ಅಧಿಕಾರಿ ಮೇಲೆ ಹರಿಹಾಯ್ದ ಬಿಜೆಪಿ ಶಾಸಕ ಬಿ.ಪಿ.ಹರೀಶ್

1 year ago

ದಾವಣಗೆರೆ: ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಯೊಬ್ಬರ ವಿರುದ್ಧ ಹರಿಹಾಯ್ದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ತಾಳ್ಮೆ ಕಳೆದುಕೊಂಡು ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಹರಿಹರ ಪಟ್ಟಣದಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಶಾಖಾ ಕಚೇರಿ ಉದ್ಘಾಟನೆ ಸಮಾರಂಭ ನಿಗದಿಯಾಗಿತ್ತು.ಆದರೆ ಈ ಸಮಾರಂಭಕ್ಕೆ ಪ್ರಾಧಿಕಾರದ ಸದಸ್ಯರೂ ಆಗಿರುವ ಸ್ಥಳೀಯ ಶಾಸಕ ಬಿ.ಪಿ.ಹರೀಶ್ ಅವರನ್ನು ನಗರಸಭೆ ಪೌರಾಯುಕ್ತ ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಶಾಸಕ ಕಾರ್ಯಕ್ರಮದ ಸ್ಥಳಕ್ಕೆ ಬಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪೌರಾಯುಕ್ತರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಶಾಸಕರು ಅಂದರೆ ಏನಂದುಕೊಂಡಿದ್ದೀಯಾ? ನಿನ್ನ ಆಟ ಅತಿಯಾಗಿದೆ. ‘ಧೂಡಾ’ ಅಧ್ಯಕ್ಷರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ನೀನು ಏಕೆ ಆಹ್ವಾನ ನೀಡಲಿಲ್ಲ. ಸಾಹುಕಾರನ ಮೆಚ್ಚಿಸಲು ಇಷ್ಟೆಲ್ಲಾ ಮಾಡುತ್ತಿದ್ದೀಯಾ? ಥೂ ಮುಖ ತೋರಿಸಬೇಡ ಹೋಗು ಆಕಡೆ… ಎಂದು ಕೈಯೆತ್ತಿ ಹೋದರು.

ಆಗ ತಕ್ಷಣ ಮಧ್ಯಪ್ರವೇಶಿಸಿದ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಶಾಸಕರನ್ನು ಸಮಾಧಾನಪಡಿಸಿದರು. ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.

Leave a Reply