ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರಂಭವಾಗಿರುವ ಪಕ್ಷಾಂತರ ಪರ್ವದ ಬಗ್ಗೆ ತಮ್ಮ ನಿಲುವು ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷಕ್ಕೆ ಇಂಥ ಪರಿಸ್ಥಿತಿ ಎದುರಾಗಿರಲ್ಲಿಲ್ಲ ಎಂದರು.
ವಿರೋಧಪಕ್ಷಗಳಿಗೆ ರಾಜ್ಯದಲ್ಲಿ ಈ ರೀತಿಯ ದಯನೀಯ ಸ್ಥಿತಿ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ. ಬಿಜೆಪಿಯ ಈ ಧೋರಣೆಯಿಂದ ಬೇಸತ್ತಿರುವ ಹಲವರು ಇದೀಗ ಕಾಂಗ್ರೆಸ್ ಸೇರಲು ಮುಂದೆ ಬಂದಿದ್ದಾರೆ. ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ ಎಂದರು.
ಚುನಾವಣೆಯ ವೇಳೆ ನಾವು ಪಂಚಖಾತ್ರಿಗಳನ್ನು ಜನರಿಗೆ ನೀಡಿದ್ದೆವು. ಅದರಲ್ಲಿ 3 ಯೋಜನೆಗಳು ಜಾರಿಯಾಗಿದ್ದು, 4 ನೆಯ ಗೃಹಲಕ್ಷ್ಮಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿರುವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯ ಶಿಷ್ಟಾಚಾರವನ್ನು ಹೊಂದಿದ್ದಾರೆ. ರಾಹುಲ್ಗಾಂಧಿಯವರು ಸಂಸದರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ತಾವು ಅಧ್ಯಕ್ಷತೆ ವಹಿಸುತ್ತಿರುವುದಾಗಿ ಹೇಳಿದರು.
ಗೃಹಲಕ್ಷ್ಮಿ ದೇಶದಲ್ಲೇ ಬೃಹತ್ತಾದ ಯೋಜನೆ. ಒಟ್ಟು ಗಾತ್ರ 32 ಸಾವಿರ ಕೋಟಿ ರೂ.ಗಳಾಗಲಿದ್ದು, ಪ್ರಸಕ್ತ ಸಾಲಿನಲ್ಲಿ 18 ಸಾವಿರ ಕೋಟಿ ಖರ್ಚಾಗಲಿದೆ. ಇದೇ ತಿಂಗಳ 30 ರಂದು ರಾಜ್ಯದ 1.33 ಕೋಟಿ ಕುಟುಂಬದ ಯಜಮಾನಿಯರ ಖಾತೆಗೆ 2000 ರೂ. ನಗದು ವರ್ಗಾವಣೆಯಾಗಲಿದೆ. ಪಂಚಖಾತ್ರಿಗಳಿಂದ ಜನರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಲಿದೆ. ಜಿಡಿಪಿ ಅಭಿವೃದ್ಧಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಎದುರಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಬರ ಅಧ್ಯಯನಕ್ಕಾಗಿ ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆ ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದೆ. ಸದ್ಯದಲ್ಲೇ 2ನೇ ಸುತ್ತಿನ ಸಭೆ ನಡೆಸಲಿದ್ದು, ಬಳಿಕ ಸಂಪುಟದ ಮುಂದೆ ವಿಷಯ ಮಂಡನೆ ಆಗಲಿದೆ ಎಂದರು.
ಬರ ಪೀಡಿತ ಪ್ರದೇಶಗಳ ಘೋಷಣೆ ಬಳಿಕ ಕೇಂದ್ರ ಸರ್ಕಾರಕ್ಕೆ ಅಗತ್ಯ ನೆರವು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಂದ ಅಧ್ಯಯನ ತಂಡ ಬಂದು ಪರಿಶೀಲಿಸಿದ ಬಳಿಕ ಎನ್ಡಿಆರ್ಎಫ್ ಮಾನದಂಡದ ಅಡಿ ನೆರವು ದೊರೆಯಲಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ಉದ್ಯೋಗ ಸೃಷ್ಟಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮೋಡ ಬಿತ್ತನೆ ಕಾರ್ಯ ಈವರೆಗೂ ಎಲ್ಲಿಯೂ ಯಶಸ್ವಿಯಾಗಿಲ್ಲ. ಹೀಗಾಗಿ ಸದ್ಯಕ್ಕೆ ಸರ್ಕಾರದ ಮುಂದೆ ಆ ಕುರಿತ ಪ್ರಸ್ತಾವನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.




