ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ 1920 ಜನವರಿ 31 ರಂದು ಬಾಬಾಸಾಹೇಬರು ‘ಮೂಕನಾಯಕ’ ಪತ್ರಿಕೆಯನ್ನು ಸ್ಥಾಪಿಸುವ ಮೂಲಕ ಪತ್ರಿಕೋದ್ಯಮದಲ್ಲಿ ದೇಶದ ದಮನಿತ ಸಮುದಾಯಗಳಿಗೆ ದನಿಯನ್ನು ನೀಡಿದರು.
ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಕಾಂಗ್ರೇಸ್ ಮತ್ತು ಮೇಲ್ಜಾತಿಯ ಜನರ ಹಿಡಿತದಲ್ಲಿದ್ದ ಪತ್ರಿಕೆಗಳು ಕೇವಲ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯತೆಯನ್ನು ಹರಡುವ ವಿಚಾರಗಳಿಗೆ ಜಾಗ ಕೊಟ್ಟು ಸಾಮಾಜಿಕ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದವು. ಸ್ವತಂತ್ರ ಚಳುವಳಿಯ ಸಂದರ್ಭದಲ್ಲೆ ಜಾತಿ ವಿನಾಶದ ಪ್ರಶ್ನೆಗಳನ್ನು ಎತ್ತುತ್ತಿದ್ದ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದ ಕಾಂಗ್ರೆಸ್ ಧೋರಣೆಗಳನ್ನು ಟೀಕಿಸುತ್ತಿದ್ದ ಅಂಬೇಡ್ಕರ್ ಅವರ ವಿಚಾರಗಳಿಗೆ ಆಗಿನ ಪತ್ರಿಕೆಗಳು ಜಾಗ ಕೊಡುತ್ತಿರಲಿಲ್ಲ. ಅಲ್ಲದೆ ಅಂಬೇಡ್ಕರ್ ಅವರ ಹೋರಾಟ ಮತ್ತು ವಿಚಾರಗಳನ್ನು ತಪ್ಪಾಗಿ ವರದಿ ಮಾಡುವುದು, ತಪ್ಪಾಗಿ ವಿಶ್ಲೇಷಿಸುವುದು, ಜನರಿಗೆ ತಪ್ಪು ಮಾಹಿತಿ ನೀಡುವುದರ ಮೂಲಕ ಅಂಬೇಡ್ಕರ್ ಅವರ ಬಗ್ಗೆ ತಪ್ಪು ಗ್ರಹಿಕೆಯನ್ನು ಬಿತ್ತುತ್ತಿದ್ದವು. ಇದಕ್ಕೆ ಕಾರಣ ಕಾಂಗ್ರೆಸ್ ಮತ್ತು ಗಾಂಧೀಜಿಯ ಬಗ್ಗೆ ಅಂಬೇಡ್ಕರ್ ಅವರು ಮಾಡುತ್ತಿದ್ದ ವಿಮರ್ಶೆ.
ಅಂಬೇಡ್ಕರ್ ಮೇಲ್ಜಾತಿಯ ಮಾಧ್ಯಮಗಳ ಈ ತಾರತಮ್ಯಕ್ಮೆ ಪ್ರತಿಯಾಗಿ ದಮನಿತರ ಚಳುವಳಿಯ ದನಿಯಾಗಿ ಮತ್ತು ತಮ್ಮ ವಿಚಾರಗಳನ್ನು ನೇರವಾಗಿ ಜನರೊಂದಿಗೆ ಹಂಚಿಕೊಳ್ಳುವ ವೇದಿಕೆಯಾಗಿ ‘ಮೂಕನಾಯಕ’ ಪತ್ರಿಕೆಯನ್ನು ಮರಾಠಿ ಭಾಷೆಯಲ್ಲಿ ಪ್ರಾರಂಭಿಸಿದರು.
ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನಿಟ್ಟುಕೊಂಡು ಪ್ರಾರಂಭಿಸಿದ ಮೊದಲ ಪತ್ರಿಕೆ ‘ಮೂಕ ನಾಯಕ’. ಸಾಮಾಜಿಕ ನ್ಯಾಯದ ಪತ್ರಿಕೋದ್ಯಮವನ್ನು ಆರಂಭಿಸಿದ ಮೊದಲ ಪರ್ತಕರ್ತ ಅಂಬೇಡ್ಕರ್.
1920 ರಿಂದ 1956 ರ ವರೆಗೆ ಮೂವತ್ತಾರು ವರ್ಷಗಳ ಕಾಲ ತಮ್ಮ ಹೋರಾಟದ ಜೊತೆಗೆ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅಂಬೇಡ್ಕರ್ ಅವರ ಮೊದಲ ಪ್ರಯತ್ನ ‘ಮೂಕನಾಯಕ’. ಇದಾದ ನಂತರ ಬಹಿಷ್ಕೃತ ಭಾರತ(1924), ಸಮತಾ(1928), ಜನತಾ(1930) ಮತ್ತು ಪ್ರಬುದ್ಧ ಭಾರತ(1956) ಪತ್ರಿಕೆಗಳನ್ನು ಅಂಬೇಡ್ಕರ್ ನಡೆಸಿದ್ದರು.
– ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು




