ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಹಣ ಮಾಡುವ ಹಪಾಹಪಿಗೆ ಬಿದ್ದಿರುವ ಬಿಜೆಪಿ ರಾಜ್ಯ ಸರ್ಕಾರದ ಮೂಲಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನೀರಾವರಿ ಇಲಾಖೆ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ಯಾವೆಲ್ಲ ಶಾಸಕರಿಗೆ ಮಂತ್ರಿ ಆಗದೆ ಇರುವುದರಿಂದ ಅಸಮಧಾನ ಇದೆ ಅವರಿಗೆ ದುಡ್ಡು ಮಾಡಿಕೊಡಲು ಹೊರಟಿದೆ ಎಂದು ಆಪಾದಿಸಿದರು.
ಇದಕ್ಕಾಗಿ ತರಾತುರಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ವಿಶ್ವೇರಯ್ಯ ನೀರಾವರಿ ನಿಗಮದಲ್ಲಿ, ಕರ್ನಾಟಕ ನೀರಾವರಿ ನಿಗಮಗಳ ಸಭ ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್ ನ ಮುಂದುವರೆದ ಭಾಗವಿದು. ಟೆಂಡರ್ ಮೊತ್ತವನ್ನು ಹೆಚ್ಚು ಮಾಡಿ, ಯಾರು ಹೆಚ್ಚು ಕಮಿಷನ್ ನೀಡುತ್ತಾರೆ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ. ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ. ಹೀಗೆ ಮಾಡಿ ಕಮಿಷನ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು
ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರೂ. ಬಾಕಿ ಬಿಲ್ ಇದೆ. 10% ಕಮಿಷನ್ ಕೊಟ್ಟವರಿಗೆ ಕೆಲಸ ಮಾರಾಟ ಮಾಡುವ ನಡೆಯುತ್ತಿದೆ, ಇದು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾಗಿದೆ. ಈ ಬಗ್ಗೆ ದಾಖಲೆಗಳಿದ್ದು ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು
ಸರ್ಕಾರಕ್ಕೆ, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ, ಮುಂದೆ ಕಾನೂನುಬಾಹಿರವಾಗಿ ಈ ರೀತಿ ಮಾಡಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರ, ಈ ವಿಚಾರವನ್ನು ತಾತ್ವಿಕ ಅಂತ್ಯ ಕಾಣಿಸುವವರೆಗೆ ನಾವು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದರು.
ಬಿಜೆಪಿ ಪಕ್ಷದ ಶಾಸಕರಲ್ಲೇ ಕಮಿಷನ್ ಹಂಚಿಕೆಯಲ್ಲಿ ಜಗಳವಾಗಿ, ಪತ್ರ ಬರೆದು ಮಾಹಿತಿ ಹೊರ ಹಾಕುತ್ತಿದ್ದಾರೆ. ನಮಗೂ ಸರ್ಕಾರ ನಡೆಸಿ ಅನುಭವ ಇದೆ. ಗುತ್ತಿಗೆದಾರರು, ಅಕಾರಿಗಳು ನಮ್ಮ ಬಳಿಯೂ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲದರ ಮೇಲೂ ನಾವು ನಿಗಾ ಇಟ್ಟಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಬಾಕಿ ಬಿಲ್ ಪಾವತಿ ವೇಳೆ ಕಮಿಷನ್ ಸಂಗ್ರಹಿಸಲು ವಕ್ತಿಯೊಬ್ಬರನ್ನು ಕೂರಿಸಲಾಗಿತ್ತು. ನಗರದ ರಸ್ತೆ ಗುಂಡಿ ಮುಚ್ಚಲು ಏಳು ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇದೆಲ್ಲಾ ಏನು ಎಂದು ಪ್ರಶ್ನಿಸಿದರು.
45 ದಿನಗಳ ಬಳಿಕ ಕಾಂಗ್ರೆಸ್ ಪಕ್ಷದ ನಮ್ಮ ಸರ್ಕಾರ ಬರಲಿದೆ. ಒಂದು ವರ್ಷದಿಂದ ನಡೆದಿರುವ ಎಲ್ಲಾ ಟೆಂಡರ್‍ಗಳನ್ನು ತನಿಖೆ ಮಾಡಿಸುತ್ತೇವೆ. ಅಕ್ರಮದಲ್ಲಿ ಭಾಗಿಯಾಗಿರುವ ಅಕಾರಿಗಳು, ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಎಚ್ಚರಿಸಿದರು.
ಶಾಸಕರು ಗುತ್ತಿಗೆದಾರರ ಮನೆ ಬಾಗಿಲಿಗೆ ಹೋಗಿ ಕೆಲಸ ತೆಗೋ, ಕಮಿಷನ್ ಕೋಡು ಎಂದು ಒತ್ತಡ ಹಾಕುತ್ತಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ದುಡ್ಡು ಲೂಟಿ ಹೊಡೆಯಲಾಗುತ್ತಿದೆ. ಸರ್ಕಾರದ ಈ ಭ್ರಷ್ಟಚಾರ ಕೊನೆಯಾಗಬೇಕು, ಅಧಿಕಾರಿಗಳು, ಗುತ್ತಿಗೆದಾರರು ಎಚ್ಚರಿಕೆಯಿಂದ ಇರಬೇಕು, ಅವ್ಯವಹಾರ ನಡೆಸಿದವರಿಗೆ ಮುಂದಿನ ದಿನಗಳಲ್ಲಿ ಗ್ರಹಚಾರ ಕಾದಿದೆ ಎಂದರು.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲೂ ಭಾರೀ ಅಕ್ರಮಗಳು ನಡೆಯುತ್ತಿವೆ. ಕೆಎಂಎಫ್ ಸೇರಿದಂತೆ ಹಲವು ಸಂಸ್ಥೆಗಳ ನೇಮಕಾತಿಯಲ್ಲಿ, ಅದರಲ್ಲೂ ನಷ್ಟದಲ್ಲಿರುವ ನಿಗಮ-ಮಂಡಳಿಗಳಿಗೂ ನೇಮಕಾತಿ ನಡೆಸಿ 30, 40 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಸುಮಾರು 250 ಕೋಟಿ ರೂಪಾಯಿಗೂ ಮೀರಿದ ಭ್ರಷ್ಟಚಾರ ನಡೆದಿದೆ. ಲೋಕಾಯುಕ್ತರು ಇದನ್ನು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕು, ನಮ್ಮ ಸರ್ಕಾರ ಅಕಾರಕ್ಕೆ ಬಂದಾಗ ಇದನ್ನೂ ತನಿಖೆ ನಡೆಸುತ್ತೇವೆ ಎಂದರು.



