ಗಡಿ ವಿವಾದದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ರಾಜ್ಯದ ನೆಲ, ಜಲದ ವಿಷಯವಾಗಿ ನಮ್ಮ ಸರ್ಕಾರದ ನಿಲುವು ಅಚಲವಾಗಿದೆ.ಕರ್ನಾಟಕ- ಮಹಾರಾಷ್ಟ್ರ ನಡುವಿನ ಗಡಿ ವಿವಾದದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಳೆ ತಾವು ದೆಹಲಿಗೆ ತೆರಳುತ್ತಿದ್ದು ಅಲ್ಲಿ ರಾಜ್ಯದ ಕಾನೂನು ತಂಡಕ್ಕೆ ಕೆಲವು ದಾಖಲೆಗಳನ್ನು ನೀಡಿ ನಿನ್ನೆ ನಡೆದ ತಜ್ಞರ ಸಮಿತಿ ಸಭೆಯ ವಿವರ ತಿಳಿಸುವುದಾಗಿ ಹೇಳಿದರು.

ಅನಿವಾರ್ಯ ಕಾರಣಗಳಿಂದಾಗಿ ಇಂದು ಸರ್ವಪಕ್ಷ ಸಭೆ ನಡೆಯಲಿಲ್ಲ. ಆದರೆ, ಪ್ರತಿಪಕ್ಷ ನಾಯಕರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ ತಾವು ದೆಹಲಿಯಿಂದ ಹಿಂತಿರುಗಿ ಬಂದ ನಂತರ ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಎಂದರು.

ಮುಂದಿನ ತಿಂಗಳಲ್ಲಿ ಮಹಾರಾಷ್ಟ್ರದ ತಕರಾರು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಕೋರ್ಟ್ ಮುಂದೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲಿದ್ದು, ಅವುಗಳ ಬಗ್ಗೆ ಈಗ ಬಹಿರಂಗ ಚರ್ಚೆ ಮಾಡುವುದಿಲ್ಲ ಎಂದರು.

ನಾಳಿನ ದೆಹಲಿ ಭೇಟಿ ಸಮಯದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಇನ್ನೂ ಅವರ ಭೇಟಿಗೆ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಗುವ ಭರವಸೆ ಇದೆ. ಸದ್ಯ ಅವರು ಗುಜರಾತ್ ಚುನಾವಣೆ ಪ್ರಚಾರದಲ್ಲಿದ್ದಾರೆ. ಅವರ ಭೇಟಿಯ ನಂತರ ಸಂಪುಟ ವಿಸ್ತರಣೆ ಸೇರಿ ಪಕ್ಷ ಸಂಘಟನೆಯ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರನ್ನೂ ಭೇಟಿ ಮಾಡುತ್ತಿದ್ದು, ರಾಜ್ಯದ ಕೆಲವು ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು ಎಂದರು.

Leave a Reply