ಬಿ.ಜೆ.ಪಿ ಸಂಸದರೆಂಬ ತೊಗಲುಬೊಂಬೆಗಳ ಆತ್ಮಸಾಕ್ಷಿಗೆ ಒಂದಿಷ್ಟು ಪ್ರಶ್ನೆಗಳು

3 years ago

#few #questions #conscience #puppets #BJP #MP #jagadishkoppa

ಪ್ರಿಯ ಸಂಸದರೇ, ಈ ದಿನ ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ಈ ವರದಿಯು ಏಕಕಾಲಕ್ಕೆ ನಿಮ್ಮಗಳ ಗುಲಾಮಗಿರಿತನದ ಮನಸ್ಸನ್ನು ಹಾಗೂ ನಿಮ್ಮಂತಹವರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಜನತೆಯ ಬೌದ್ಧಿಕ ದಿವಾಳಿತನವನ್ನು ಅನಾವರಣಗೊಳಿಸಿದೆ.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಸಲ್ಲಬೇಕಾದ ಅನುದಾನ ಸ್ಥಗಿತಗೊಂಡಿದ್ದರೂ ಸಹ ನೀವು ಈವರೆಗೆ ಈ ಕುರಿತು ಸಂಸತ್ತಿನಲ್ಲಿ ದ್ವನಿ ಎತ್ತಿದ ಉದಾಹರಣೆಗಳು ಉಂಟಾ?

ಕೇಂದ್ರ ಸರ್ಕಾರ ನೀಡುವ ಆರ್ಥಿಕ ಅನುದಾನ ಸಿದ್ಧರಾಮಯ್ಯ ಅಥವಾ ಶಿವಕುಮಾರ್ ಅವರ ಜೇಬಿಗೆ ಹೋಗುವುದಿಲ್ಲ. ಅದು ನೇರವಾಗಿ ಈ ನೆಲದ ಬಡವರಿಗೆ ಸಲ್ಲಬೇಕಾದ ನಿಧಿ.

ಆರೋಗ್ಯ, ವಸತಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹೀಗೆ ಹಲವು ಪ್ರಮುಖ ಕ್ಷೇತ್ರಗಳಿಗೆ ನೀಡಬೇಕಾಗಿರುವ ಹಣವನ್ನು ತಡೆ ಹಿಡಿಯುವುದು ಅಥವಾ ಸ್ಥಗಿತಗೊಳಿಸುವುದು ನಿಮ್ಮ ದೃಷ್ಟಿಯಲ್ಲಿ ರಾಜಕೀಯ ಲೆಕ್ಕಾಚಾರ ಇರಬಹುದು. ಆದರೆ, ಪ್ರಜ್ಞಾವಂತ ನಾಗರೀಕರ ದೃಷ್ಟಿಯಲ್ಲಿ ಇದು ಅಮಾನುಷ ಕ್ರಿಯೆ.

ಈ ಅನುದಾನದ ಪ್ರತಿ ಪೈಸೆಯೂ ಕೂಡಾ ನೀವು ಪ್ರತಿನಿಧಿಸುವ ಕ್ಷೇತ್ರಗಳ ಬಡಜನತೆಗೆ ತಲುಪುತ್ತದೆ. ಈ ಕನಿಷ್ಠ ಜ್ಞಾನ ನಿಮ್ಮಲ್ಲಿ ಇರಲಿ.

ಬಿ.ಜೆ.ಪಿ. ಸಂಸದರಾಗಿದ್ದುಕೊಂಡು, ಕರ್ನಾಟಕದ ವಿಷಯದಲ್ಲಿ ಪಕ್ಷ ಭೇದ ಮರೆತು ಸದಾ ಕರ್ನಾಟಕದ ಸರ್ಕಾರಗಳ ಜೊತೆ ಕೈ ಜೋಡಿಸುತ್ತಿದ್ದ ದಿ.ಕೆ.ಅನಂತಕುಮಾರ್ ಅವರ ಸಂಸದೀಯ ಕಾರ್ಯ ಚಟುವಟಿಕೆಗಳನ್ನು ನೀವು ಗಮನಿಸುವುದು ಒಳಿತು.

ನೀವು ತಿನ್ನುವ ಅನ್ನ, ಕುಡಿಯುತ್ತಿರುವ ನೀರು, ಹಾಕುತ್ತಿರುವ ಬಟ್ಟೆ, ಓಡಾಡುತ್ತಿರುವ ಕಾರು ಇವುಗಳ ಹಿಂದೆ ಕರ್ನಾಟಕದ ಜನತೆಯ ತೆರಿಗೆ ಹಣದ ಋಣವಿದೆ. ಈ ಪ್ರಜ್ಞೆ ಸದಾ ನಿಮ್ಮ ಮನಸ್ಸಿನಲ್ಲಿರಲಿ.
ಇಲ್ಲದಿದ್ದರೆ, ನಿಮಗೆ ಮುಂದಿದೆ ಮಾರಿ ಹಬ್ಬ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply