ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿ ಗೆ ಗುಡ್ ಬೈ ಹೇಳಿ ಜಾತ್ಯಾತೀತ ಜನತಾದಳ ಸೇರಿದ್ದಾರೆ.
ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದ ಅವರಿಗೆ ಪಕ್ಷದ ಟಿಕೆಟ್ ಸಿಗುವುದು ಸಾಧ್ಯವಿಲ್ಲ ಎಂಬುದು ಖಾತ್ರಿಯಾದ ಹಿನ್ನೆಲೆಯಲ್ಲಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಲು ಹುಬ್ಬಳ್ಳಿಗೆ ತೆರಳುತ್ತಿದ್ದ ಆಯನೂರು ಮಂಜುನಾಥ್ ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಶಿವಮೊಗ್ಗದ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಫೆಬ್ರುವರಿಯಲ್ಲಿ ತೀರ್ಮಾನಿಸಿದ್ದೆ. ಬಿಜೆಪಿ ಟಿಕೆಟ್ ಕೈತಪ್ಪುವುದು ಖಚಿತವಾದ ಬಳಿಕ ಪಕ್ಷ ತೊರೆಯುವ ನಿರ್ಧಾರ ಮಾಡಿದೆ. ಸಿ.ಎಂ.ಇಬ್ರಾಹಿಂ ಹಾಗೂ ಕುಮಾರಸ್ವಾಮಿ ಅವರು ಜೆಡಿಎಸ್‌ಗೆ ಆಹ್ವಾನಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಮಂಡ್ಯದಲ್ಲಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ಕುಮಾರಸ್ವಾಮಿ ಚನ್ನಪಟ್ಟಣದ ಜೊತೆಗೆ ಮಂಡ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಎಳೆಯಲಾಗಿದೆ
ಚನ್ನಪಟ್ಟಣ ಕ್ಷೇತ್ರ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದ ಸ್ಪರ್ಧೆಯನ್ನು ತಳ್ಳಿಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಹೆಚ್ಚಿನ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಮಂಡ್ಯ ಜಿಲ್ಲೆ ಕಾರ್ಯಕರ್ತರಿಗೂ ಸ್ಪರ್ಧೆಗೆ ಒತ್ತಡ ತರದಂತೆ ಸೂಚಿಸಲಾಗಿದೆ. ಪದೇ ಪದೇ ನನ್ನ ಹೆಸರು ತಂದು ಅವಮಾನ ಮಾಡಬೇಡಿ. ಸ್ಥಳೀಯರೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದೇನೆ ಎಂದು ಹೇಳಿದರು.
ಮಂಡ್ಯದಲ್ಲಿ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಅವರ ಮಟ್ಟಕ್ಕೆ ಬೆಳೆಸಲು ಹೋಗಬೇಡಿ. ನಾನು ಆ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿ ಅಲ್ಲ. ಅವರು ಕೊಟ್ಟಿರುವ ಕೊಡುಗೆ ನಾನು ಕೊಡಬೇಕಾಗಿಲ್ಲ. ಹೋರಾಟ ಮಾಡೋದು ಬಿಡೋದು ಬೇರೆ ವಿಚಾರ ಎಂದರು.




