹೊರಬೀಳಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ. ಈ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ದೆಹಲಿಗೆ ಬಂದ ಈ ಇಬ್ಬರು ಕರ್ನಾಟಕ ಭವನದಲ್ಲಿ ಸುದೀರ್ಘ ಚರ್ಚೆ ನಡೆಸಿದರು.
ಇದಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಮತ್ತು ಸುರ್ಜೇವಾಲ ಅವರೊಂದಿಗೆ ಸುದೀರ್ಘ ಸಭೆ ನಡೆಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಜಾತಿವಾರು ಜನಗಣತಿ ವರದಿಯಲ್ಲಿನ ಜಾತಿವಾರು ಜನಸಂಖ್ಯೆ ಬಗ್ಗೆ ಹಲವಾರು ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ. ಸಂಸದರು ಮತ್ತು ಕೆಲವು ಪ್ರಭಾವಿ ನಾಯಕರು ಮಠಾಧೀಶರು ಈ ಬಗ್ಗೆ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತಿವಾರು ಜನಗಣತಿ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದ್ದು 90 ದಿನಗಳ ಒಳಗಾಗಿ ಇದು ಪೂರ್ಣಗೊಳ್ಳಲಿದೆ ಎಂದರು.
ಜಾತಿವಾರು ಜನಗಣತಿ ವಿಚಾರ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆ ಹೊರತುಪಡಿಸಿ ಬೇರೆ ಯಾವುದೇ ವಿಚಾರ ಈ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ ಎಂದರು.




