ಐಎಸ್ಐ ಗೆ ಸೇನಾ ಮಾಹಿತಿ ಸೋರಿಕೆ ಮಾಡಿದವರ ಬಂಧನ

1 year ago

ಬೆಂಗಳೂರು: ಪ್ರತಿ ತಿಂಗಳು 5 ಸಾವಿರ ರೂಪಾಯಿ ಆಸೆಗೆ ಬಿದ್ದ ಇಬ್ಬರು ಅತ್ಯಂತ ಮಹತ್ವದ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಗೆ ರವಾನಿಸಿ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕಾರವಾರದ ಚೆಂಡಿಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಗ್ರಾಮದ ವೇತನ್ ತಾಂಡೇಲ ಮತ್ತು ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದ ಅಕ್ಷಯ ನಾಯ್ಕ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸಿದ್ದಾರೆ.

ಈ ಇಬ್ಬರು ಕೆಲಸ ಮಾಡುತ್ತಿರುವ ಕಂಪೆನಿ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಯುದ್ಧ ನೌಕೆಗಳ ದುರಸ್ತಿ ಕಾರ್ಯ ನಡೆಸುತ್ತದೆ. ಹೀಗಾಗಿ 2023ರಲ್ಲಿ ನೌಕಾದಳ ಅಧಿಕಾರಿ ಎಂದು ಫೇಸ್ಬುಕ್ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯೊಬ್ಬರು ಇವರಿಗೆ ಪರಿಚಯವಾಗಿದ್ದಾರೆ.

ತಾನು ನೌಕಾದಳದ ಅಧಿಕಾರಿ ಎಂದು ಈ ಮಹಿಳೆ ಇಬ್ಬರನ್ನು ನಂಬಿಸಿದ್ದಾರೆ. ನಂತರ ಕದಂಬ ನೌಕಾ ನೆಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ನೌಕೆಗಳ ದುರಸ್ತಿ ಮೊದಲಾದ ವಿಷಯಗಳ ಮಾಹಿತಿ ನೀಡುವಂತೆ ಕೇಳಿದ್ದಾರೆ. ಅದಕ್ಕಾಗಿ ಇಬ್ಬರಿಗೂ ಪ್ರತಿ ತಿಂಗಳು 5 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.

ತಾನು ನೌಕಾದಳದ ಅಧಿಕಾರಿಯಾಗಿದ್ದೇನೆ. ನೀವು ನನಗೆ ನೀಡುವ ಮಾಹಿತಿ ದೇಶದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಈ ಬಗ್ಗೆ ಯಾರಲ್ಲೂ ಚರ್ಚಿಸಬಾರದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಇಬ್ಬರೂ ನೌಕಾನೆಲೆಯಲ್ಲಿ ಕೆಲಸ ಮಾಡುವ ಸ್ನೇಹಿತರು ಮತ್ತು ಸಂಬಂಧಿಕರಿಂದ ನೌಕಾನೆಲೆಯ ಮಾಹಿತಿ ಕಲೆಹಾಕಿ ಅವರಿಗೆ ರವಾನಿಸುತ್ತಿದ್ದರು ಎನ್ನಲಾಗಿದೆ.

ನೌಕಾನೆಲೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಯಾರೋ ಶತ್ರು ರಾಷ್ಟ್ರಕ್ಕೆ ರವಾನಿಸುತ್ತಿದ್ದಾರೆ ಎಂಬ ಗುಪ್ತದಳದ ಮಾಹಿತಿಯ ಬೆನ್ನು ಹತ್ತಿದ ರಾಷ್ಟ್ರೀಯ ತನಿಖಾ ದಳ ಕಳೆದ ಎರಡು ತಿಂಗಳಿನಿಂದ ಕಾರವಾರದಲ್ಲಿ ಬೀಡುಬಿಟ್ಟು ಅನೇಕರ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು. ಅಂತಿಮವಾಗಿ ಈ ಇಬ್ಬರು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಆಧಾರದಲ್ಲಿ ಇಬ್ಬರನ್ನೂ ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ.

Leave a Reply