ಕುಟುಂಬಕ್ಕೆ ತಲಾ 10,000 ರೂ. ಸಹಾಯಧನ ನೀಡಲು ಒತ್ತಾಯ
ಕೋವಿಡ್ ಮುಂದಾಳುಗಳಿಗೆ ಆಹಾರ ಕಿಟ್ ವಿತರಣೆ
ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ 10000 ರೂ. ಸಹಾಯಧನ ನೀಡಬೇಕು ಎಂದು ಬ್ಯಾಟರಾಯನಪುರ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಒತ್ತಾಯಿಸಿದರು.
ಯಲಹಂಕ ಕ್ಷೇತ್ರದ ರಾಜಾನುಕುಂಟೆ ಸರ್ಕಾರಿ ಪ್ರಾಥಮಿಕ ಶಾಲಾ ಬಯಲು ರಂಗಂಮದಿರದಲ್ಲಿ ನರಸಿಂಹಮೂರ್ತಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕೋವಿಡ್ ಸೇನಾನಿಗಳಿಗೆ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಷ್ಟದ ದಿನಗಳಲ್ಲಿ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಸುಲಿಗೆಯಲ್ಲಿ ತೊಡಗಿದೆ. ಜನರಿಗೆ ಕನಿಷ್ಟ 10000 ರೂ. ಸಹಾಯಧನ ನೀಡಬೇಕು ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಮೂಲಕ ಜನರನ್ನು ಸುಲಿಯುತ್ತಿದೆ. ಜನ ಈ ಕೂಡಲೆ ಎಚ್ಚೆತ್ತುಕೊಂಡು ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಸರ್ಕಾರ ತಾವು ಮಾಡುತ್ತಿರುವುದು ಸರಿ ಎಂದುಕೊಳ್ಳುತ್ತದೆ. ಹೀಗಾಗಿ, ಅನ್ಯಾಯದ ವಿರುದ್ದ ಹೋರಾಡಬೇಕು. ಕಾಂಗ್ರೆಸ್ ಸದಾ ಜನರ ಪರವಾಗಿರುತ್ತದೆ ಎಂದರು.
ಕೋವಿಡ್ ಲಾಕ್ ಡೌನ್ ನಿಂದಾಗಿ ಜನ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಆರೋಗ್ಯ ಸೇನಾನಿಗಳಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಅರ್ಥಪೂರ್ಣವಾದ ಕಾರ್ಯಕ್ರಮ. ರಾಷ್ಟೀಯ ಸೋನಿಯಾಗಾಂಧಿ ರಾಜ್ಯಾಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ಕರೆ ಕೊಟ್ಟಿದ್ದರು. ಅದರಂತೆ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದಾರೆ. ಉಳ್ಳವರು ಅವರವರ ಕೈಲಾದಷ್ಟು ಸಹಾಯ ಮಾಡಿದರೆ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ನೂರಾರು ಅಂಗನವಾಡಿ, ಆಶಾಕಾರ್ಯಕರ್ತರು ಸೇರಿದಂತೆ ಕೊರೋನಾ ಸೇನಾನಿಗಳಿಗೆ ಆಹಾರ ಹಾಗೂ ತರಕಾರಿ ಕಿಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜಾನುಕುಂಟೆ ಜಿ.ಪಂ.ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ಲಾವಣ್ಯ ನರಸಿಂಹಮೂರ್ತಿ, ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಪ್ಪ,ಕಾಂಗ್ರೆಸ್ ಮುಖಂಡ ಕೇಶವರಾಜಣ್ಣ, ಗ್ರಾ.ಪಂ.ಸದಸ್ಯರಾದ ನರಸಿಂಹಮೂರ್ತಿ, ಆರ್.ಟಿ.ವೆಂಕಟೇಶ್, ಯುವ ಮುಖಂಡ ಎಸ್.ಪಿ.ಪ್ರಕಾಶ್ ಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.



