ಆಡಳಿತ ವಿರೋಧಿ ಅಲೆ, ವಿರೋಧ ಪಕ್ಷಗಳ I N D I A ಕೂಟದ ರಚನೆಗಳಿಂದ ವಿಚಲಿತರಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂಬರುವ ಚುನಾವಣೆ ಗೆಲ್ಲಲು ಇಸ್ರೇಲ್, ಹಮಾಸ್ ಸಮರವನ್ನು ಮೆಟ್ಟಿಲಾಗಿ ಬಳಸಲು ಸರ್ವ ಯತ್ನ ನಡೆಸುತ್ತಿದೆ. ಅದಕ್ಕಾಗಿ ತಮ್ಮ ತಾಯ್ನಾಡಿನಲ್ಲಿ ಪ್ಯಾಲೆಸ್ತೀನ್ ಜನತೆಗೆ ಆಗಿರುವ ಘೋರ ಅನ್ಯಾಯವನ್ನು ಮರೆ ಮಾಚಿ, ಇತಿಹಾಸವನ್ನೇ ತಿರುಚಿ ಬರೆದ, ಇಸ್ರೇಲಿ ಝಿಯೋನಿಸ್ಟರ ಆಕ್ರಮಣ, ಪ್ಯಾಲೆಸ್ತೀನಿ ನಾಗರಿಕರ ಮೇಲಿನ ಕ್ರೌರ್ಯ, ರಕ್ತಪಾತವನ್ನು ನ್ಯಾಯೀಕರಿಸುವ ಸುಳ್ಳು ಸುದ್ದಿಗಳು ವಾಟ್ಸಪ್ ಯೂನಿವರ್ಸಿಟಿಯಲ್ಲಿ ಮಾತ್ರ ಅಲ್ಲದೆ, ಬಲಪಂಥೀಯ ಮಾಧ್ಯಮಗಳಲ್ಲಿ ದೊಡ್ಡ ರೀತಿಯಲ್ಲಿ ಸೃಷ್ಟಿಸಿ ಈ ಸಂದರ್ಭದಲ್ಲಿ ಹಂಚಲಾಯಿತು.
ಹಮಾಸ್ ಬಂಡುಕೋರರನ್ನು ಮುಂದಿಟ್ಟು, ಇಸ್ರೇಲ್ ಮೇಲಿನ ದಾಳಿಯ ಸಂದರ್ಭ ಸಂಭವಿಸಿದ ಹಿಂಸೆ (ಕೆಲವು ಕೃತಕ ಸುದ್ದಿ, ಉದಾ : 40 ಯಹೂದಿ ಮಕ್ಕಳ ಶಿರಚ್ಚೇಧ) ಗಳನ್ನು ವೈಭವೀಕರಿಸಿ, ಆ ಘಟನೆಗಳು, ಹಮಾಸ್ ದಾಳಿಯನ್ನು ಮುಸ್ಲಿಮರಿಗೆ ಜೋಡಿಸಿ ಭಾರತದಲ್ಲಿ ಇರುವ ಮುಸ್ಲಿಂ ವಿರೋಧಿ ಭಾವನೆಗಳನ್ನು ಉಜ್ಜಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲಿಸುವಂತೆ ನೋಡಿಕೊಳ್ಳಲಾಯಿತು. ಪ್ರತೀಕಾರದ ಹೆಸರಿನಲ್ಲಿ ಗಾಝಾ ಪಟ್ಟಿಯಲ್ಲಿ ಅಮಾಯಕ ಪ್ಯಾಲೆಸ್ಟೈನ್ ನಾಗರಿಕರು, ಮಕ್ಕಳು, ಮಹಿಳೆಯರ ಮೇಲಿನ ವಿಕಾರ ದಾಳಿಗಳ ಸುದ್ದಿಗಳನ್ನು ಕಡೆಗಣಿಸಲಾಯಿತು, ನ್ಯಾಯೀಕರಿಸಲಾಯಿತು, ಅಥವಾ ಸಂಭ್ರಮಿಸಲಾಯಿತು.
ಭಾರತ ಸರಕಾರ ಸ್ವಾತಂತ್ರ್ಯ ಬಂದ ದಿನದಿಂದಲೂ ಪಾಲಿಸಿಕೊಂಡು ಬಂದ ಪ್ಯಾಲೆಸ್ಟೈನ್ ಜನತೆಯ ಪರವಾದ ನಿಲುವುಗಳನ್ನು ಧರ್ಮ (ಮುಸ್ಲಿಂ) ದ್ವೇಷದ ಉನ್ಮಾದದಲ್ಲಿ ಮರೆಗೆ ಸರಿಯುವಂತೆ ಮಾಡಿ. ಇಸ್ರೇಲ್ ಜಗತ್ತಿನ ನ್ಯಾಯಪರ ದೇಶಗಳ ಐಕಾನ್ ಎಂಬಂತೆ ಬಿಂಬಿಸಿ, ಇಸ್ರೇಲ್ ಅಮಯಾಕ ಗಾಝಾ ನಾಗರಿಕರ ಮೇಲೆ ನಡೆಸುತ್ತಿರುವ ಅನಾಗರಿಕ ದಾಳಿಯ ಪರವಾದ ಉನ್ಮಾದವನ್ನು ಸೃಷ್ಟಿಸಲಾಯಿತು. ಇದು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಭಾರತದಲ್ಲಿ ಬೃಹತ್ ಪ್ರಮಾಣದ ಮುಸ್ಲಿಂ ವಿರೋಧಿ ಭಾವನೆಯನ್ನು ಉದ್ದೀಪನಗೊಳಿಸಿ ಚುನಾವಣೆಗೆ ಸಜ್ಜಾಗುವುದಲ್ಲದೆ ಮತ್ತೇನಲ್ಲ. ಮೊದಲೆಲ್ಲ ಚುನಾವಣೆಗೆ ಮುನ್ನ ಭಾರತ ದೇಶದೊಳಗಡೆಯ ಗೋಧ್ರಾ, ಅಯೋಧ್ಯೆ, ಫುಲ್ವಾಮಗಳು ಬಳಕೆಯಾದರೆ, ಈ ಭಾರಿ ದೂರದ ಇಸ್ರೇಲ್ ,ಪ್ಯಾಲೆಸ್ಟೈನ್ ಕದನ ಆ ದಾರಿಯಲ್ಲಿ ಬಳಕೆಯಾಗುತ್ತಿರುವುದು ದೇಶದಲ್ಲಿ ಮುಸ್ಲಿಂ ವಿರೋಧಿ ಭಾವನೆಯನ್ನು ಯಾವ ಮಟ್ಟಕ್ಕೆ ಜನರ ಮನಸ್ಸಿನ ಆಳಕ್ಕೆ ಇಳಿಸಿರಬಹುದು ಎಂಬುದನ್ನು ಅಂದಾಜಿಸಬಹುದು.
ಬಿಜೆಪಿಯ ಈ ರೀತಿಯ ನಿರ್ಲಜ್ಜವಾದ ಚುನಾವಣಾ ಸಿದ್ದತೆಯಲ್ಲಿ ಮಾಧ್ಯಮಗಳ ಒಂದು ಗುಂಪು ನೇರವಾಗಿ ಕೈ ಜೋಡಿಸಿದೆ. ಇದು ಆ ಮಾಧ್ಯಮಗಳು ಇಸ್ರೇಲ್ ನ ಪರವಾಗಿ ನಡೆಸುತ್ತಿರುವ ಸುದ್ದಿ ಪ್ರಚಾರದಲ್ಲಿ ಎದ್ದು ಕಾಣುತ್ತಿದೆ. ದೇಶದೊಳಗಡೆಯ ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಕಣ್ಣು ಮುಚ್ಚಿದ್ದ ಈ ಮಾಧ್ಯಮಗಳು ಈಗ ತಮ್ಮ ಪ್ರತಿನಿಧಿಗಳನ್ನು ನೇರವಾಗಿ ಇಸ್ರೇಲ್ ನೆಲದಲ್ಲಿ ಇಳಿಸಿದೆ ಅದರ ಭಾಗವಾಗಿಯೇ ಬಿಜೆಪಿ ಪರವಾದ, ಕೋಮು ಭಾವನೆ ಕೆರಳಿಸುವ ಆಕ್ರಮಣಕಾರಿ ಸುದ್ದಿಗಳಿಗೆ ಖ್ಯಾತರಾದ ಸುವರ್ಣ ಚಾನಲ್ ನ ಅಜಿತ್ ಹನುಮಕ್ಕನವರ್ ಇಸ್ರೇಲ್ ತಲುಪಿ ಲೈವ್ ಸುದ್ದಿಗಳನ್ನು ಬಿಜೆಪಿಯ ಚುನಾವಣಾ ಅಜೆಂಡಾಗಳಿಗೆ ಪೂರಕವಾಗಿ ಕಳುಹಿಸುತ್ತಿದ್ದಾರೆ.
ಯುದ್ದ ಭೂಮಿಯಲ್ಲಿ ನಿಂತು ಅಲ್ಲಿನ ವಾಸ್ತವ ಸುದ್ದಿಗಳನ್ನು ತನ್ನ ವೀಕ್ಷಕರಿಗೆ ತಲುಪಿಸುವುದು ಅಜಿತ್ ಉದ್ದೇಶವಾಗಿದ್ದರೆ, ಅವರು ತಲುಪಬೇಕಿರುವುದು ಇಸ್ರೇಲ್ ದಾಳಿಗಳಿಂದ ತತ್ತರಿಸಿರುವ, ಹತ್ತಾರು ಲಕ್ಷ ಜನ ದಿಗ್ಭಂಧನಕ್ಕೆ ಒಳಗಾಗಿರುವ, ಇಸ್ರೇಲ್ ಸೇನೆ ನೆಲದ ಮೇಲೆ ಸೈನಿಕ ಕಾರ್ಯಾಚರಣೆಗೆ ಗುರಿಯಾಗಿಸಿ ಸಿದ್ದತೆ ನಡೆಸಿರುವ ಗಾಝಾ ಕ್ಕೆ ಹೊರತು ಸಧ್ಯ ಪೂರ್ಣ ಪ್ರಮಾಣದಲ್ಲಿ ಅಪಾಯದಿಂದ ಹೊರಬಂದಿರುವ ಇಸ್ರೇಲ್ ಗೆ ಅಲ್ಲ ಎಂಬುದು ಸಮಚಿತ್ತದ ಜನರಿಗೆ ಅರ್ಥವಾಗುವ ವಿಷಯ.
- ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು




