ಬೆಂಗಳೂರು: ದೇಶದೆಲ್ಲೆಡೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾದ ಅಲೆ ಬೀಸುತ್ತಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ರಚಿಸುತ್ತೇವೆ. ವಿಜಯ ಸಂಕಲ್ಪ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಚುನಾವಣೆಯಲ್ಲಿ ಜನಾರ್ಶೀವಾದ ದೊರೆತು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದರು.
ಲೋಕಸಭೆ ಚುನಾವಣೆ ವೇಳೆ ನಾನು 25 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಅದು ಸುಳ್ಳಾಗಲಿಲ್ಲ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವರ ಆಶೀರ್ವಾದ ನಮ್ಮ ಮೇಲಿದ್ದು, ಕನಿಷ್ಠ 130ರಿಂದ 140 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಜನಬೆಂಬಲ ಸಿಗುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ 2 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಬಿಜೆಪಿಯ ಜನಬೆಂಬಲ ನೋಡಿ ಕಾಂಗ್ರೆಸ್‍ನವರು ದಿಗ್ಭ್ರಾಂತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇನ್ನೂ 3-4 ಬಾರಿ ರಾಜ್ಯಕ್ಕೆ ಬರಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು. ನಾನು ಕೂಡ ಕೆಲವೆ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ನ್ಯಾಯ ಒದಗಿಲು ಕಾಂತಿಕಾರಿ ನಿರ್ಧಾರ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಲಂಬಾಣಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳಿಗೆ ನೆರವು ನೀಡಿದ್ದೆ. ನನಗೆ ಭಾರಿ ನೆಮ್ಮದಿ ತಂದ ಭಾಗ್ಯ ಲಕ್ಷ್ಮಿ ಯೋಜನೆಯಿಂದ ಇನ್ನು ಕೆಲವೇ ತಿಂಗಳಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಕುಟುಂಬಕ್ಕೆ ಇದರ ಪ್ರಯೋಜನ ಸಿಗಲಿದೆ ಎಂದರು.
ಮುಸ್ಲಿಮರಿಗೆ ಅನ್ಯಾಯವಾಗಿಲ್ಲ: ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಮುಸ್ಲಿಂ ಬಾಂಧವರಲ್ಲಿ ನಾನು ಸ್ಪಷ್ಟಪಡಿಸುವುದೇನೆಂದರೆ, ನಿಮಗೆ ಯಾವುದೇ ಅನ್ಯಾಯವಾಗಿಲ್ಲ. ತಪ್ಪು ಗ್ರಹಿಕೆಯಿಂದ ಗೊಂದಲಕ್ಕೀಡಾಗಬೇಡಿ, ಇಡಬ್ಲ್ಯುಎಸ್‍ನಡಿ ನಿಮಗೆ ಮೀಸಲಾತಿ ಸಿಗಲಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಇದರ ಬಗ್ಗೆ ಕನಸು ಕಾಣಬೇಡಿ. ತಮ್ಮ ಸ್ಥಾನ ವಿರೋಧ ಪಕ್ಷ, ಎಲ್ಲಿ ಕೂರಬೇಕು ಎಂಬುದನ್ನು ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದರು.



