ಕೆಪಿಸಿಸಿಗೆ ಹೊಸದಾಗಿ 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳ ನಿಯೋಜನೆ

2 years ago

ಬೆಂಗಳೂರು: ಲೋಕಸಭೆ ಚುನಾವಣೆ ಕಾವು ತೀವ್ರಗೊಂಡಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸಮಿತಿ ಪುನರ್ ರಚಿಸಲಾಗಿದೆ. ಕೆಪಿಸಿಸಿ ಗೆ ಹೊಸದಾಗಿ 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ.

ಜೊತೆಗೆ ಮಾಧ್ಯಮ ಮತ್ತು ಸಂವಹನ ಘಟಕಕ್ಕೆ ಅಧ್ಯಕ್ಷರಾಗಿದ್ದ ಸಚಿವ ಪ್ರಿಯಾಂಕ ಖರ್ಗೆ ಅವರ ಬದಲಾಗಿ, ಇದೇ ಘಟಕದಲ್ಲಿ ಉಪಾಧ್ಯಕ್ಷರಾಗಿದ್ದ ರಮೇಶ್ ಬಾಬು ಅವರಿಗೆ ಬಡ್ತಿ ನೀಡಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವಿಧಾನಸಭೆ ಟಿಕೆಟ್ ವಂಚಿತೆ ಐಶ್ವರ್ಯ ಮಹದೇವ್ ಅವರನ್ನು ಸಹ ಅಧ್ಯಕ್ಷರನ್ನಾಗಿ, ಇ.ಸತ್ಯಪ್ರಕಾಶ್ರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಾಮಾಜಿಕ ಜಾಲತಾಣಕ್ಕೆ ವಿಜಯ್ ಮತ್ತಿಕಟ್ಟಿ, ನಿಕೇತ್ ರಾಜ್ ಮೌರ್ಯ ಅವರನ್ನು ಸಹ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಖಜಾಂಚಿಯನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ವಿನಯ್ ಕಾರ್ತಿಕ್ ಮುಂದುವರೆದಿದ್ದಾರೆ. ಇದರೊಂದಿಗೆ,7 ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ.

ಬಳ್ಳಾರಿ ನಗರ ಜಿಲ್ಲೆಗೆ ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಅವರ ಪುತ್ರ ಪ್ರಶಾಂತ್, ಬೆಂಗಳೂರು ಪೂರ್ವಕ್ಕೆ ಕೆ.ನಂದಕುಮಾರ್, ಹಾವೇರಿಗೆ ಸಂಜೀವ್ ಕುಮಾರ್ ನೀರಲಂಗಿ, ಕೊಪ್ಪಳಕ್ಕೆ ಅಮರೇಗೌಡ ಬಯ್ಯಾಪುರ, ಉಡುಪಿಗೆ ಕೃಷ್ಣ ಹೆಗ್ಡೆ, ರಾಯಚೂರಿಗೆ ಬಸವರಾಜ್ ಇಟಗಿ, ಶಿವಮೊಗ್ಗಕ್ಕೆ ಆರ್.ಪ್ರಸನ್ನಕುಮಾರ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಯ ಬೆನ್ನಲ್ಲೇ ಅಸಮಾಧಾನ ಹೊಗೆಯಾಡಲಾರಂಭಿಸಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಜ್ಯ ನಾಯಕರು ಸಾಮಾಜಿಕ ನ್ಯಾಯವನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ನೇಮಕಾತಿಗಳು ಭಾರೀ ಸಂಚಲನ ಸೃಷ್ಟಿಸಿವೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರು, ನಿಗಮ ಮಂಡಳಿಗಳಲ್ಲಿ ಅವಕಾಶ ಸಿಗದೇ ಇದ್ದವರಿಗೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಆಕಾಂಕ್ಷಿಗಳಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಿಕೊಂಡವರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಾಯಕತ್ವದ ನಿರ್ಧಾರಗಳನ್ನು ಪ್ರಶ್ನಿಸಿ ತಿರುಗಿಬಿದ್ದಿರುವ ಕೆಲ ಪ್ರಮುಖರನ್ನು ನೂತನ ಪಟ್ಟಿಯಿಂದ ಕೈಬಿಡಲಾಗಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ವಿರುದ್ಧ ಕಣಕ್ಕಿಳಿಯುವ ಬಂಡಾಯ ಅಭ್ಯರ್ಥಿಯಾಗಿ ಮುನ್ಸೂಚನೆ ನೀಡಿದ್ದ ವೀಣಾ ಕಾಶಪ್ಪನವರ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಮಂಡ್ಯದಲ್ಲಿ ಬಂಡಾಯ ಸಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಡಾ.ರವೀಂದ್ರ ಅವರಿಗೆ ಪದಾಧಿಕಾರಿ ಹುದ್ದೆಯಿಂದ ಕೊಕ್ ನೀಡಲಾಗಿದೆ.

ಉಡುಪಿ ಮತ್ತು ರಾಯಚೂರು ಜಿಲ್ಲಾಧ್ಯಕ್ಷ ಬದಲಾವಣೆಗೆ ಸ್ಥಳೀಯವಾಗಿ ಆಕ್ಷೇಪಗಳು ಕೇಳಿಬಂದಿವೆ. ರಾಯಚೂರು ಜಿಲ್ಲಾಧ್ಯಕ್ಷರ ನೇಮಕದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದರೆ, ಉಡುಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Leave a Reply