ಓದಲು ಸಾಧ್ಯವಾಗಿದ್ದು ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ: ಡಾ.ಗಿರೀಶ್ ಮೂಡ್

4 years ago

ಚಿತ್ರದುರ್ಗ: ಕೂಲಿ ಕೆಲಸ ಮಾಡಿ ನಮ್ಮಪ್ಪ ನನ್ನನ್ನು ಓದಿಸಿದರು. ನನಗೆ ಓದಲು ಸಾಧ್ಯವಾಗಿದ್ದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಂದು ವೈದ್ಯ ಡಾ.ಗಿರೀಶ್ ಮೂಡ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪರಿಶಿಷ್ಟರು, ಅಲೆಮಾರಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮುದಾಯದ ತಲ್ಲಣಗಳು ವಿಷಯದ ಕುರಿತು ಮಾತಾಡಿದ ಅವರು, ಲಂಡನ್, ಅಮೆರಿಕದಿಂದ ತರಬೇತಿ ಪಡೆದುಬಂದರು, ದೇಶದಲ್ಲಿ ನಾನು ಒಬ್ಬ ಮೀಸಲಾತಿಗೆ ಸೇರಿದವನು ಎಂದು ಗುರುತಿಸುತ್ತಾರೆ. ನಾನು ಪರಿಶಿಷ್ಟ ಜಾತಿಹಗೆ ಸೇರಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈ ತಾಯಿನಾಡನ್ನು ಕಾಪಾಡಿಕೊಂಡು ಬಂದವರೇ ನಾವು. ನಾವು ಪ್ರಕೃತಿಯನ್ನು ಕಾಪಾಡಿಕೊಂಡು, ಅದರೊಡನೆ ಬದುಕಿದವರು. ನಾವು ಪರಿವರ್ತನೆಗೆ ಹೊಂದಿಕೊಳ್ಳಲಿಲ್ಲ. ಆದ್ದರಿಂದ ನಮ್ಮ ಸಮುದಾಯಗಳು ಹಿಂದುಳಿದಿವೆ ಎಂದರು.
ಪ್ರಜಾಪ್ರಭುತ್ವ ಎಂದರೆ ಏನು ಎಂದು ನಾವು ಅರಿತು, ನಾವು ಆರಿಸಿ ಕಳಿಸಿದವರಿಗೆ ಅವರ ಜವಾಬ್ದಾರಿಯನ್ನು ತಿಳಿಸಬೇಕಿದೆ. ಮೀಸಲಾತಿ ಇಂದು ಎಲ್ಲರಿಗೂ ಇದೆ. ಶೇ. 50ರಷ್ಟು ಜನರಲ್ ಸೀಟ್ ಇದೆ. ನೀಟ್ ಪರೀಕ್ಷೆಯಲ್ಲಿ ನಮ್ಮ ಪರ್ಸೆಂಟೇಜ್ ಗಳಿಗೆ ಬೆಲೆ ಇಲ್ಲದಂತಾಗಿದೆ. ನಮ್ಮ ತಂದೆಯ ಕಾಲದಲ್ಲಿ ಬಹಳ ಜನ ವೈದ್ಯರಾಗುತ್ತಿದ್ದರು. ಇಂದು ನೀಟ್ ಪರೀಕ್ಷೆ ಪಾಸ್ ಆಗಲು ಲಕ್ಷಗಟ್ಟಲೇ ಕರ್ಚು ಮಾಡಬೇಕಾಗುತ್ತದೆ ಎಂದರು.
ಅಮೆರಿಕದಲ್ಲಿ ನಾನು ಯಾವ ಗುಳಿಕಕಾಲ, ದಿಕ್ಕು ನೋಡಿಲ್ಲ. ನಾನೇನು ಹಾಳಾಗಿ ಹೋಗಿಲ್ಲ. ಬೇರೆ ಧರ್ಮಗಳ ಕುರಿತು ಮಾತಾಡುತ್ತೇವೆ. ಶುಕ್ರವಾರ, ಭಾನುವಾರ ಪೂಜೆ ಮಾಡುವ ಧರ್ಮಗಳಿವೆ. ವಾರ ಪೂರ್ತಿ ಪೂಜೆ ಮಾಡುವ ನಮಗೆ ಯಾಕೆ ಒಳಿತಾಗಿಲ್ಲ? ದೇವಸ್ಥಾನದ ಪಕ್ಕದ ಮನೆಯಲ್ಲಿದ್ದವರಿಗೆ ಗೊತ್ತು, ಇಡೀ ದಿನ ಶಬ್ದ ಮಾಡಿದರೆ ಓದಲು ಸಾಧ್ಯವಾಗುದಿಲ್ಲ ಎಂದರು.
ನಮ್ಮ ತಾತನ ಕಾಲದಲ್ಲಿ 8ನೇ ತರಗತಿ ಓದಿದರೆ ಕೆಲಸ ಸಿಗುತ್ತಿತ್ತು. ಆದರೆ, ಇಂದು ಪದವಿ ಓದಿದರೂ ಉದ್ಯೋಗ ಸಿಗುತ್ತಿಲ್ಲ. ಬಿ.ಎ., ಬಿ.ಎಸ್ಸಿ, ಪದವಿ ಪಡೆದವರಿಗೆ ಮತ್ತೊಂದು ಪರೀಕ್ಷೆ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಬೆಂಗಳೂರಿನಲ್ಲಿ ಸಿಕ್ಕ ಶಿಕ್ಷಣ ತುಮಕೂರಿನಲ್ಲಿ, ತುಮಕೂರಿನಲ್ಲಿ ಸಿಕ್ಕ ಶಿಕ್ಷಣ ನಮ್ಮ ಊರಿನಲ್ಲಿ ಸಿಗುತ್ತಿಲ್ಲ. ನೀವು ಮುಗ್ದರಾಗಿರಿ ಆದರೆ ದಡ್ಡರಾಗಬೇಡಿ ಎಂದರು.
ವಿಜ್ಞಾನ ಪ್ರಕೃತಿಯ ಸುತ್ತ ನಡೆಯುತ್ತಿರುವುದನ್ನು ಅರ್ಥಮಾಡಿಕೊಳ್ಳುವ ಮಾಧ್ಯಮ. ಖ್ಯಾತ ನಟರೊಬ್ಬರ ನಿಧನದ ನಂತರ ವೈದ್ಯರು ಪರೀಕ್ಷೆ ಮಾಡಿಸಿಕೊಳ್ಳಿ ಎಂದರು. ಜನ ಆಸ್ಪತ್ರೆಗಳಿಗೆ ಮುಗಿಬಿದ್ದರು. ಜನ ಮುಖ್ಯವಾಗಿ ಎಚ್ಚೆತ್ತುಕೊಳ್ಳಬೇಕು ಎಂದರು.
ಸರ್ಕಾರ ಕಳೆದ ಕೆಲವು ವರ್ಷಗಳಿಂದ 7 ಲಕ್ಷ ಕೋಟಿ ಆದಾಯ ಸಂಗ್ರಹಿಸಿದೆ. ಆದರೆ ಸರ್ಕಾರ ಉದ್ಯೋಗ ಕೊಡುತ್ತಿಲ್ಲ. ಇಂತಹ ಸಂಗತಿಗಳನ್ನು ಎಲ್ಲರೂ ಅರಿಯಬೇಕು. ನಮ್ಮ ಊರುಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಆಯುಷ್ಮಾನ್ ಭಾರತ್ ಹೆಸರು ಕೇಳಿದ್ದಾರೆ. 5 ಜನ ಇರುವ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ಎಂದರೆ 50 ಲಕ್ಷ ಕೋಟಿ ವೆಚ್ಚ ಮಾಡುತ್ತೇವೆ ಎಂದರು. ದೇಶದ ಬಜೆಟ್ ಎಷ್ಟು ಎಂದು ಯೋಚಿಸಿಲ್ಲ ಎಂದರು.

Leave a Reply