ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಪ್ರತಿದಿನವೂ ಗುಜರಾತಿನ ಮಾದರಿಯ ಜಪವನ್ನು ಮಾಡುತ್ತಾ ಕರ್ನಾಟಕದ ಹಿರಿಮೆಯನ್ನು, ಕನ್ನಡಿಗರ ಅಸ್ಮಿತೆಯನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಯಾರ ಮಾದರಿಯೂ ಬೇಕಾಗಿಲ್ಲ. ನಮ್ಮದು ಅತ್ಯಂತ ಪ್ರಬುದ್ಧವಾದ, ಹೃದಯವಂತಿಕೆಯುಳ್ಳ, ದೂರದೃಷ್ಟಿತ್ವವುಳ್ಳ, ಪ್ರಗತಿಪರವಾದ, ಸಮಸಮಾಜದ ಮಾನವೀಯತೆಯ ಮೌಲ್ಯಗಳೊಂದಿಗೆ ಸಹಿಷ್ಣುತೆಯ ಅನೇಕ ಉದಾಹರಣೆಗಳು, ಕೊಡುಗೆಗಳು ಇರುವ ಸಮಾಜ.
ಇಂತಹ ಸಮಾಜ ಅಸ್ತಿತ್ವದಲ್ಲಿರಬೇಕಾದರೆ ಆಪರೇಷನ್ ಕಮಲದಂತಹ ಪ್ರಜಾಪ್ರಭುತ್ವದ ಅವನತಿಯ ಹಾದಿಯನ್ನು ಅನುಸರಿಸುವ ಅಭಿವೃದ್ಧಿಯ ಹೆಸರಿನಲ್ಲಿ ಧ್ವನಿ ಇಲ್ಲದವರ ಬದುಕನ್ನು ಕಸಿದುಕೊಳ್ಳುವ, ಧರ್ಮ, ಧರ್ಮಗಳ ನಡುವೆ ದ್ವೇಷದ ಭಾವನೆಯನ್ನು ಬಿತ್ತುವ, ವ್ಯಾಪಾರಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ, ಪ್ರಶ್ನಿಸುವವರನ್ನು ಬೆದರಿಸುವ, ವಿರೋಧಿಸುವವರನ್ನು ಕುತಂತ್ರಗಳಿಂದ ದಮನ ಮಾಡುವಂತಹ ಸಂಸ್ಕೃತಿಗಳು ಕರ್ನಾಟಕ ರಾಜಕಾರಣಕ್ಕೆ ಎಂದಿಗೂ ಬೇಕಿಲ್ಲ.
ನಾಲ್ವಡಿ ಕೃಷ್ಣರಾಜ ಒಡೆಯರವರ ಪ್ರಗತಿಪರವಾದ ವಿಚಾರಧಾರೆ, ಅಭಿವೃದ್ಧಿಯ ಆಲೋಚನೆಗಳು ಸದಾ ನಮ್ಮ ಅಸ್ಮಿತೆಗಳಾಗಿವೆ. ವಿಧಾನಸೌಧವನ್ನು ಕಟ್ಟಿಸಿದ ದಕ್ಷ ಆಡಳಿತಗಾರ ಕೆಂಗಲ್ ಹನುಮಂತಯ್ಯ ನಮ್ಮ ಮಾದರಿ, ನೀರಾವರಿ ಯೋಜನೆಗಳನ್ನು, ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಸ್ಪಟಿಕದಷ್ಟು ಶುದ್ಧ ಬದುಕನ್ನು ನಡೆಸಿದ ಎಸ್.ನಿಜಲಿಂಗಪ್ಪ ನಮ್ಮ ಮಾದರಿ, ಉಳುವವನಿಗೆ ಭೂಮಿ ನೀಡಿದ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ನಮ್ಮ ಮಾದರಿ, ಅಧಿಕಾರ ವಿಕೇಂದ್ರೀಕರಣದ ರೂವಾರಿ, ಹೊಸ ರಾಜಕೀಯ ಸಂಸ್ಕೃತಿಯ ನಾಂದಿಪುರುಷ ರಾಮಕೃಷ್ಣ ಹೆಗಡೆ ನಮ್ಮ ಮಾದರಿ, ಮಹಾನ್ ಗ್ರಂಥಗಳನ್ನು ಬರೆಯುತ್ತಲೇ ರಾಜಕೀಯ ರಂಗದಲ್ಲಿದ್ದು, ಬಡವರ ಮನೆಯ ಮಕ್ಕಳಿಗೆ ತಾಂತ್ರಿಕ ವೈದ್ಯಕೀಯ ಶಿಕ್ಷಣವನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ದಾರಿ ಮಾಡಿಕೊಟ್ಟ ವೀರಪ್ಪಮೊಯ್ಲಿ ನಮ್ಮ ಮಾದರಿ, ನೀರಾವರಿ ಯೋಜನೆಗಳಿಗೆ ಮತ್ತು ರಾಜ್ಯದ ಹಕ್ಕುಗಳಿಗಾಗಿ ಇಂದಿಗೂ ಶ್ರಮಿಸುತ್ತಿರುವ ದೇವೇಗೌಡರು ನಮ್ಮ ಮಾದರಿ, ರಾಗ, ದ್ವೇಷ ಅಸೂಯೆಗಳಿಲ್ಲದ ಹೃದಯವಂತಿಕೆಯ ಜೆ.ಹೆಚ್. ಪಟೇಲ್‌ರವರ ನಡವಳಿಕೆ ನಮ್ಮ ಮಾದರಿ, ಮಾಹಿತಿ ತಂತ್ರಜ್ಞಾನ ಮೂಲಕ, ಬಿಸಿ ಊಟದ ಯೋಜನೆಯ ಮೂಲಕ, ಬೆಂಗಳೂರನ್ನು ಜಗತ್ತಿಗೆ ರಾಜಧಾನಿಯನ್ನಾಗಿಸಿ ಕರ್ನಾಟಕವನ್ನು ಮಾದರಿಯನ್ನಾಗಿಸಿದ ಎಸ್.ಎಂ. ಕೃಷ್ಣ ನಮ್ಮ ಮಾದರಿ, ಅನ್ನಭಾಗ್ಯ ಯೋಜನೆಯ ಯೋಜನೆಯ ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ಸಿದ್ದರಾಮಯ್ಯ ನಮ್ಮ ಮಾದರಿ.
ಇದಲ್ಲದೇ ಸಾಮರಸ್ಯದ ಬದುಕಿನ ಸಂದೇಶವನ್ನು ಸಾರಿದ ಶಿಶುನಾಳ ಷರೀಫ ನಮ್ಮ ಮಾದರಿ. ಸಾಮಾಜಿಕ ಕ್ರಾಂತಿಯನ್ನು ಮಾಡಿ ಸಮಾಜದಲ್ಲಿ ಸಮಾನತೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾನ್ ಸಾಧನೆಯನ್ನು ಮಾಡಿದ ಬಸವಣ್ಣ ನಮ್ಮ ಮಾದರಿ, ಸರ್ವಾಜನಾಂಗದ ಶಾಂತಿಯ ತೋಟದ ಬೋಧನೆಯನ್ನು ಮಾಡಿರುವ ಕುವೆಂಪುರವರು ನಮ್ಮ ಮಾದರಿ.
ಇಂತಹ ನೂರಾರು ಮಾದರಿಗಳು, ವ್ಯಕ್ತಿತ್ವಗಳು ನಮ್ಮ ನಾಡಿನಲ್ಲೇ ಇರುವಾಗ ಕೇವಲ ರಾಜಕಾರಣಕ್ಕಾಗಿ ಬಿ.ಜೆ.ಪಿ.ಯವರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಗುಜರಾತಿನ ಮಾದರಿ ಎಂದು ಬೊಬ್ಬೆ ಹೊಡೆಯುತ್ತಾ ಆ ನಾಯಕರುಗಳ ಮುಂದೆ ತಲೆಬಾಗಿ ನಿಲ್ಲುತ್ತಾ ಕರ್ನಾಟಕದ ಅಸ್ಮಿತೆ, ಕನ್ನಡಿಗರ ಹಿರಿಮೆ ಇವುಗಳನ್ನು ನಿರ್ಲಕ್ಷಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಕರ್ನಾಟಕದ ಜನತೆ ಎಚ್ಚರ ತಪ್ಪಿದರೆ ನಾವು ಉತ್ತರ ಭಾರತೀಯ ನಾಯಕರ ಕಪಿಮುಷ್ಠಿಯಲ್ಲಿ ಅವರ ಆಣತಿಯಂತೆ ಬದುಕುವ ದಿನಗಳು ಬರಬಹುದು, ಗುಜರಾತಿನ ಜನರ ಗುಲಾಮರಾಗುವ ದಿನಗಳು ಬರಬಹುದು.
– ಕೆ.ಎಸ್.ನಾಗರಾಜು, ಬೆಂಗಳೂರು



