ಅಂತರರಾಜ್ಯ ಕಳ್ಳರ ಬಂಧನ 78 ಲಕ್ಷದ ಮಾಲು ಜಪ್ತಿ

3 years ago

#Arrest #interstate #thieves #confiscation #goods #worth #78lakhs

ಬೆಂಗಳೂರು: ಬೆಳಗಿನ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಮುರಿದು ಕನ್ನಗಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಅಂತರರಾಜ್ಯ ಕನ್ನಗಳ್ಳರನ್ನು ಬಂಧಿಸಿರುವ ಸಂಜಯನಗರ ಪೊಲೀಸರು 78.65ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕುಖ್ಯಾತ ಅಂತರರಾಜ್ಯ ಕನ್ನಗಳ್ಳರಾದ ಮಿಂಟು ವಿಶ್ವಾಸ್, ಹರಿಶ್ಚಂದ್ರ, ಚಂದ್ರಬಾನು ಹಾಗೂ ಜಸ್ವಿರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತರಿಂದ 78 ಲಕ್ಷದ 65 ಸಾವಿರ ರೂ. ಮೌಲ್ಯದ 1 ಕೆ.ಜಿ. 430 ಚಿನ್ನಾಭರಣಗಳು ಆಕ್ಟಿವಾ ಸ್ಕೂಟರ್,ಸ್ಕ್ರೂಡ್ರೈವರ್ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಜಯ ನಗರದ ಡಾಲರ್ಸ್ ಕಾಲೋನಿಯ ಮನೆಯೊಂದರ ಡೋರ್ ಲಾಕ್ ಮುರಿದು ಚಿನ್ನ, ವಜ್ರದ ಒಡವೆಗಳನ್ನು ಕಳವು ಮಾಡಿದ್ದ ಬಗ್ಗೆ ದೂರು ನೀಡಲಾಗಿತ್ತು. ದೂರು ಆಧರಿಸಿ ದಾಖಲಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ವಿಶೇಷ ತಂಡ ಕೃತ್ಯ ನಡೆದ ಸ್ಥಳದ ಸಮೀಪದ ಹಲವಾರು ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿಗಳ ಚಲನವಲನದ ಮಾಹಿತಿಯನ್ನು ಸಂಗ್ರಹಿಸಿ ಖಚಿತವಾದ ಮಾಹಿತಿಯನ್ನು ಆಧರಿಸಿ ಮೂವರನ್ನು ಬಂಧಿಸಿ ಅವರುಗಳು ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಆರೋಪಿಯನ್ನು ಪಶ್ಚಿಮ ದೆಹಲಿಯ ತಿಲಕ್ನಗರದ ಬಳಿ ಬಂಧಿಸಿ ವಿಚಾರಣೆಗೊಳಪಡಿಸಲಾಯಿತು.

ಬಂಧಿತ ಆರೋಪಿಗಳು ಕಳವು ಮಾಡಲೆಂದೇ ದೆಹಲಿಯಿಂದ ಕಳೆದ ಜು.24 ರಂದು ಬೆಂಗಳೂರಿಗೆ ಬಂದು ಆಕ್ಟಿವಾ ಸ್ಕೂಟರ್ ಖರೀದಿಸಿ ಸುತ್ತಾಡಿ ಸಂಜಯನಗರದ ಮನೆಯಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಬೀಗ ಮುರಿದು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ. ಈ ಪ್ರಕರಣದ ತನಿಖೆಯಿಂದ ಆರೋಪಿಗಳು ಮೇಲೆ ದೆಹಲಿಯ ಮಂಗಲ್ಪುರ, ಪ್ರೀತಂ ಬಿಹಾರ್ ಪೊಲೀಸ್ ಠಾಣೆ ಮತ್ತು ಕೇರಳದ ಎರ್ನಾಕುಲಂ ಪೊಲೀಸ್ ಠಾಣೆ, ರಾಜಸ್ಥಾನದ ಜೈಪುರ, ಮಹೇಶ್ನಗರ, ಜ್ಯಾವರ್ನಗರ ಹಾಗೂ ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿ ಕಳವು ಪ್ರಕರಣಗಳಲ್ಲಿಭಾಗಿಯಾಗಿರುವುದು ಪತ್ತೆಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉತ್ತರ ವಿಭಾಗದ ಡಿಸಿಪಿ ಶಿವ ಪ್ರಕಾಶ್ ಅವರಿದ್ದರು, ಆರೋಪಿಗಳನ್ನು ಬಂಧಿಸಿ ಉತ್ತಮ ಕಾರ್ಯಾಚರಣೆ ಕೈಗೊಂಡ ಸಂಜಯನಗರ ಪೊಲೀಸರ ಕಾರ್ಯವನ್ನು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ ಶ್ಲಾಘಿಸಿದ್ದಾರೆ.

Leave a Reply