ಆಚಾರ್ಯರ ಏಕಲವ್ಯನೂ, ಸಿದ್ರಾಮಯ್ಯ ಮತ್ತು ಭಟ್ಟನೂ

3 years ago

#Acharyas #Eklavya #Sidramaiah #Bhatta #machaiahmhipparagi

ಹಳೆಯದೆಲ್ಲ ಮತ್ತೆಮತ್ತೆ ಮರುಕಳಿಸುತ್ತೆ ಅಂತಾರೆ. ಇರಬಹುದು, ಆದರೆ ಹಾಗೆ ಮರುಕಳಿಸುವಾಗ ಒಂದಿಷ್ಟು ಬದಲಾವಣೆಗಳು ಜೊತೆಗೂಡಿರುತ್ತವೆ. ಅದನ್ನೇ ನಮ್ಮ ಜನ ಕಾಲ ಚಕ್ರ ತಿರುಗುತ್ತಿರುತ್ತೆ ಎಂದು ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ. ಮೇಲಿದ್ದವರು, ಕೆಳಗೆ; ಕೆಳಗಿದ್ದವರು ಮೇಲೆ!

ಈಗ ಯಾಕೆ ಈ ಮಾತು ಅಂತೀರಾ? ಕಾರಣವಿದೆ. ಕಳೆದ ಒಂದು ವಾರದಿಂದ ನಾಡಿನ ಸಾಂಸ್ಕೃತಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾದ ವಿಷ ಭಟ್ಟನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರು ಹೋಗುತ್ತಾರೆನ್ನುವ ವಿವಾದವೇ ಈ ಮಾತಿನ ಮೂಲ. ಅದಕ್ಕೂ ಮೊದಲು ಒಂದಷ್ಟು ಪುರಾಣ ಹೊಕ್ಕು ಬರೋಣ.

ಏಕಲವ್ಯನ ಕಥೆ ನಮಗೆಲ್ಲ ಗೊತ್ತು. ನಿಷದ ಎಂಬ ಪ್ರಾಂತ್ಯವನ್ನು ಆಳುತ್ತಿದ್ದ ಬುಡಕಟ್ಟು ಸಮುದಾಯದ ಒಬ್ಬ ರಾಜಕುವರ. ಬಿಲ್ವಿದ್ಯೆಯ ಬಗ್ಗೆ ಅಪಾರ ಆಸಕ್ತಿ. ಕುರು ಮತ್ತು ಪಾಂಡವ ಕುವರರಿಗೆ ಶಸ್ತ್ರಾಭ್ಯಾಸ ಬೋಧಿಸುತ್ತಿದ್ದ ದ್ರೋಣಾಚಾರ್ಯರ ಬಳಿ ಬಿಲ್ವಿದ್ಯೆ ಕಲಿಯಬೇಕೆಂಬುದು ಅವನ ಹಂಬಲ. ಹೋಗಿ ಕೇಳುತ್ತಾನೆ. ಆದರೆ ಒಬ್ಬ ಶೂದ್ರ, ಬುಡಕಟ್ಟು ವ್ಯಕ್ತಿಗೆ ತಾನು ವಿದ್ಯೆ ಕಲಿಸುವುದಿಲ್ಲ ಎಂದು ದ್ರೋಣಾಚಾರ್ಯ ನಿರಾಕರಿಸುತ್ತಾನೆ. ಏಕಲವ್ಯ ಧೃತಿಗೆಡುವುದಿಲ್ಲ.

ಕಾಡಿನಲ್ಲಿ ದ್ರೋಣಾಚಾರ್ಯರ ಪ್ರತಿಮೆ ಮಾಡಿಕೊಂಡು, ಆ ಪ್ರತಿಮೆಯನ್ನೇ ಗುರುವೆಂದು ಸ್ವೀಕರಿಸಿ; ದ್ರೋಣಾಚಾರ್ಯರು ತಮ್ಮ ಅರಸು ಶಿಷ್ಯವರ್ಗಕ್ಕೆ ವಿದ್ಯೆ ಹೇಳಿಕೊಡುವುದನ್ನು ಗಮನಿಸುತ್ತಾ, ಸ್ವಯಂಪ್ರೇರಿತನಾಗಿ ಬಿಲ್ವಿದ್ಯೆ ಕಲಿಯುತ್ತಾನೆ. ನಿಷ್ಣಾತನೂ ಆಗುತ್ತಾನೆ. ಕೊನೆಗೆ, ಗುರುದಕ್ಷಿಣೆಯ ರೂಪದಲ್ಲಿ ದ್ರೋಣಾಚಾರ್ಯರು ಆ ಏಕಲವ್ಯನ ಹೆಬ್ಬೆರಳು ಪಡೆಯುವುದು ಈ ವರ್ಣವ್ಯವಸ್ಥೆಯ ಕ್ರೌರ್ಯದ ಮತ್ತೊಂದು ದುರಂತಗಾಥೆ.

ಯಾವ ದ್ರೋಣಾಚಾರ್ಯರು ಶೂದ್ರ ಜಾತಿಯವನೆಂಬ ಕಾರಣಕ್ಕೆ ಏಕಲವ್ಯನಿಗೆ ವಿದ್ಯೆ ನಿರಾಕರಿಸಿದ್ದರೋ, ಅದೇ ಆಚಾರ್ಯ ಸಂತತಿಯ ವಿಷಭಟ್ಟ ಇವತ್ತು ತನ್ನ ಪುಸ್ತಕಗಳ ಬಿಡುಗಡೆಗೆ ಅದೇ ಶೂದ್ರ ಸಮುದಾಯದ ಸಿದ್ದರಾಮಯ್ಯನವರನ್ನು ಅಂಗಲಾಚುವಂತದ್ದಾಗಲಿ; ಗುರು ಆಚಾರ್ಯರ ಅನುಪಸ್ಥಿತಿಯಲ್ಲಿ ಅವರ ಪ್ರತಿಮೆಯನ್ನಿಟ್ಟುಕೊಂಡು ಶೂದ್ರಶಿಷ್ಯ ಏಕಲವ್ಯ ಅಭ್ಯಾಸ ಮಾಡಿದಂತೆ, ಶೂದ್ರ ಸಿದ್ದರಾಮಯ್ಯನವರ ಅನುಪಸ್ಥಿತಿಯಲ್ಲಿ ಬ್ಯಾನರ್‌ನಲ್ಲಿ ಅವರ ಫೋಟೊ ಛಾಪಿಸಿಕೊಂಡು ವಿಷಭಟ್ಟ  ತನ್ನ ಪುಸ್ತಕ ಬಿಡುಗಡೆ ಮಾಡಿಕೊಳ್ಳುವಂಥಾ ದೈನೇಸಿ ಸ್ಥಿತಿಗೆ ಬಂದದ್ದಾಗಲಿ ಎಂಥಾ ಕಾಕತಾಳೀಯವಲ್ಲವೇ?

ಅವರಿದ್ದ ಜಾಗದಲ್ಲಿ ಇವರು; ಇವರಿದ್ದ ಜಾಗದಲ್ಲಿ ಅವರು! ಒಂದೇ ಒಂದು ವ್ಯತ್ಯಾಸವೆಂದರೆ, ಅಂದು ಆಚಾರ್ಯರ ನಿರಾಕರಣೆಯ ಹಿಂದೆ ಒಂದು ಜಾತಿ ಕ್ರೌರ್ಯವಿತ್ತು; ಇವತ್ತು ಸಿದ್ದರಾಮಯ್ಯನವರು ಆ ಕಾರ್ಯಕ್ರಮಕ್ಕೆ ಹೋಗದಿರುವುದರ ಹಿಂದೆ ಒಂದು ಸಾಮಾಜಿಕ ಎಚ್ಚರವಿದೆ. ಅದೇ ರೀತಿ, ಪ್ರತಿಮೆಯಿಟ್ಟುಕೊಂಡು ಕಲಿತ ಏಕಲವ್ಯನಲ್ಲಿ, ವ್ಯವಸ್ಥೆಯನ್ನು ಪ್ರತಿರೋಧಿಸಿ ಕಲಿತೇ ತೀರಬೇಕೆನ್ನುವ ಛಲವಿತ್ತು; ಆದರೆ ಇಲ್ಲಿ, ಭಟ್ಟನಲ್ಲಿ ದೈನೇಸಿ ಸ್ಥಿತಿ ಇದೆ ಅಷ್ಟೆ!

ಅಂದಹಾಗೆ, ಈ ಅದಲು-ಬದಲಿನ ಆಟ ಸಾಧ್ಯವಾದದ್ದು ಬುದ್ಧ-ಬಸವ-ಗಾಂಧಿ ಎಂಬ ಎಚ್ಚರಗಳಿಂದಾಗಿ; ಬಾಬಾ ಸಾಹೇಬರೆಂಬ ಕ್ರಾಂತಿಕಾರಿ ಪ್ರಜ್ಞೆಯಿಂದಾಗಿ, ಅವರು ರಚಿಸಿದ ಸಂವಿಧಾನದಿಂದಾಗಿ!

ಈಗ ಗೊತ್ತಾಯ್ತಾ, ಆ ಮನಸ್ಥಿತಿಗಳು ಯಾಕೆ ಈ ಮಹನೀಯರನ್ನೂ, ಸಂವಿಧಾನವನ್ನೂ ದ್ವೇಷಿಸುತ್ತಾರೆ ಅಂತ….

– ಮಾಚಯ್ಯ ಎಂ ಹಿಪ್ಪರಗಿ

Leave a Reply