ಜ್ಞಾನಯೋಗಾಶ್ರಮ ಶ್ರೀ ಸಿದ್ದೇಶ್ವರ ಸ್ವಾಮೀಜಿರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ: ಭಾಗ್ಯವತಿ ಅಮರೇಶ್
ಬೆಂಗಳೂರು: ರಾಷ್ಟ್ರಸಂತ, ಪದ್ಮಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದಾರೆ.
ಪ್ರವಚನವನ್ನೇ ಜೀವನವಾಗಿ ನಡೆಸಿ, ಲಕ್ಷಾಂತರ ಜನರ, ಸರ್ವರ ಏಳಿಗೆಗೆ ಶ್ರಮಿಸಿದ ನಡೆದಾಡುವ ದೇವರು ಶ್ರೀ. ಸಿದ್ದೇಶ್ವರ ಸ್ವಾಮಿಗಳ ಅಗಲಿಕೆ ಬಹಳ ಬೇಸರದಾಯಕ ಘಟನೆ. ಈ ಶತಮಾನದ ಶ್ರೇಷ್ಠ ಸಂತ ಎಂದೇ ಗುರುತಿಸಲ್ಪಟ್ಟಿರುವ ಶ್ರೀ. ಸಿದ್ದೇಶ್ವರ ಸ್ವಾಮಿಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಅವರಿಗೆ ಗೌರವ ಸಲ್ಲಿಸಬೇಕೆಂದು ಕೋರಿದ್ದಾರೆ.
ಸರಳ ಜೀವಮಾನ, ಜ್ಞಾನಮಯೀ, ಬದುಕಿನ ಎಲ್ಲಾ ಆದರ್ಶಗಳ ಪರಿಪಾಲಕರಾಗಿದ್ದ ಶ್ರೀಗಳು ಅವರ ಭಕ್ತರ ಮನದಲ್ಲಿ ಎಂದಿಗೂ ಚಿರಾಯು, ಆಧ್ಯಾತ್ಮಿಕ ಪ್ರವಚನಗಳು ಸಹಸ್ರಾರು ಭಕ್ತರ ಮಾರ್ಗದರ್ಶನ ಹಾಗೂ ಪ್ರೇರಣೆಯಾಗಿತ್ತು. ಹಲವಾರು ಭಾಷೆಗಳ ಪಾಂಡಿತ್ಯ ಹೊಂದಿದ್ದ ಶ್ರೀಗಳು ಜ್ಞಾನಭಂಡಾರವೇ ಆಗಿದ್ದರು ಎಂದಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲೂ ತಮ್ಮ ಪ್ರವಚನ ಹಾಗೂ ವಿದ್ವತ್ತನ್ನು ಅವರು ಪ್ರಕಾಶಿಸಿದವರು. ಜ್ಞಾನವೇ ಸರ್ವಮಯ ಎಂದು ನಂಬಿದ್ದ ಮಾನವತಾವಾದಿ ಶ್ರೀಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ಮೂಲಕ ನಮನ ಸಲ್ಲಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ. ನನ್ನ ಈ ಮನವಿಯನ್ನು ನೀವು ಪರಿಗಣಿಸಿ ಮುಂದಿನ ಕರ್ನಾಟಕ ರತ್ನ ಶ್ರೀ. ಸಿದ್ದೇಶ್ವರ ಸ್ವಾಮಿಗಳಾಗಬೇಕೆಂದು ಬಯಸುತ್ತೇನೆ ಎಂದಿದ್ದಾರೆ.




