ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಸುಮಾರು 40 ವರ್ಷಗಳಿಂದಲೂ ವಾಸವಿರುವ ಪೌರಕಾರ್ಮಿಕರಿಗೆ ಯಾವುದೇ ಮನೆಗಳು ಮಂಜೂರಾಗಿರಲಿಲ್ಲ; ಹೀಗಾಗಿ ಕಾಲೋನಿಯಲ್ಲಿರುವ ಗುಡಿಸಲುಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದವು. ಮೂರ್ನಾಲ್ಕು ತಲೆಮಾರುಗಳಿಂದಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕ ಬಂಧುಗಳು ಸ್ಥಳೀಯ ಗ್ರಾಮಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸಮಸ್ಯೆ ಬಗೆಹರಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಯಾಗಿದ್ದ ಕಾಗಲವಾಡಿ ಶಿವಣ್ಣ, ರಾಜ್ಯ ಸಫಾಯಿ ಕರ್ಮಚಾರಿ ನಾರಾಯಣ್ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ, ಇದಕ್ಕಾಗಿ ಪೌರಕಾರ್ಮಿಕರು ದಲಿತ ಸಂಘಟನೆಗಳ ಆಶ್ರಯದಲ್ಲಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರೂ ಯಾರೂ ಕಿವಿ ಕೊಟ್ಟಿರಲಿಲ್ಲ.
ಗ್ರಾಮದ ಹೊರವಲಯ ತಗ್ಗು ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಸುಮಾರು 28 ಕುಟುಂಬಗಳು ವಾಸಿಸುವ ಪ್ರದೇಶ ಕಳೆದ ಬಾರಿ ಕಪಿಲ ನದಿಯ ಪ್ರದೇಶದಿಂದ ಮುಳುಗಡೆಯಾಗಿದ್ದ ಸಂದರ್ಭದಲ್ಲಿ ಮಾಹಿತಿ ತಿಳಿದ ಸ್ಥಳೀಯ ಶಾಸಕ ಬಿ.ಹರ್ಷವರ್ಧನ್ ಇವರನ್ನೆಲ್ಲಾ ಸೂಕ್ತ ಸ್ಥಳಕ್ಕೆ ವರ್ಗಾಯಿಸಿ ಆಶ್ರಯ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅದರಂತೆ ತಾಲೂಕು ಆಳಿತವು ತಾತ್ಕಾಲಿಕ ಪುನರ್ವಸತಿ ಕಲ್ಪಿಸಿತ್ತು.
ಹಲವು ದಿನಗಳ ನಂತರ ಶಾಸಕರು ಅಧಿಕಾರಿಗಳ ಜೊತೆ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೌರಕಾರ್ಮಿಕರು ವಾಸಿಸುತ್ತಿರುವ ಜಾಗ ಸರಕಾರಿ ಓಣಿ ಎಂದು ದಾಖಲೆಗಳಲ್ಲಿ ನಮೂದಾಗಿರುವುದರಿಂದ ಈ ಪ್ರದೇಶದಲ್ಲಿ ಸರ್ಕಾರದ ವಸತಿ ಯೋಜನೆ ಮೂಲಕ ಮನೆಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದನ್ನ ಆಲಿಸಿದ ಶಾಸಕರು ಗ್ರಾಮದಲ್ಲಿರುವ ಖಾಲಿ ಬಿದ್ದಿರುವ ಸರ್ಕಾರಿ ಜಾಗ ಗುರುತಿಸಿ ನನ್ನ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರಂತೆ ತಹಶೀಲ್ದಾರ್ ಗ್ರಾಮದ ಹಳೆ ನಾಡಕಛೇರಿ ಇದ್ದ ಜಾಗದಲ್ಲಿ ಪೌರಕಾರ್ಮಿಕ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಮುಂದಾಗಿದ್ದರು. ಆದರೆ ಜಾಗ ಒಂದು ಎಕರೆಗಿಂತ ಕಡಿಮೆ ಇದ್ದು ಲೇಔಟ್ ಮಾಡಲು ಸಾಧ್ಯವಾಗದ ಕಾರಣ ಅದನ್ನು ಕೈ ಚೆಲ್ಲಿದ್ದರು. ನಂತರ ಶಾಸಕರು ಪಟ್ಟುಬಿಡದೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಬಿಸಿಎಂ ಹಾಸ್ಟೆಲ್ ಹತ್ತಿರ ಇರುವ 2 ಎಕರೆ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಸೂಚಿಸಿದರು. ಅಷ್ಟರಲ್ಲಾಗಲೇ ನಂಜನಗೂಡಿನಲ್ಲಿ ಕೊರೋನಾ ಸಂಕಷ್ಟ ಎದುರಾಯಿತು ಮತ್ತು ಗ್ರಾಮಪಂಚಾಯಿತಿಯ ಅವಧಿಯೂ ಸಹ ಮುಗಿದಿತ್ತು ಹೀಗಾಗಿ Regulation ಮಾಡಿಸಲು ಸಾಧ್ಯವಾಗದೆ ಪಂಚಾಯಿತಿ ರಚನೆ ತಡವಾಗಿದ್ದರಿಂದ ಅಲ್ಲಿನ ಆಡಳಿತಾಧಿಕಾರಿಯ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಜಾಗದ ಕುರಿತು ದಾಖಲೆ ನೀಡಿ ಲೇಔಟ್ ಮಾಡಲು ಶಾಸಕರು ಕೋರಿದ್ದರು.
ಕಳೆದ ಬಾರಿ ಪೌರಕಾರ್ಮಿಕರು ವಾಸವಿರುವ ಕಾಲೋನಿಗೆ ಭೇಟಿ ನೀಡಿದ್ಧ ಶಾಸಕ ಬಿ.ಹರ್ಷವರ್ಧನ್ ಅವರು ಈ ಕುರಿತು ಪೌರಕಾಮಿ೯ಕ ಬಂಧುಗಳಿಗೆ ‘ಯಾವುದೋ ಜಾಗ ತೋರಿಸಿ ಗುಡಿಸಲು ಕಟ್ಟಿಕೊಳ್ಳಿ ಎಂದು ನಾನು ನಿಮಗೆ ಹೇಳುವುದಿಲ್ಲ; ಆ ರೀತಿ ಮಾಡುವುದರಿಂದ ಮತ್ತೆ ಕೆಲವು ದಿನಗಳ ನಂತರ ನಿಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಬಹುದು ಹಾಗಾಗಿ ಶಾಶ್ವತವಾಗಿ ನೆಲೆಸಿಗುವಂತೆ ಜಿಲ್ಲಾಧಿಕಾರಿಗಳ ಮೂಲಕ Layout Formation ಆಗಿ ಬಂದ ನಂತರ ನಿಮಗೆ ಹಕ್ಕುಪತ್ರಗಳನ್ನ ವಿತರಿಸಿ, ರಸ್ತೆ, ಚರಂಡಿಗೆ ಸ್ಥಳ ನಿಗದಿ ಮಾಡಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾನು ಕ್ರಮವಹಿಸುತ್ತೇನೆ. “ನಿಮಗೆ ಪೌರಕಾಮಿ೯ಕರು’ ಎಂದು ಹೆಸರು ಕೊಟ್ಟವರೇ ನಮ್ಮ ತಾತ ‘ಬಿ.ಬಸವಲಿಂಗಪ್ಪ’ ಅವರ ಮೊಮ್ಮಗ ನಾನು ನಿಮ್ಮನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ” ಎಂಬ ಭರವಸೆಯ ಮಾತುಗಳನ್ನಾಡಿದ್ದರು.
ಅದರಂತೆ ಹಠ ಹಿಡಿದು ಸಕಾ೯ರದ ಗಮನ ಸೆಳೆದು ಈಗ ಸುಮಾರು 1.1 ಎಕರೆ ಜಾಗ ಮಂಜೂರಾತಿ, ಹಕ್ಕುಪತ್ರ ವಿತರಣೆಗೆ ಸರ್ಕಾರದಿಂದ ಮಂಜೂರಾತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಸಮಾನ ಗೌರವ ಮತ್ತು ಸ್ಥಾನಮಾನ ಸಿಗಬೇಕೆಂಬುದು ಬಿ.ಬಸವಲಿಂಗಪ್ಪನವರ ಆಶಯವಾಗಿತ್ತು. ಹಾಗಾಗಿ ಬಿ.ಬಸವಲಿಂಗಪ್ಪನವರು 1972 ರಲ್ಲಿ ಜುಲೈ 26 ರಂದು ‘ತಲೆಯ ಮೇಲೆ ಮಲ ಹೊರುವ ಪದ್ದತಿ ನಿಷೇಧಿಸುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದರು. 2022 ಜುಲೈ 26 ಇಂದಿಗೆ 50 ವರ್ಷದ ಈ ಸುವರ್ಣ ದಿನ ಬಿ.ಬಸವಲಿಂಗಪ್ಪನವರ ಮೊಮ್ಮಗ ಮತ್ತು ನಂಜನಗೂಡು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರು ಪೌರಕಾರ್ಮಿಕರಿಗಾಗಿ ಜಾಗ ನೀಡಿ, ಸರ್ಕಾರದಿಂದ ಹಕ್ಕುಪತ್ರ ವಿತರಿಸಿ ಪೌರಕಾರ್ಮಿಕರ ಬೇಡಿಕೆಯನ್ನು ಸಾಕಾರಗೊಳಿಸುವ ಮೂಲಕ ಅದಕ್ಕೆ ‘ಬಿ.ಬಸವಲಿಂಗಪ್ಪ ಬಡಾವಣೆ’ ಎಂದು ಹೆಸರಿಸಿ ಅನಾವರಣ ಮಾಡಿರುವುದು ಅಮೃತಘಳಿಗೆ! ಅಲ್ಲದೆ ಶಾಸಕರು ತನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಮಹದೇವನಗರದಲ್ಲೂ ಸಹ ಪೌರಕಾರ್ಮಿರಿಗಾಗಿ ಮತ್ತೊಂದು ಬಡಾವಣೆ ನಿರ್ಮಾಣ ಮಾಡಬೇಕೆಂಬ ಇರಾದೆ ಹೊಂದಿದ್ದಾರೆ.
ಕೇವಲ ಭರವಸೆಗಳನ್ನೇ ನೀಡುವ ರಾಜಕಾರಣಿಗಳ ನಡುವೆ ಹೇಳಿದ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂದು ಹಠಕ್ಕೆ ಬೀಳುವ ಇಂತಹ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಲಿ! ಏನೇ ಆಗಲಿ ಪೌರಕಾರ್ಮಿಕ ಬಂಧುಗಳ ಬದುಕನ್ನು ಹಸನಾಗಿಸಲು ಪಣತೊಟ್ಟಿರುವ ಶಾಸಕ ಬಿ.ಹರ್ಷವರ್ಧನ್ ಅವರ ಪರಿಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸಲೇಬೇಕಿದೆ!
– ಪ್ರಜ್ವಲ್ ಶಶಿ ತಗಡೂರು, ಬರಹಗಾರರು



