ಮೋದಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ
ಶಹಾಪುರ: ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ರದ್ದು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಿ ಸರ್ವಾಧಿಕಾರವನ್ನು ಬಿಗಿಗೊಳಿಸಲು ಹೊರಟಿದ್ದ ಬಿಜೆಪಿಯ ಸಂಚಿಗೆ ದೇಶದ ಜನತೆ ಚುನಾವಣೆಯಲ್ಲಿ ಸರಿಯಾಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಶಹಾಪುರ ನಗರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರವನ್ನು ಜನತೆ ಸರಳ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನೂ ನೀಡದೆ ಕೇವಲ 240 ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿ ಮತ್ತು ಮೋದಿಯವರ ದುರಾಡಳಿತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಮೋದಿಯವರಿಗೆ ನೈತಿಕತೆ ಇದ್ದರೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
2024ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹೊಸ ಭರವಸೆಯನ್ನು ನೀಡಿವೆ. ಇಂತಹ ಫಲಿತಾಂಶಕ್ಕೆ ಕಾರಣರಾದ ದೇಶದ ಜನತೆಗೆ ಧನ್ಯವಾದ ಮತ್ತು ಅಭಿನಂದನೆಗಳು. ಅದರಲ್ಲೂ ಉತ್ತರ ಪ್ರದೇಶದ ಜನತೆ ಪ್ರಜಾಪ್ರಭುತ್ವ ವಿರೋಧಿ ಬುಲ್ಡೋಜೋರ್ ಸಂಸ್ಕೃತಿಯನ್ನು ನೆಲಕಚ್ಚಿಸಿದ್ದಾರೆ. ಅಲ್ಲಿನ 80 ಲೋಕಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಬುಲ್ಡೋಜೋರ್ ಬಳಸಿ ಅಸಹಾಯಕರು, ಅಲ್ಪಸಂಖ್ಯಾತರು ಮತ್ತು ಬಡವರ ಮನೆಗಳನ್ನು ನಾಶ ಮಾಡುತ್ತಿದ್ದ ಆದಿತ್ಯನಾಥ್ ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಇಷ್ಟಾದರೂ ಕೋಮುವಾದಿ ಬಿಜೆಪಿ ಉಸಿರಾಡಲು ಇನ್ನೂ ಸ್ವಲ್ಪ ಮಟ್ಟಿನ ಅವಕಾಶ ಉಳಿದಿರುವುದು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಪಕ್ಷಗಳ ಸ್ವಾರ್ಥದ ಕಾರಣಕ್ಕೆ. ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷಗಳು ಇನ್ನಾದರೂ ತಮ್ಮ ಸ್ವಾರ್ಥ ಮತ್ತು ಹಮ್ಮು ಭಿಮ್ಮನ್ನು ಬದಿಗೆ ಸರಿಸಿ ತ್ಯಾಗದ ಮನೋಭಾವ ತೋರಬೇಕು. ಆ ಮೂಲಕ ಎಲ್ಲರೂ ಒಟ್ಟಾಗಿ ಸೇರಿ ಬಿಜೆಪಿಯೇತರ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳಬೇಕಿದೆ. ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ತ್ಯಾಗ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಖಜಾಂಚಿ ಇಸಾಕ್ ಹುಸೇನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮೀರ್, ನಗರ ಸಭಾ ಸದಸ್ಯ ಚುನ್ನುಮಿಯ್ಯಾ ಇದ್ದರು.




