ಬಿಜೆಪಿ ಸರ್ಕಾರಗಳಿಂದ ನಿರಂತರ ಜನವಿರೋಧಿ ನೀತಿ: ಸುನಿಲ್ ಕುಮಾರ್ ಬಜಾಲ್

5 years ago

ಮಂಗಳೂರು: ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ನಿರಂತರವಾಗಿ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಸಂಚಕಾರವನ್ನು ತಂದೊಡ್ಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ಮಾತ್ರವೇ ಜನತೆಯ  ಆಶಾಕಿರಣವಾಗಿ ಹೊರಹೊಮ್ಮುತ್ತಿವೆ ಎಂದು CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.

CPIM ಪಕ್ಷದ 23ನೇ ಮಹಾಧಿವೇಶನ 2022ರ ಏಪ್ರಿಲ್ ನಲ್ಲಿ ಕೇರಳದ ಕಣ್ಣೂರಿನಲ್ಲಿ ಜರುಗಲಿದ್ದು, ಎಲ್ಲಾ ರಾಜ್ಯ, ಜಿಲ್ಲೆ, ತಾಲೂಕು, ಮಧ್ಯವರ್ತಿ ಸಮಿತಿ ಹಾಗೂ ಶಾಖೆಗಳ ಸಮ್ಮೇಳನದ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಮಂಗಳೂರು ನಗರ ದಕ್ಷಿಣ ಸಮ್ಮೇಳನ ನವೆಂಬರ್ 7ರಂದು ಬಜಾಲ್ ಪಕ್ಕಲಡ್ಕದಲ್ಲಿ ಜರುಗಲಿದ್ದು, ಅದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ಪಕ್ಕಲಡ್ಕ ಯುವಕ ಮಂಡಲದಲ್ಲಿ ನಡೆಯಿತು.

ಸಭೆಗೆ ಮಾರ್ಗದರ್ಶಕರಾಗಿ ಆಗಮಿಸಿ ಮಾತಾಡಿದ ಸುನಿಲ್ ಕುಮಾರ್ ಬಜಾಲ್, ಸರ್ಕಾರಗಳ ತಪ್ಪು ಅರ್ಥಿಕ ನೀತಿಗಳ ವಿರುದ್ದ ಪ್ರಬಲ ಜನ ಚಳುವಳಿಯನ್ನು ಬೆಳೆಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ಆ ಮೂಲಕ ದೇಶದ ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳು, ಸಂವಿಧಾನದ ರಕ್ಷಣೆಗಾಗಿ ಎಲ್ಲಾ ವಿಭಾಗದ ಜನತೆಯನ್ನು ಅಣಿನೆರೆಸುವಲ್ಲಿಯೂ ಕಮ್ಯುನಿಸ್ಟರು ಮುಂಚೂಣಿಯಲ್ಲಿದ್ದಾರೆ ಎಂದರು.

CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಂತರಿಕ ಪ್ರಜಾಪ್ರಭುತ್ವದ ಕಟ್ಟುನಿಟ್ಟಿನ ಜಾರಿಗಾಗಿ ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಮ್ಮೇಳನದ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುವುದು ಕಮ್ಯುನಿಸ್ಟ್ ಪಕ್ಷದಲ್ಲಿ ಮಾತ್ರವೇ ಹೊರತು ಉಳಿದ ಯಾವುದೇ ಬಂಡವಾಳಶಾಹಿ ಪಕ್ಷಗಳಲ್ಲಿ ಅಲ್ಲ. ವ್ಯಕ್ತಿ ಆಧಾರಿತ ಎಲ್ಲಾ ಬೂರ್ಜ್ವಾ ಪಕ್ಷಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ CPIM ಜಿಲ್ಲಾ ಯುವ ನಾಯಕ ಸಂತೋಷ್ ಬಜಾಲ್ ಮಾತನಾಡಿ, ಪಕ್ಷದ ಸಮ್ಮೇಳನ ಮುಂಬರುವ ದಿನಗಳಲ್ಲಿ ಮಂಗಳೂರು ನಗರದಲ್ಲಿ ಬಲಿಷ್ಠವಾದ ಜನಚಳುವಳಿಯನ್ನು ಕಟ್ಟಲು ನಾಂದಿ ಹಾಡಲಿದ್ದು, ಸಮ್ಮೇಳನದ ಯಶಸ್ವಿಗಾಗಿ ಹಗಲಿರುಳೂ ಶ್ರಮಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ 100 CPIM ಕಾರ್ಯಕರ್ತರು, ಹಿತೈಷಿಗಳನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕಾರ್ಯಾಧ‍್ಯಕ್ಷರಾಗಿ ಸಂತೋಷ್ ಬಜಾಲ್, ಅಧ್ಯಕ್ಷರಾಗಿ ಸುರೇಶ್ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಬಜಾಲ್, ಖಜಾಂಚಿಯಾಗಿ ವರಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಉದಯ ಕುಂಟಲಗುಡ್ಡೆ, ಬಶೀರ್ ಜಲ್ಲಿಗುಡ್ಡ, ರೋಹಿಣಿ, ಜೆ.ಲೀಲಾರವರನ್ನು ಸರ್ವಾನುಮತದಿಂದ ಆರಿಸಲಾಯಿತು.

ವೇದಿಕೆಯಲ್ಲಿ CPIM ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ನಗರ ಮುಖಂಡರಾದ ದಿನೇಶ್ ಶೆಟ್ಟಿ, ಸುರೇಶ್ ಬಜಾಲ್, ಸ್ಥಳೀಯ CPIM ನಾಯಕರಾದ ದೀಪಕ್ ಬಜಾಲ್, ವರಪ್ರಸಾದ್, ಕೇಶವ ಭಂಡಾರಿ, ಅಶೋಕ್ ಸಾಲ್ಯಾನ್, ಹರಿಶ್ಚಂದ್ರ, ಕಮಲಾಕ್ಷ ಶೆಟ್ಟಿ, ಮೋಹನ್ ಜಲ್ಲಿಗುಡ್ಡ, ಯುವ ನಾಯಕರಾದ ಜಗದೀಶ್, ನಾಗರಾಜ್, ನೂರುದ್ದೀನ್ ಮುಂತಾದವರು ಹಾಜರಿದ್ದರು.

Leave a Reply