ಬೆಂಗಳೂರು: ಸರ್ಕಾರಿ ಸ್ಯಾಮ್ಯದ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡವರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು, ಇಲ್ಲವಾದರೆ ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಮರಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಆನೇಕಲ್ ವ್ಯಾಪ್ತಿಯ ಬ್ಯಾಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಿರ್ದಿಷ್ಟಾವಧಿ ಸಮಾವೇಶ ಜಾಗೃತಿ ಕಾರ್ಯಕ್ರಮವನ್ನು ಮನೆ ಮನೆಗೆ ನೀಡಿ ಸಮಾವೇಶಕ್ಕೆ ಬರುವಂತೆ ಮನವಿ ಮಾಡಿಕೊಂಡು ಮಾತಾಡಿದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೇ ತಿಂಗಳ 16ನೇ ತಾರೀಖಿನಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಮಾತಾಡಿದ ಜನಶಕ್ತಿ ಸಂಘಟನೆಯ ಗೌರಿ, 75 ವರ್ಷಗಳಿಂದ ಬಡವರು, ಕಪ್ಪು ಜನರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಅವರಿಗೆ ಇದುವರೆಗೂ ಹಕ್ಕುಪತ್ರ ವಿತರಣೆ ಮಾಡುವುದಾಗಲಿ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಲಿ ರಾಜಕೀಯ ನಾಯಕರುಗಳು ಇದುವರೆಗೂ ಮಾಡಿಲ್ಲ ಎಂದರು.
ಚುನಾವಣೆ ಬಂದಾಗ ರಾಜಕೀಯ ನಾಯಕರುಗಳಿಗೆ ಬಡವರು ನೆನಪಾಗುತ್ತಾರೆ. ಅವರು ವೋಟ್ ಮಾತ್ರ ಬೇಕು, ಅವರ ಹಕ್ಕುಗಳು ಮಾತ್ರ ಬೇಡವಾಗಿವೆ, ಹೀಗಾಗಿ ಬಡ ಜನರು ಅಭದ್ರತೆಯಿಂದ ಬದುಕುತ್ತಿದ್ದಾರೆ ಎಂದರು.
ವಕೀಲ ಪುರುಷೋತ್ತಮ್ ಮಾತನಾಡಿ, ಆನೇಕಲ್ ಮೀಸಲಾತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಜನ ಬಡವರ ಬದುಕು ನಡೆಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ಇಲ್ಲ. ಅನೇಕ ಬಾರಿ ಸರ್ಕಾರದ ಗಮನಕ್ಕೂ ತಂದರೂ ಪ್ರಯೋಜನಗಳಿಲ್ಲ. ಹೀಗಾಗಿ ಚುನಾವಣೆ ಹತ್ತಿರ ಬರುತ್ತಿದೆ. ಇನ್ನಾದರೂ ಜನ ಎಚ್ಚೆತ್ತುಕೊಂಡು ವೋಟು ಹಾಕುವುದಕ್ಕೆ ಮುಂಚೆ ಹಕ್ಕು ಪತ್ರ ಪಡೆದು ಮತದಾನ ಮಾಡಲಿ ಎಂದು ರಾಜಕೀಯ ನಾಯಕರು ವಿರುದ್ಧ ಆಕ್ರೋಶ ಹೊರಹಾಕಿದರು.
ಬ್ಯಾಗಡದನಹಳ್ಳಿ ಗ್ರಾಮಸ್ಥರು ಮುಖಂಡರು, ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.




