ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವರಿಗೆ ಪ್ರಧಾನಿ ಮಾಡಬೇಕು ಎಂದು ಬಿಜೆಪಿ-ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಸರಿಯಿಲ್ಲ ಎಂಬುದನ್ನು ರಾಜ್ಯಸಭೆ ಚುನಾವಣಾ ಫಲಿತಾಂಶ ನೀಡಿದೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಮತದಾರರು ಹಾಗೂ ಶಾಸಕರು ಒಪ್ಪಿಕೊಳ್ಳಬೇಕು. ಅದು ಸರಿಯೇ ಅಥವಾ ಇಲ್ಲವೇ ಎಂಬುದನ್ನು ಜನ ತೀರ್ಮಾನಿಸಬೇಕು. ಈ ಫಲಿತಾಂಶ ಅದನ್ನು ಸಾಬೀತು ಪಡಿಸಿದೆ ಎಂದರು.
ಜೆಡಿಎಸ್‍ನ ಕುಪೇಂದ್ರರೆಡ್ಡಿ ಅವರನ್ನು ಗೆಲ್ಲಿಸಲು ಬಿಜೆಪಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕಿತ್ತು. ಬಾಕಿ ಉಳಿದ ಮತಗಳನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಹಾಕಿಸಬಹುದಿತ್ತು. ಆದರೆ ಬಿಜೆಪಿ ತಮ್ಮ ಅಭ್ಯರ್ಥಿಗೆ 48 ಮತಗಳನ್ನು ಹಾಕಿಸಿದೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಆಸಕ್ತಿ ವಹಿಸಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.
ಚುನಾವಣಾ ಅಭ್ಯರ್ಥಿಗಳು ಆತ್ಮಸಾಕ್ಷಿ ಮತ ಕೇಳಿದ್ದರು. ಅದರಂತೆ ಮತಗಳು ಚಲಾವಣೆಯಾಗಿವೆ. ಎಸ್ ಟಿ ಸೋಮಶೇಖರ್ ಅವರು ಯಾರ ಪರ ಮತ ಹಾಕಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆ ನೋಡಿಲ್ಲ. ಒಂದು ವೇಳೆ ಅಡ್ಡ ಮತದಾನವಾಗಿದ್ದರೆ ಅದರ ಕುರಿತು ಹೇಳಿಕೆ ನೀಡಬೇಕಿರುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್‍ನವರಿಗೆ ಆತ್ಮವೇ ಇಲ್ಲ. ಇನ್ನು ಆತ್ಮಸಾಕ್ಷಿಯ ಮತ ಎಲ್ಲಿಂದ ಬರಬೇಕು. ಜೆಡಿಎಸ್‍ನವರು ತಮ್ಮ ಗೆಲುವಿಗಾಗಿ ಬೇರೆ ಬೇರೆ ಪ್ರಯತ್ನ ಮಾಡಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ ಎಂದರು.
ಎಲ್ಲರೂ ತಾವು ಗೆಲ್ಲುವುದಕ್ಕಾಗಿಯೇ ಸ್ಧಿಸುತ್ತೇವೆ ಎನ್ನುತ್ತಾರೆ, ಸೋಲುತ್ತೇವೆ ಎಂದು ಯಾರೂ ಹೇಳುವುದಿಲ್ಲ. ಜೆಡಿಎಸ್‍ಗೆ ಅಗತ್ಯ ಸಂಖ್ಯಾಬಲದಷ್ಟು ಮತಗಳು ಇರಲಿಲ್ಲ. ಹೀಗಾಗಿ ಅಭ್ಯರ್ಥಿಯನ್ನು ಅವರು ಕಣಕ್ಕಿಳಿಸುವುದು ಅಗತ್ಯವಿರಲಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದಾಗಿ ಚುನಾವಣೆ ನಡೆಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.




