ಫಲಾನುಭವಿಗಳನ್ನು ತಾಸುಗಟ್ಟಲೆ ಪುಕ್ಕಟೆ ಭಾಷಣಗಳನ್ನು ಕೇಳುವಂತೆ ಮಾಡುವ ಕೀಳು ಮಟ್ಟದ ಪ್ರಚಾರದ ವೈಖರಿ ನಿಲ್ಲಲ್ಲೇಬೇಕು

3 years ago

ಫಲಾನುಭವಿಗಳು ಪ್ರಚಾರಕರಲ್ಲ

ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬಂದರು ವಿವಿಧ ಫಲಾನುಭವಿಗಳ ಸಮಾವೇಶವೆಂದು ಸರ್ಕಾರದ ಯೋಜನೆಗಳ ಫಲವನ್ನು ಪಡೆದ ಜನರನ್ನು ತಮ್ಮ ಸಭೆಗಳಲ್ಲಿ ತುಂಬಿಸಿಕೊಂಡು ಪಕ್ಷದ ಸಭೆಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ.

ಇತ್ತೀಚೆಗಂತೂ ಇಂತಹ ಕಾರ್ಯಕ್ರಮಗಳು ಅತಿಯಾಯಿತು. ಫಲಾನುಭವಿಗಳಿಗೆ ಯಾವುದೇ ಪಕ್ಷದ ಖಜಾನೆಯಿಂದ ಹಣವನ್ನು ನೀಡಿ ಸವಲತ್ತು ಕೊಟ್ಟಿರುವುದಿಲ್ಲ. ಜನತೆ ಕಟ್ಟುವ ತೆರಿಗೆಯ ಪಾಲಿನದು ಎಂಬುದು ಮೊದಲು ನೆನಪಿರಲಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಹುತೇಕ ಎಲ್ಲಾ ಸರ್ಕಾರಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸ್ಕಾಲರ್ ಶೀಪ್ ಕೊಡುವುದು, ವಿವಿಧ ವರ್ಗದವರಿಗೆ ಸಾಲ ಸೌಲಭ್ಯವನ್ನು ಕೊಡುವುದು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅನೇಕ ಯೋಜನೆಗಳನ್ನು ಕಲ್ಪಿಸಿಕೊಡುವುದು ವಿಶೇಷವಾಗಿ ಪಿಂಚಣಿ ಯೋಜನೆಗಳು, ನಿವೇಶನಗಳನ್ನು ಮತ್ತು ಮನೆಗಳನ್ನು ನೀಡುವುದು ಇವೆಲ್ಲವೂ ಸರ್ವೆ ಸಾಮಾನ್ಯ.

ಆದರೆ ಯಾವುದೇ ಸರ್ಕಾರವು ಸಹ ತುತ್ತೂರಿ ಬಾರಿಸುತ್ತಾ ಇಂತಹ ಜನರನ್ನು ಸೇರಿಸಿ ನೀವೆಲ್ಲಾ ಸರ್ಕಾರದ ಹಂಗಿನವರು ಎಂದು ಸಮಾವೇಶಗಳಲ್ಲಿ ತಮ್ಮ ನಾಯಕತ್ವವನ್ನು ಬಿಂಬಿಸಿಕೊಳ್ಳುತ್ತಾ ಇವರ ಮನೆಯ ಖಜಾನೆಯಿಂದ ಸೌಲಭ್ಯ ಕೊಟ್ಟವರಂತೆ ವಿಜೃಂಭಿಸಿಕೊಳ್ಳುತ್ತಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಇಂತಹ ಅಗ್ಗದ ಪ್ರಚಾರ ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರದ ತನಕ ಪ್ರತಿದಿನದ ಕಾರ್ಯಕ್ರಮವಾಗಿದೆ. ಸರ್ಕಾರವಿರುವುದು ಜನರಿಗೆ ನೆರವು ನೀಡಲು, ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲು. ಸರ್ಕಾರವೆಂದರೆ ಜನ ಮತ್ತು ಆಡಳಿತ ವ್ಯವಸ್ಥೆ ನಡುವೆ ಇರುವ ಸೇತುವೆ, ಪಿಂಚಣಿ ನೀಡಿದವರನ್ನು, ಸ್ಕಾಲರ್ ಶೀಪ್ ಪಡೆದವರನ್ನು, ಸಾಲ ಪಡೆದವರನ್ನು, ಮನೆ ಪಡೆದವರನ್ನು, ಬಿಸಿಲಿನಲ್ಲಿ ಕೂಡಿಸಿ ತಾಸುಗಟ್ಟಲೆ ಪುಕ್ಕಟೆ ಭಾಷಣಗಳನ್ನು ಕೇಳುವಂತೆ ಮಾಡುವ ಈ ಕೀಳು ಮಟ್ಟದ ಪ್ರಚಾರದ ವೈಖರಿ ನಿಲ್ಲಲ್ಲೇಬೇಕು.

ಸರ್ಕಾರವೆಂದ ಮೇಲೆ ಖಜಾನೆಯ ಹಣ ವಿವಿಧ ಯೋಜನೆಗಳಿಗೆ ವಿನಿಯೋಗಿಸಲೇಬೇಕು. ಅದನ್ನು ನಿಮ್ಮ ಮನೆಯ ಟೇಬಲ್‌ಗಳಲ್ಲಿ ತುಂಬಿಕೊಳ್ಳಲು ಅಲ್ಲ, ಆಡಳಿತವೆಂದರೆ ಇದೆಲ್ಲಾ ಸಹಜವಾದ ಪ್ರಕ್ರಿಯೆ. ಇದಕ್ಕೆ ಡಂಗೂರು ಬೇಕಾಗಿಲ್ಲ, ಯಾವುದೆ ಪಕ್ಷದ, ಯಾವುದೇ ನಾಯಕನ ಕಿಸೆಯ ಹಣವಲ್ಲ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply