ಬೆಂಗಳೂರು: ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದು ಸವಾಲಾಗಿದ್ದ ಪೊಲೀಸರಿಗೆ ಇದೀಗ ತಂತ್ರಜ್ಞಾನ ಅತ್ಯಂತ ದೊಡ್ಡ ವರದಾನವಾಗಿ ಪರಿಣಮಿಸಿದೆ. ಜಿಪಿಎಸ್ ತಂತ್ರಜ್ಞಾನದ ನೆರವು ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಹುದಿನಗಳಿಂದ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರರಾಜ್ಯ ಸರಗಳ್ಳರನ್ನ ಬಂಧಿಸಿದ್ದಾರೆ.
ಸೈಯದ್ ಬಾಷ (34), ಶೇಕ್ ಅಯೂಬ್ (32) ಬಂಧಿತ ಸರಗಳ್ಳರಾಗಿದ್ದು, ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಬಂಧಿತ ಸರಕಳ್ಳರು ಬಸ್‌ನಲ್ಲಿ ಬೆಂಗಳೂರಿಗೆ ಬಂದು ಬೈಕ್ ಕಳ್ಳತನ ಮಾಡಿ ಅದರಲ್ಲಿ ಸಂಚರಿಸುತ್ತಾ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಸರಗಳವಿನ ಬಳಿಕ ಕಳವು ಮಾಡಿದ ಬೈಕ್ ಬಿಟ್ಟು ಆಟೋದಲ್ಲಿ ಕೆ.ಆರ್.ಪುರಂಗೆ ತಲುಪಿ ಅಲ್ಲಿಂದ ಬಸ್ ನಲ್ಲಿ ಮತ್ತೆ ಆಂಧ್ರಕ್ಕೆ ತಲುಪುತ್ತಿದ್ದರು.
ಸರಗಳ್ಳತನ ಮಾಡಿದ ಕೂಡಲೇ ಬಟ್ಟೆ ಬದಲಿಸುತ್ತಿದ್ದ ಖದೀಮರು, ಸಿಸಿಟಿಯಲ್ಲಿ ಚಹರೆ ಗೊತ್ತೇ ಆಗದಂತೆ ಪರಾರಿಯಾಗುತ್ತಿದ್ದರು.
ಗಿರಿನಗರದಲ್ಲಿ ನಡೆದಿದ್ದ ಸರಗಳವು ಪ್ರಕರಣಗಳ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಗಿರಿನಗರ ಪೊಲೀಸರಿಗೆ, ಸಿಸಿಟಿವಿ ಪರಿಶೀಲಿಸಿದಾಗ ಕಳವು ಮಾಡಿದ ಬೈಕ್ ಪತ್ತೆಯಾಗಿತ್ತು. ಕಳವು ಮಾಡಿದ್ದ ಬೈಕ್‌ಗೆ ಜಿಪಿಎಸ್ ಅಳವಡಿಸಿ, ಪ್ರತಿದಿನ ಜಿಪಿಎಸ್ ಮೇಲೆ ನಿಗಾ ವಹಿಸಿದ್ದರು. 20 ದಿನಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಕದ್ದ ಬೈಕ್‌ನಲ್ಲೇ ಫೀಲ್ಡಿಗಿಳಿದರು. ಈ ಬಗ್ಗೆ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದ ಪೊಲೀಸರುಕೂಡಲೇ ಕೈಗೊಂಡು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.




