ಮೈಸೂರು: ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ, ಅಲ್ಲಿ ಪ್ರಚಾರ ರ್‍ಯಾಲಿ ನಡೆಯುತ್ತದೆ ತಾನೇ? ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ, ಲಾಕ್ ಡೌನ್ ಅಂತಾ ಜನರನ್ನು ಮತ್ತೆ ಕಂಗಾಲು ಮಾಡುತ್ತಿದ್ದೀರಿ? ಎಂದು ತಮ್ಮದೇ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.
ಜನರನ್ನು ಭೀತಿಯಲ್ಲಿ ಇಡುವುದನ್ನು ಮೊದಲು ಸರಕಾರ ನಿಲ್ಲಿಸಲಿ. ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ. ಜನರ ಜೀವನ, ಜೀವ ಎರಡು ಮುಖ್ಯ. ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯ ಬೇಕಾದರೆ ಕರ್ಫ್ಯೂ, ಲಾಕ್ ಡೌನ್ ತೆಗೆಯಿರಿ ಎಂದು ಆಗ್ರಹಿಸಿದರು.
ಸಿಎಂ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಾ ವರ್ಗದ ಜನರಿಗೂ ಕರ್ಫ್ಯೂ, ಲಾಕ್ ಡೌನ್ ನಿಂದ ತೊಂದರೆ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.




