ಬರೀ ತನ್ನ ದೇಶ ಮಾತ್ರವಲ್ಲ ಇಡೀ ಭೂಗೋಳವೇ ಶೋಷಕರಿಂದ ಮುಕ್ತವಾಗಿಸುವ ಕನಸು ಕಂಡ ಕವಿ ಹೃದಯದ ಕ್ರಾಂತಿಕಾರಿ ಚೆ ಗೆವಾರ. ಅವನು ಇಲ್ಲವಾಗಿ ಇಂದಿಗೆ 55 ವರ್ಷಗಳಾದವು.
55 ವರ್ಷ ಕಳೆದರೂ ಇಂದಿಗೂ ಯುವ ಜನತೆಯನ್ನು ತನ್ನ ವಿಚಾರಗಳ ಕಾರಣಕ್ಕಾಗಿ ವಿಶ್ವವ್ಯಾಪಿಯಾಗಿ ಸೆಳೆಯುವ ತಾಕತ್ತು ಇರುವುದು ಚೆ ಗೆವಾರ ನಿಗೆ ಮಾತ್ರ. ಅವನನ್ನು ಬಿಟ್ಟರೆ ಭಾರತದಲ್ಲಿ ಬದಲಾವಣೆಯ ತಹತಹದ ಯುವ ಜನರ ದೊಡ್ಡ ಐಕಾನ್ ಆಗಿರೋದು ಹುತಾತ್ಮ ಭಗತ್ ಸಿಂಗ್..
ಚೆ ಗೆವಾರನ ಆಶಯಗಳನ್ನು ಬಿತ್ತರಿಸುವ ಕೆಲಸಗಳನ್ನು ಕ್ರಾಂತಿಕಾರಿ ಸಂಘಟನೆಗಳು, ಎಡ ಸಂಘಟನೆಗಳು ಮತ್ತು ಜನಕೇಂದ್ರಿತವಾಗಿ ಕೆಲಸ ಮಾಡುವ ಪ್ರಗತಿಪರ ಸಂಘಟನೆಗಳು ಮಾಡುತ್ತಲೇ ಬಂದಿವೆ.
ಲಡಾಯಿ ಪ್ರಕಾಶನ ಚೆ ಗೆವಾರ ಚಿಂತನೆಗಳನ್ನು ಪಸರಿಸುವ ಭಾಗವಾಗಿ ಈತನಕ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದೆ. ಚೆ ಗೆವಾರನನ್ನು ಕ್ರಾಂತಿಕಾರಿಯಾಗಿ ರೂಪಿಸಿದ ಪ್ರವಾಸ ಕಥನ ಮೋಟಾರ್ ಸೈಕಲ್ ಡೈರಿ (ಅನು: ಡಾ. ಎಚ್ ಎಸ್ ಅನುಪಮಾ) ಅದರಲ್ಲೊಂದು. ಈ ಪುಸ್ತಕ ನಾಲ್ಕು ಮುದ್ರಣ ಕಂಡು ಯುವಜನರನ್ನು ದೊಡ್ಡ ಪ್ರಮಾಣದಲ್ಲಿ ತಲುಪಿದೆ. ಜತೆಗೆ ಫಿಡಲ್ ಕ್ಯಾಸ್ಟ್ರೊ ನೆನಪುಗಳ ಪುಸ್ತಕ ಚೆ: ಕ್ರಾಂತಿಕಾರಿ ಸಹಜೀವನ (ಅನು; ನಾ ದಿವಾಕರ), ಚೆ ಗೆವಾರ ನ ಇನ್ನೊಂದು ಪುಸ್ತಕ ಕ್ಯೂಬಾ ಕ್ರಾಂತಿ (ಅನು: ಬಿ. ಸುಜ್ಞಾನಮೂರ್ತಿ).
ಮೋಟಾರ್ ಸೈಕಲ್ ಡೈರಿ ಅನುವಾದಿಸುವ ಸಮಯದಲ್ಲಿ ಚೆ ಗೆವಾರನ ತೀವ್ರ ಪ್ರಭಾವಕ್ಕೆ ಸಿಲುಕಿದ ಲೇಖಕಿ ಡಾ. ಅನುಪಮಾ ಚೆ ಗೆವಾರ ನಡೆದಾಡಿದ ನೆಲದಲ್ಲಿ ಸಂಚರಿಸುವ ಪ್ರವಾಸ ಮಾಡಿ ಬಂದರು. ಈ ಪ್ರವಾಸ ಕಥನವನ್ನು ಚೆ ಗೆವಾರನ ನೆಲದಲ್ಲಿ ಎಂಬ ಶೀರ್ಷಿಕೆ ಅಡಿ ಪ್ರಕಾಶನ ಪುಸ್ತಕವಾಗಿಸಿತು.
ಈಗ ಚೆ ಗೆವಾರನ ಕುರಿತು ಮತ್ತೊಂದು ಪುಸ್ತಕವನ್ನು ಪ್ರಕಟಿಸಲು ಪ್ರಕಾಶನ ಮುಂದಾಗಿದೆ.
ಚೆ ಗೆವಾರನ ಸಂಗಾತಿ ಅಲೈಡಾ ಮಾರ್ಚ್ ಬರೆದಿರುವ ರಿಮೆಂಬರಿಂಗ್ ಚೆ ಪುಸ್ತಕವನ್ನು ಸಂಗಾತಿ ಡಾ. ಬಿ. ಆರ್ ಮಂಜುನಾಥ ಅವರು ಅನುವಾದ ಮಾಡಿದ್ದು ಅನುವಾದದ ಕೆಲಸ ಮುಗಿದಿದ್ದು ಮುಂದಿನ ಕೆಲಸಗಳು ಸುರುವಾಗಬೇಕಿದೆ.. ಕನ್ನಡದಲ್ಲಿ ಆ ಪುಸ್ತಕಕ್ಕೆ “ಚೆ ಜತೆಯಲ್ಲಿ” – ಚೆ ಜತೆಯಲ್ಲಿ ನನ್ನ ಬದುಕು ಎಂಬುದು ಪುಸ್ತಕದ ಉಪಶೀರ್ಷಿಕೆ. ಒಂದರ್ಥದಲ್ಲಿ ಚೆ ಜೊತೆಗಿನ ಅಲೈಡಾ ಳ ಜೀವನದ ಆತ್ಮಕಥನವೇ ಇದಾಗಿದೆ.
ತನ್ನ ಸಂಗಾತಿಗೆ ಪತ್ರ ಬರೆಯುವಾಗ ಚೆ ಗೆವಾರನ ಕವಿತೆಯ ಸಾಲು ಹೀಗಿದೆ; ಮತ್ತೆ ರಸ್ತೆ ಮಾಯವಾಗುವವರೆಗೂ ನಾವು ಜತೆಯಲ್ಲಿ ಸಾಗೋಣ. ಅಂದರೆ ಅಲೈಡಾಳ ಜತೆಗಿನ ಬದುಕು ಮಾರ್ಗಾತೀತ ಎಂಬುದು ಚೆ ಗೆವಾರನ ತರ್ಕ. ಅನಂತಯಾನವನ್ನು ದಾಖಲಿಸುವಾಗ ಈ ಸಾಲನ್ನು ಬಳಸಿದ್ದಾನೆ.
ಪುಸ್ತಕ ಬರುವ ಮುಂಚೆಯೇ ಚೇ ಕಣ್ಮರೆಯಾದ ಈ ದಿನ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಅನ್ನಿಸಿತು.
– ಬಸೂ ಸೂಳಿಬಾವಿ, ಪ್ರಗತಿಪರ ಚಿಂತಕರು




