ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಕೇಳಲೆಬೇಕಾದ ಪ್ರಶ್ನೆಗಳಿವು…
ಪ್ರೀತಿಯ ನಾಡ ಬಾಂಧವರೆ,
ಕೋವಿಡ್ ಲಸಿಕೆಗಳನ್ನು ಸಮರ್ಪಕವಾಗಿ ನೀಡಲಾಗದೆ, ಸಮಸ್ಯೆಗಳನ್ನು ನಿರ್ವಹಿಸಲಾಗದೆ ಜನರ ಮಾರಣಹೋಮಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಅಪರಾಧಿ ಸ್ಥಾನದಲ್ಲಿ ನಿಂತಿವೆ. ಅಪರಾಧ ಸಾಧಾರಣವಲ್ಲ. ತನ್ನದೇ ದೇಶದ ಮಕ್ಕಳಿಗೆ ಲಸಿಕೆ ನಿರಾಕರಿಸಿ ಲಕ್ಷಾಂತರ ಜನರನ್ನು ಕೊಂದ ಕೊಲೆಗಾರರು ಹೊರಬೇಕಾದ ಅಪರಾಧ ಅದು. ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯು ಈಗ ದೇಶದ ನಾಗರಿಕರಿಗೆ ಲಸಿಕೆಯ ಕುರಿತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿದರು, ಅದಕ್ಕಾಗಿ ಲಸಿಕೆ ಜನ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ. ನಿಜವಾದ ಸಂಗತಿಗಳನ್ನು ಮರೆಮಾಚಲು ಪ್ರಾರಂಭಿಸಿದ್ದಾರೆ. ಗೊಬೆಲ್ಸ್ ಪರಂಪರೆಯವರು ಮತ್ತು ಅವರ ಅಧಿಕೃತ, ಅನಧಿಕೃತ ವಕ್ತಾರರುಗಳೆಲ್ಲ ಸೇರಿಕೊಂಡು ಸುಳ್ಳನ್ನು ಉತ್ಪಾದನೆ ಮಾಡಿ ಜನರಿಗೆ ಹಂಚಲು ಹೊರಟಿದ್ದಾರೆ. ಕೆಲವು ಮಾಧ್ಯಮಗಳನ್ನೂ ಕೂಡ ಈ ಗೊಬೆಲ್ಸ್ ಪರಂಪರೆಯವರೆ ನಿಯಂತ್ರಿಸುತ್ತಿರುವುದರಿಂದ ಸತ್ಯ ಏನು ಎಂದು ಜನರಿಗೆ ತಿಳಿ ಹೇಳಬೇಕಾದ ಅವೂ ಸಹ ನವಿಲು ಕಪ್ಪಗಿದೆ, ಕಾಗೆ ಬೆಳ್ಳಗಿದೆ ಎಂದು ಹೇಳುವ ಮೂಲಕ ಜನರಿಗೆ ದ್ರೋಹವೆಸಗುತ್ತಿದ್ದಾರೆ.
ವಿಶೇಷ ಕೋರಿಕೆ; ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ನೀಡಿ. ತಜ್ಞರುಗಳು ಹೇಳಿದಂತೆ ಕೇಳಿ ಕೊರೋನ ನಿರ್ಮೂಲನೆ ಮಾಡಿ. ಕೊರೋನ ನಿಸರ್ಗ ಸಹಜ ವಿಕೋಪ ನಿಜ. ಆದರೆ ಅದನ್ನು ನಿರ್ವಹಿಸಲು ವಿಫಲರಾದ್ದರಿಂದ ಈಗ ಅದು ರಾಜಕೀಯ ವಿಕೋಪವಾಗಿದೆ. ಸುಳ್ಳುಗಳನ್ನು ನಂಬಬೇಡಿ. ಯಾರು ಏನೇ ಹೇಳಿದರೂ ಪರಿಶೀಲಿಸಿ ನೋಡಿ , ಪ್ರಶ್ನಿಸಿ, ದೇಶ ಉಳಿಸಿ.
ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಥವಾ ಜನತೆ ಉತ್ತರಿಸಬೇಕಾಗಿಲ್ಲ. ಆಡಳಿತ ನಡೆಸುವ ಬಿಜೆಪಿಯು ಈಗ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ದೇಶದ ಜನ ಪ್ರಶ್ನೆ ಕೇಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ದನಿಗೂಡಿಸಿದೆ ಅಷ್ಟೆ. ಪ್ರಶ್ನೆ ಕೇಳುವುದು, ಸಲಹೆ ನೀಡುವುದು, ಪ್ರತಿಭಟಿಸುವುದು ಜನರ ಹಕ್ಕು. ಜನರ ದನಿಗೆ ಕಿವಿಗೊಟ್ಟು ಕೆಲಸ ಮಾಡಬೇಕಾಗಿರುವುದು ಸರ್ಕಾರಗಳ ಕರ್ತವ್ಯ. ವಿರೋಧ ಪಕ್ಷಗಳು, ನಾಡಿನ ಜನರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿರುವುದೂ ಸರ್ಕಾರದ ಕರ್ತವ್ಯವೆ.
೧. ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿಯೇ, ಭಾರತದಲ್ಲಿ ರೂಪಾಂತರ ಹೊಂದಿದ ಮಾರಣಾಂತಿಕ ಕೊರೋನ ವೈರಸ್ ತಳಿ ಬಿ.೧.೬೧೭ ಪತ್ತೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರಿ ಹಾನಿ ಮಾಡಬಹುದು ಎಂದು ಹೇಳಿರಲಿಲ್ಲವೆ? ಅದನ್ನು ಕೇಂದ್ರ ಸರ್ಕಾರ ಏಕೆ ನಿರ್ಲಕ್ಷಿಸಿತು? ಸಮರ್ಪಕ ಸಿದ್ಧತೆಗಳನ್ನು ಏಕೆ ಮಾಡಿಕೊಳ್ಳಲಿಲ್ಲ?
೨. ನಮ್ಮ ದೇಶದ, ವಿಶ್ವದ ವೈರಾಣು ತಜ್ಞರು, ವಿಜ್ಞಾನಿಗಳು ಫೆಬ್ರವರಿ, ಮಾರ್ಚ್ ವೇಳೆಗೆ ಭೀಕರ ಮಾರಣಾಂತಿಕವಾಗುವ ಕೊರೋನಾದ ಎರಡನೇ ಅಲೆ ಭಾರತಕ್ಕೆ ಬರುತ್ತದೆ ಎಂದು ಹೇಳಿರಲಿಲ್ಲವೆ?
೩. ಬಿಜೆಪಿಯವರಿಗೆ ಆತ್ಮ ಸಾಕ್ಷಿ ಇದ್ದರೆ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಈ ದೇಶದ ಪ್ರಧಾನ ಮಂತ್ರಿಯವರು ೨೮-೧-೨೦೨೧ ರಂದು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತವು ಕೊರೋನ ವಿರುದ್ಧ ಏಕಾಂಗಿಯಾಗಿ ಜಯ ಸಾಧಿಸಿದೆ ಎಂದು ಹೇಳಲಿಲ್ಲವೆ? ಪ್ರಧಾನಿಯವರು ಹಾಗೆ ಹೇಳಬೇಕಾದರೆ, ಅವರಿಗೆ ಯಾವ ವಿಜ್ಞಾನಿ, ಯಾವ ವೈರಾಣು ತಜ್ಞರು ವರದಿ ನೀಡಿದ್ದರು ಎಂಬುದನ್ನು ದೇಶದ ಜನರಿಗೆ ತಿಳಿಸಬೇಕಲ್ಲವೆ?
೪. ದಿನಾಂಕ: ೮-೨-೨೦೨೧ ರಂದು ಇದೇ ಪ್ರಧಾನಿ ನರೇಂದ್ರ ಮೋದಿಯವರು ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದಲ್ಲಿ ಜಗತ್ತಿನ ಯಾವ ದೇಶವೂ ಕೊರೋನ ವಿರುದ್ಧ ಜಯ ಸಾಧಿಸಿಲ್ಲ. ಆದರೆ ನಾವು ಏಕಾಂಗಿಯಾಗಿ ಅದೃಶ್ಯ ಶತ್ರುವಾದ ಕೊರೋನ ವಿರುದ್ಧ ಹೋರಾಟ ಮಾಡಿ ಜಯ ಸಾಧಿಸಿದ್ದೇವೆ ಎಂದು ಹೇಳಿದಾಗ ಬಿಜೆಪಿಯ ಸಚಿವರುಗಳು, ಸಂಸದರುಗಳು ಮೇಜು ಕುಟ್ಟಿ ಸಂಭ್ರಮಿಸಲಿಲ್ಲವೆ? ಹಾಗೆ ಮೇಜು ಕುಟ್ಟಿ ಸಂಭ್ರಮಿಸಿದವರಲ್ಲಿ ಕರ್ನಾಟಕದಿಂದ ಆರಿಸಿ ಹೋದ ಸಚಿವರು ಪ್ರಧಾನಿಯವರ ಹಿಂದೆಯೇ ಕೂತಿರುವುದನ್ನು ಜನರು ನೋಡಿಲ್ಲವೆ? ಅದೇ ಸಚಿವರೆ ಈಗ ಮುಂದೆ ನಿಂತು ಕಾಂಗ್ರೆಸಿನ ನಾಯಕರನ್ನು ನಿಂದಿಸುತ್ತಾ ಕೂತಿದ್ದಾರೆ. ಇವರು ಆತ್ಮಸಾಕ್ಷಿಯನ್ನು ಮಾರಾಟ ಮಾಡಿ ಎಷ್ಟು ದಿನವಾಯಿತು? ಇವರಿಗೆ ಮೆದುಳು, ಹೃದಯ ಇವೆಲ್ಲಿರಬೇಕಾದ ಜಾಗದಲ್ಲಿ ಇವೆಯೆ?
೫. ದೇಶದ ಜನರನ್ನು ದಾರಿ ತಪ್ಪಿಸಿ ಕ್ರೂರ ಕೊರೋನಾದ ಬಾಯಿಗೆ ದೂಡಿದವರು ಬಿಜೆಪಿಯವರಲ್ಲವೆ? ಕೊರೋನಾ ವಿರುದ್ಧ ಗೆಲುವು ಸಾಧಿಸಿದ್ದೇವೆ ಎಂದು ಪ್ರಧಾನಿಯವರು ಕೇವಲ ಒಂದೆರಡು ಬಾರಿ ಹೇಳಿದ್ದಲ್ಲ. ಜನವರಿ, ಫೆಬ್ರವರಿ ತಿಂಗಳಲ್ಲಿ ಹತ್ತಾರು ಬಾರಿ ಹೇಳಿದ್ದಾರೆ. ಅದಕ್ಕೆ ರಾಶಿ ರಾಶಿ ದಾಖಲೆಗಳಿವೆ ವಿವೇಕವಂತರು, ಬುದ್ಧಿವಂತರು ಅವರ ಹೇಳಿಕೆಗಳನ್ನು ಪರಿಶೀಲಿಸಬಹುದು. ಹಾಗೆ ಪರಿಶೀಲಿಸಿ ಅಜ್ಞಾನದ, ಅವಿವೇಕದ ಆರಾಧಕರಿಗೆ ತಿಳಿಸಿ ಹೇಳಬೇಕಾಗಿದೆ.
೬. ಈ ದೇಶದ ಜನರ ಆರೋಗ್ಯದ ರಕ್ಷಣೆಯನ್ನು ನೋಡಿಕೊಳ್ಳಬೇಕಾದ ಆರೋಗ್ಯ ಸಚಿವರು ೧೬-೧-೨೦೨೧ ರಂದು ದೇಶ ಕೊರೋನಾದ ವಿರುದ್ಧ ಜಯಸಾಧಿಸುವ ಹಂತಕ್ಕೆ ಬಂದಿದೆ ಎಂದು ಹೇಳಿರಲಿಲ್ಲವೆ? ಇದೇ ಸಚಿವರು ದಿನಾಂಕ ೧೪-೩-೨೦೨೧ ರಂದು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ [ಏಮ್ಸ್ ನಲ್ಲಿ] ಮಾಡಿದ ಭಾಷಣದಲ್ಲಿ “ಭಾರತವು ಕೋವಿಡ್ ವಿರುದ್ಧದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗುತ್ತಿದೆ” ಎಂದು ಹೇಳಿದ್ದು ಸುಳ್ಳೆ?
೭. ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಸ್ಸಾಂನಲ್ಲಿ ಕೊರೋನಾ ಇಲ್ಲ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಹೇಳಿದ್ದು ಸುಳ್ಳೆ?
೮. ಕುಂಭಮೇಳ ನಡೆಸಿದರೆ ಕೊರೋನಾ ಬರುವುದಿಲ್ಲ ಎಂದು ಉತ್ತರಾಖಂಡ್‌ನ ಮುಖ್ಯಮಂತ್ರಿ ಹೇಳಿರಲಿಲ್ಲವೆ? ಪ್ರಧಾನಿಗಳು ಮತ್ತಿತರ ಕೇಂದ್ರ ಸಚಿವರು ಚುನಾವಣಾ ರ‍್ಯಾಲಿಗಳಲ್ಲಿ ಸೇರುತ್ತಿದ್ದ ಜನಸ್ತೋಮವನ್ನು ನೋಡಿ ಏನೇನು ಮಾತನಾಡಿದ್ದಾರೆಂದು ದೇಶದ ಬುದ್ಧಿವಂತ ಜನ ಮರೆಯಲು ಸಾಧ್ಯವೆ?
೯. ಕೊರೋನಾವನ್ನು ಸೋಲಿಸಿ ದೇಶ ಗೆದ್ದುಬಿಟ್ಟಿತು ಎಂದು ಪ್ರಧಾನಿಯವರೇ ಜನವರಿಯಿಂದ ಹೇಳುತ್ತಾ ಬಂದ ಮೇಲೆ ಜನ ವ್ಯಾಕ್ಸಿನ್ ಯಾಕೆ? ಮಾಸ್ಕ್ ಯಾಕೆ? ಸ್ಯಾನಿಟೈಸರ್ ಯಾಕೆ? ಎಂಬ ನಿಲುವಿಗೆ ಬಂದದ್ದು ಸುಳ್ಳೆ? ಹಾಗಿದ್ದರೆ ಜನ ಮೋಸ ಹೋಗಲು ಕಾರಣ ಯಾರು? ಜನರನ್ನು ಕೊಂದ ಕೊಲೆಗಾರರು ಯಾರು?
೧೦. ದೇಶದಲ್ಲಿ ಕೇವಲ ಕೊರೋನಾ ವಿಕೋಪ ಇಲ್ಲ. ಜಗತ್ತಿನ ಅನೇಕ ದೇಶಗಳು ಕೊರೋನವನ್ನು ಸಮರ್ಥವಾಗಿ ನಿಭಾಯಿಸಿವೆ. ಆದರೆ ನಮ್ಮಲ್ಲಿ ರಾಜಕೀಯ ವೈಫಲ್ಯದ ಕಾರಣಕ್ಕೆ ಜನ ತಬ್ಬಲಿಗಳಾಗುತ್ತಿದ್ದಾರೆ ಅಲ್ಲವೆ?
೧೧. ದೇಶದ ವಿಜ್ಞಾನಿಗಳು ಎರಡನೇ ಅಲೆ ಬರುತ್ತದೆ ಎಂದು ಹೇಳಿದ್ದರು. ಇದನ್ನೇ ಸಂಸತ್ತಿನ ಉಪ ಸಮಿತಿ ಕೂಡ ಹೇಳಿತ್ತು. ಅದೇ ಸಂದರ್ಭದಲ್ಲಿ ವಿಶ್ವದ ಅನೇಕ ದೇಶಗಳು ಎರಡನೇ ಅಲೆಯಿಂದ ತತ್ತರಿಸುತ್ತಿದ್ದವು.
ಅವುಗಳಿಂದಲೂ ಆಡಳಿತ ನಡೆಸುವ ಸರ್ಕಾರ ಬುದ್ಧಿ ಕಲಿಯಲಿಲ್ಲ. ಮೊದಲ ಅಲೆಯಲ್ಲಿ ತತ್ತರಿಸಿಹೋಗಿದ್ದ ದೇಶಗಳು ತನ್ನ ದೇಶದ ವಿಜ್ಞಾನಿಗಳ, ತಜ್ಞರ ಮಾತು ಕೇಳಿ ತೀವ್ರ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಲಸಿಕೆಗಳನ್ನು ಹಾಕಿಸಿ ತಮ್ಮ ತಮ್ಮ ದೇಶಗಳ ಜನರನ್ನು ರಕ್ಷಿಸಿಕೊಂಡವು. ನಮ್ಮಲ್ಲಿ ಆಡಳಿತ ನಡೆಸುವವರ ಅಪ್ರಬುದ್ಧ, ಅರಾಜಕ, ಸರ್ವಾಧಿಕಾರಿ ಧೋರಣೆಯ ರಾಜಕೀಯ ತೀರ್ಮಾನಗಳಿಂದ ಜನ ಮರಣ ಹೊಂದುತ್ತಿದ್ದಾರೆ.
೧೨. ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನ್ ತಯಾರಿಸುವ ದೇಶವಾಗಿದೆ. ಭಾರತವು ಕಳೆದ ೭೦ ವರ್ಷಗಳಿಂದ ಸಾಧಿಸಿದ ಸಾಧನೆ ಇದು. ಇದರಿಂದಾಗಿಯೇ ದೇಶದ ಜನರಿಗೆ ಅತ್ಯಂತ ಉದಾತ್ತವಾಗಿ ಮತ್ತು ಉಚಿತವಾಗಿ ಸಿಡುಬು, ದಡಾರ, ಪೊಲಿಯೋ ಮುಂತಾದ ಲಸಿಕೆಗಳನ್ನು ಮನೆ ಮನೆಗೆ ತೆರಳಿ ಆಂದೋಲನದ ಮಾದರಿಯಲ್ಲಿ ನೀಡಿ ಭಾರತವನ್ನು ರಕ್ಷಿಸಲು ಸಾಧ್ಯವಾಯಿತು. ಒಂದು ಅಂದಾಜಿನ ಪ್ರಕಾರ ಸೆರಂ ಔಷಧ ತಯಾರಿಕಾ ಸಂಸ್ಥೆಯೊಂದೇ ವರ್ಷಕ್ಕೆ ಸುಮಾರು ೧೫೦ ಕೋಟಿ ಡೋಸ್ ವಿವಿಧ ಲಸಿಕೆಗಳನ್ನು ತಯಾರಿಸುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರಾದ ಆದಾರ್ ಪೂನಾವಾಲ ದಿನಾಂಕ ೧೮-೫-೨೦೨೧ರಂದು ಪತ್ರಿಕೆಗಳಿಗೆ ಹೇಳಿರುವಂತೆ ಭಾರತವು ಲಸಿಕೆ ಉತ್ಪಾದನೆಗೆ ಮತ್ತು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳಲಿಲ್ಲ. ಲಸಿಕೆ ಪೂರೈಸಲು ಆದೇಶಗಳನ್ನು ನೀಡಲಿಲ್ಲ. ಜನವರಿಯ ಹೊತ್ತಿಗೆ ದೇಶದಲ್ಲಿ ಕೊರೋನ ತುಸು ಇಳಿಮುಖವಾಗುತ್ತಿದೆಯೆಂದು ಭಾಸವಾದ ಕೂಡಲೇ ಆಡಳಿತ ನಡೆಸುತ್ತಿರುವವರು ಲಸಿಕೆ ವಿಚಾರದಲ್ಲಿ ಅಷ್ಟೊಂದು ಉತ್ಸಾಹ ತೋರಿಸಲಿಲ್ಲ. ಅದಕ್ಕಾಗಿ ಈ ಸಮಸ್ಯೆ ಪ್ರಾರಂಭವಾಯಿತೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಪೂನಾವಾಲ ಹೇಳುತ್ತಿರುವುದು ನಿಜವಾದರೆ ಜನರ ಸಾವಿನ ಹೊಣೆಯನ್ನು ಯಾರು ಹೊರಬೇಕು? ಶಿಕ್ಷೆಗೆ ಯಾರು ಅರ್ಹರು ನೀವೇ ತೀರ್ಮಾನಿಸಿ.
೧೩. ದೇಶವು ಜನವರಿಯಲ್ಲಿ ಸುಮಾರು ೧ ಕೋಟಿ ೬೫ ಲಕ್ಷ ಲಸಿಕೆಗಳಿಗೆ ಆದೇಶ ನೀಡಿತು. ಆಗ ಸೆರಂ ಸಂಸ್ಥೆ ನಿಗದಿ ಮಾಡಿದ್ದ ದರ ಒಂದು ಲಸಿಕೆಗೆ ೨೧೦ ರೂಪಾಯಿ . ಮಾರ್ಚ್ ತಿಂಗಳಲ್ಲಿ ಸುಮಾರು ೧೦ ಕೋಟಿ ಲಸಿಕೆಗಳಿಗೆ ಆದೇಶ ನೀಡಲಾಗಿದೆ. ಎರಡನೇ ಬಾರಿ ಲಸಿಕೆಯೊಂದಕ್ಕೆ ನಿಗದಿಪಡಿಸಿದ ದರ ೧೫೭.೫೦ ರೂ.ಗಳು. ಈ ಆದೇಶವೂ ಸಹ ಗೊಂದಲಕರವಾಗಿಯೇ ಇದೆ. ಏಪ್ರಿಲ್ ತಿಂಗಳಲ್ಲಿ ೪೦೦ ರೂ.ಗಳ ಬೆಲೆ ನಿಗದಿ ಮಾಡಲಾಯಿತು. ನಂತರ ಅದೇ ಏಪ್ರಿಲ್ ತಿಂಗಳಲ್ಲೇ ೩೦೦ ರೂ.ಗಳಿಗೆ ಇಳಿಸಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ೯೦೦ ರೂ.ಗಳಿಗೂ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಬೇಡಿಕೆಯನ್ನು ಆಧರಿಸಿ ಬೆಲೆಯನ್ನು ಹೆಚ್ಚಿಸುವ ಲಾಭ ಬಡುಕರಂತೆ ಲಸಿಕೆಗಳಿಗೆ ಬೆಲೆ ನಿಗದಿಪಡಿಸಲಾಗುತ್ತಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಜನರ ಹಿತಕ್ಕಾಗಿ ಅಡಳಿತ ನಡೆಸುತ್ತಿದೆಯೋ ಅಥವಾ ಜನರ ಕಗ್ಗೊಲೆ ನಡೆಯುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಅಂಗಡಿ ತೆರೆದುಕೊಂಡು ಕೂತಿದೆಯೋ?
೧೪. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಆದಾರ್ ಪೂನಾವಾಲ ತಾನು ಶೇ. ೫೦ ರಷ್ಟು ರಾಯಲ್ಟಿಯನ್ನು ಆಸ್ಟ್ರಝನೇಕ ಕಂಪೆನಿಗೆ ನೀಡುತ್ತಿದ್ದೇನೆಂದು ಹೇಳಿಕೊಂಡದ್ದಿದೆ. ಆದರೆ ಕೆ.ವಿ.ಬಾಲಸುಬ್ರಹ್ಮಣ್ಯಂ ಎಂಬ ಭಾರತದ ಇಮ್ಯುನಾಲಜಿಸ್ಟ್ ಹೇಳುವ ಪ್ರಕಾರ, ರಾಯಲ್ಟಿಯ ಪ್ರಮಾಣ ಶೇ.೫ ರಿಂದ ೧೦ ರಷ್ಟಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇದೇ ತಜ್ಞರ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಬೆಲೆ ಕೇವಲ ೩೦ ರೂ.ಗಳಷ್ಟಾಗಬಹುದು ಎಂದಿದೆ.
೧೫. ಇದೇ ಪೂನಾವಾಲ ವ್ಯಾಕ್ಸಿನ್ ಉತ್ಪಾದಿಸಲು ಹಣ ಬಿಡುಗಡೆ, ಹಣ ಬಿಡುಗಡೆ ಎಂದು ಒತ್ತಾಯ ಮಾಡಿದ್ದು ನಿಜ ಅಲ್ಲವೆ? ಮಾತೆತ್ತಿದರೆ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದು ಹೇಳುವ ಕೇಂದ್ರ ಸರ್ಕಾರದಿಂದ ಒಬ್ಬ ಕಾರ್ಪೊರೇಟ್ ಔಷಧಗಳ ಉದ್ಯಮಿಯನ್ನು ನಿಭಾಯಿಸಲಾಗಲಿಲ್ಲ. ಮೊದಲು ಹಣ ನೀಡಲು ನಿರಾಕರಿಸಿ ನಂತರ ಹಣ ಬಿಡುಗಡೆ ಮಾಡಿದ್ದು ನಿಜವಲ್ಲವೆ?
೧೬. ಲಸಿಕೆಗಳ ಬೆಲೆಯ ಕುರಿತು ಕಂಪೆನಿಗಳೇ ನಿರ್ಧರಿಸಬಹುದೆಂದು ಕೇಂದ್ರ ಸರ್ಕಾರ ಲಸಿಕಾ ನೀತಿಯೊಂದನ್ನು ಹೊರಡಿಸಿದೆ. ಇದರಿಂದಾಗಿ ರಾಜ್ಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದರೂ ನಮಗೆ ಜನರ ಜೀವ ಮುಖ್ಯ. ಎರಡನೇ ಅಲೆಯು ತಾರಕ ರೂಪದಲ್ಲಿದೆ. ಇದರ ನಡುವೆಯೇ ಮೂರನೇ ಅಲೆಯು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳಲಿದೆ ಎಂಬ ಎಚ್ಚರಿಕೆ ಮತ್ತು ಸೂಚನೆಗಳನ್ನು ತಜ್ಞರು ನೀಡುತ್ತಿದ್ದಾರೆ. ಅದರಿಂದ ರಕ್ಷಣೆ ಪಡೆಯಬೇಕಾದರೆ ಇರುವುದೊಂದೇ ದಾರಿ; ವ್ಯಾಕ್ಸಿನ್ ನೀಡುವುದು. ಆದರೆ ಅದಾರ್ ಪೂನಾವಾಲ ದೇಶದ ಎಲ್ಲರಿಗೆ ಲಸಿಕೆ ನೀಡಲು ಎರಡು ವರ್ಷಗಳಾಗಬಹುದೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ದೇಶದ ಜನರನ್ನು ಕಾಪಾಡುವುದು ಹೇಗೆ? ಕೇಂದ್ರ ಸರ್ಕಾರ ಈಗ ಕೆಲವು ಹೊಸ ಕಂಪೆನಿಗಳಿಗೆ ಆದೇಶ ನೀಡಿದೆ. ಅವು ಲಸಿಕೆಯ ಟ್ರಯಲ್ ಗಳನ್ನು ನಡೆಸಿ ಉತ್ಪಾದನೆ ಪ್ರಾರಂಭಿಸುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುತ್ತವೆ. ತಜ್ಞರು ಹೇಳುವಂತೆ ಒಂದು ವರ್ಷವೆ ಬೇಕಾಗಬಹುದು.
೧೭. ಇದಕ್ಕೆ ಈಗ ಇರುವ ಪರಿಹಾರವೊಂದೆ; ಈಗಾಗಲೇ ಅನೇಕ ದೇಶಗಳು ತಮ್ಮ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿವೆ. ಸಂಗ್ರಹಿಸಿಟ್ಟುಕೊಂಡಿವೆ. ವಿಶ್ವದ ಅನೇಕ ಕಂಪೆನಿಗಳು ವ್ಯಾಪಕ ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಸಾಧ್ಯವಾದ ಕಡೆಗಳಿಂದೆಲ್ಲ ಅವುಗಳನ್ನು ಪಡೆದು ಕೇಂದ್ರ ಸರ್ಕಾರ ಉಚಿತವಾಗಿ ಜನರಿಗೆ ಆಂದೋಲನದ ಮಾದರಿಯಲ್ಲಿ ನೀಡಬೇಕು.
೧೮. ಕೊರೋನ ನಿರೋಧಕ ಲಸಿಕೆಗಳನ್ನು ನೀಡುವುದಕ್ಕೆಂದೇ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ೩೫,೦೦೦ ಕೋಟಿ ರೂಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರಲ್ಲಿ ಒಂದು ಭಾಗದಷ್ಟು ಹಣವನ್ನೂ ಖರ್ಚು ಮಾಡಿಲ್ಲ ಏಕೆ? ರಾಜ್ಯಗಳು ಒಂದು ಲಸಿಕೆಗೆ ೩೦೦ ರೂ.ಗಳನ್ನು ನೀಡಿ ಯಾಕೆ ಕೊಂಡುಕೊಳ್ಳಬೇಕು? ಕರ್ನಾಟಕದಿಂದ ವರ್ಷಕ್ಕೆ ೨.೫ ಲಕ್ಷ ಕೋಟಿಗಳಷ್ಟು ತೆರಿಗೆಯನ್ನು ದೋಚಿಕೊಳ್ಳುವ ಕೇಂದ್ರ ಸರ್ಕಾರ ನಮಗೆ ವಾಪಸ್ಸು ನೀಡುತ್ತಿರುವುದು ಮಾತ್ರ ಕೇವಲ 50,000 ಕೋಟಿ ಮಾತ್ರ. ರಾಜ್ಯಗಳು ಭಿಕಾರಿಗಳಾಗುತ್ತಿವೆ. ನಮ್ಮ ರಾಜ್ಯದ ಸಂಸದರುಗಳು ಇದೆಲ್ಲದರ ಕುರಿತು ಕೇಂದ್ರ ಸರ್ಕಾರಕ್ಕೆ ಜೋರು ಮಾಡಿ ಕೇಳಬೇಕಲ್ಲವೆ? ಅವರು ಕೇಳುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ವಿವಿಧ ಮೂಲಗಳಿಂದ ಲಸಿಕೆ ಖರೀದಿಸಿ ಕೂಡಲೇ ಲಸಿಕೆ ನೀಡಿ ರಾಜ್ಯದ ಜನರನ್ನು ರಕ್ಷಿಸಬೇಕಾಗಿದೆಯೆಂದು ಒತ್ತಾಯಿಸುತ್ತಿದ್ದೇವೆ.
೧೯. ಬಿಜೆಪಿಯವರು ಮತ್ತವರ ಭಟ್ಟಂಗಿಗಳು ಮಾತನಾಡುವುದಕ್ಕೆ ಮೊದಲು ಯೋಚನೆ ಮಾಡಿ ಮಾತನಾಡಬೇಕು. ಕೇಂದ್ರ ಸರ್ಕಾರವು ಮಾರ್ಚ್ ತಿಂಗಳ ಒಳಗೆ ದೇಶದಲ್ಲಿರುವ ೩ ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿ ಮುಗಿಸುವ ಗುರಿ ನಿಗದಿಪಡಿಸಿಕೊಂಡಿತ್ತು. ಆದರೆ ಸಾಧ್ಯವಾಗಿದ್ದು ಮಾತ್ರ ೧.೪ ಕೋಟಿ ಮಾತ್ರ. ಯಾಕೆ ಗುರಿ ಸಾಧಿಸಲಾಗಲಿಲ್ಲ? ಆರೋಗ್ಯ ಕಾರ್ಯಕರ್ತರೆಂದರೆ ವೈದ್ಯರು ಮತ್ತು ಅದರ ಸಂಬಂಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಇವರು ಯಾರಾದರು ಲಸಿಕೆ ಹಾಕಿಸಿಕೊಳ್ಳಬೇಡಿ ಎಂದರೆ ಕೇಳುವವರಾ? ಹಾಗಿದ್ದರೆ ಯಾಕೆ ಇವರೆಲ್ಲರಿಗೆ ಲಸಿಕೆ ನೀಡಲಾಗಲಿಲ್ಲ? ಎಂಬುದನ್ನು ವಿವರಿಸಬೇಕು.
೨೦. ಲಸಿಕೆಗಳ ೩ನೇ ಹಂತದ ಟ್ರಯಲ್‌ಗಳ ಕುರಿತು ಬಗ್ಗೆ ಹಲವು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ ಗಗನ್ ದೀಪ್ ಎಂಬ ಪ್ರಖ್ಯಾತ ತಜ್ಞರು ಹಲವು ಸ್ಪಷ್ಟನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಕೇಂದ್ರದ ಆಡಳಿತಗಾರರು ಉತ್ತರಿಸಬೇಕಾಗುತ್ತದೆ. ಲಸಿಕೆಗಳ ಕುರಿತು ಅನುಮಾನಗಳಿದ್ದರೆ ಅವುಗಳನ್ನು ಬಗೆಹರಿಸಲು ಪ್ರಧಾನಿಗಳು, ಆರೋಗ್ಯ ಸಚಿವರು, ಸರ್ಕಾರದ ವಿವಿಧ ಹಂತಗಳ ತಜ್ಞರು, ಮುಖಂಡರುಗಳು ಮೊಟ್ಟ ಮೊದಲಿಗೆ ಲಸಿಕೆ ಹಾಕಿಸಿಕೊಂಡು ಏನೂ ಆಗಿಲ್ಲ ನೋಡಿ ಎಂದು ದೇಶದ ಜನರಿಗೆ ತೋರಿಸಿ ಹೇಳಬೇಕಾಗುತ್ತದೆ. ಇದನ್ನೇ ನಾಯಕತ್ವ, ಮುತ್ಸದ್ಧಿತನ ಎನ್ನುವುದು. ದೇಶದಲ್ಲಿ ಜನವರಿ ೧೬ ರಿಂದಲೇ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಆದರೆ ಪ್ರಧಾನಿಗಳು ಮತ್ತು ಗೃಹ ಸಚಿವರು ಲಸಿಕೆ ಹಾಕಿಸಿಕೊಂಡಿದ್ದು ಮಾರ್ಚ್ ೧ರಂದು. ಆರೋಗ್ಯ ಸಚಿವರು ಹಾಕಿಸಿಕೊಂಡಿದ್ದು ಮಾರ್ಚ್ ೨ ರಂದು. ಇವರುಗಳೆಲ್ಲ ಯಾಕೆ ಹೀಗೆ ಮಾಡಿದರು? ಇವರುಗಳೆಲ್ಲ ತಮಗೆ ೬೦ ವರ್ಷ ವಯಸ್ಸಾಗಿರಲಿಲ್ಲ ಎಂದು ಹೇಳಿ ಜಾರಿಕೊಳ್ಳಬಹುದು. ಆದರೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ವಯಸ್ಸಿನ ನಿರ್ಬಂಧಗಳಿರಲಿಲ್ಲ. ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವವರೆಲ್ಲ ಮುಂಚೂಣಿ ಕಾರ್ಯಕರ್ತರೇ ಅಲ್ಲವೆ? ಪ್ರಧಾನಿ ಮುಂತಾದವರು ಲಸಿಕೆಗಳಿಂದ ಜನರ ಮೇಲೆ ಯಾವ ಪರಿಣಾಮವಾಗುತ್ತಿದೆ ಎಂದು ಕಾದು ನೋಡಿ ಹಾಕಿಸಿಕೊಂಡರು ಎಂಬ ಆರೋಪವನ್ನು ಬಹುಪಾಲು ಜನ ಮಾಡುತ್ತಿದ್ದಾರೆ. ಜನರು ಮಾಡುತ್ತಿರುವ ಈ ಆರೋಪ ಸುಳ್ಳೆ?
೨೧. ನನಗೆ ತಿಳಿದ ಮಟ್ಟಿಗೆ ಕಾಂಗ್ರೆಸ್‌ನ ಯಾವ ನಾಯಕರೂ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳಿಲ್ಲ. ತಜ್ಞರು ಎತ್ತಿರುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ. ಲಸಿಕೆಗಳ ಟ್ರಯಲ್‌ಗಳನ್ನು ಪೂರ್ಣಗೊಳಿಸಿ ಎಂದು ಹೇಳಿದ್ದರೆ ಅದು ತಪ್ಪೆ? ನಾನಂತೂ ಅಧಿವೇಶನಗಳಲ್ಲಿ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಎಲ್ಲ ಕಡೆಯೂ ಕೊರೋನ ನಿಯಂತ್ರಿಸಬೇಕಾದರೆ ಲಸಿಕೆಯೊಂದೇ ಪರಿಹಾರ ಎಂದು ಹೇಳುತ್ತಾ ಬಂದಿದ್ದೇನೆ.
೨೨. ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರ ದೇಶಗಳಿಗೆ ಕೇವಲ ೩ ಡಾಲರ್‌ಗಳ ಬೆಲೆಗೆ ರಫ್ತು ಮಾಡಲಾಗಿದೆ. ಆದರೆ ನಮ್ಮ ದೇಶದ ಜನರಿಗೆ ೧೨೦೦ ರೂ.ಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ. ಬಡ ದೇಶಗಳಿಗೆ ಹೋಗಲಿ ಇಂಗ್ಲೆಂಡಿಗೂ ೫.೫ ದಶ ಲಕ್ಷ ವ್ಯಾಕ್ಸಿನ್ ಗಳನ್ನು ನಿಯಮ ಬಾಹಿರವಾಗಿ ರಫ್ತು ಮಾಡಲಾಗಿದೆ.
೨೩. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ಕೊಡುವುದಕ್ಕೋಸ್ಕರವಾಗಿಯೇ ಜನವರಿ ೨೦ನೇ ತಾರೀಖಿನಿಂದ ‘ಮೈತ್ರಿ’ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ ಮೊದಲ ವಾರದವರೆಗೆ ಸುಮಾರು ೮೫ ದೇಶಗಳಿಗೆ ೬.೫ ಕೋಟಿ ಲಸಿಕೆಗಳನ್ನು ರಫ್ತು ಮಾಡಲಾಗಿದೆ. ಬೇರೆ ಬಡದೇಶಗಳಿಗೆ ಕಳುಹಿಸಬೇಡಿ ಎಂಬಷ್ಟು ಸಂಕುಚಿತ ಮನಸ್ಸಿನವರಲ್ಲ ನಮ್ಮ ಜನರು. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕವನ್ನು ಜಾಗತಿಕ ಸಹಕಾರಗಳ ಮೂಲಕವೇ ನಿರ್ಮೂಲನೆ ಮಾಡಬೇಕು. ಆದರೆ ಜಗತ್ತಿನ ಬಹುಪಾಲು ದೇಶಗಳೆಲ್ಲ ಮೊದಲು ತಮ್ಮ ದೇಶದ ಜನರಿಗೆ ಲಸಿಕೆ ನೀಡುತ್ತಿವೆ. ಹೆಚ್ಚುವರಿ ಲಸಿಕೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಆದರೆ ಭಾರತ ಮಾತ್ರ ಇಂಗ್ಲೆಂಡಿಗೂ ೫.೫ ಮಿಲಿಯನ್ ಲಸಿಕೆಗಳನ್ನು ರಫ್ತು ಮಾಡಿದೆ. ನಮ್ಮ ದೇಶದ ಪ್ರಧಾನಿಗಳು ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಅಲ್ಲವೆ?
೨೪. ಅಮೇರಿಕದಂತಹ ದೇಶ ಕೂಡ ಒಂದೇ ಒಂದು ಡೋಸ್ ಲಸಿಕೆಯನ್ನು ರಫ್ತು ಮಾಡಲಿಲ್ಲ ಅಲ್ಲವೇ? ೨೦೨೦ರ ಜುಲೈ, ಆಗಸ್ಟ್ ತಿಂಗಳುಗಳಲ್ಲೆ ಜಗತ್ತಿನ ವಿವಿಧ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿದ್ದರು. ಉತ್ಪಾದಿಸಿಕೊಡುವಂತೆ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕೆನಡ, ಯುರೋಪಿಯನ್ ಒಕ್ಕೂಟ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಎರಡರಿಂದ ೫ ಪಟ್ಟು ಹೆಚ್ಚು ಲಸಿಕೆಗಳಿಗಾಗಿ ಆದೇಶ ನೀಡಿದ್ದವು. ಮುಂದುವರೆಯುತ್ತಿರುವ ದೇಶಗಳಾದ ಇಂಡೋನೇಶಿಯಾ, ಬ್ರೆಜಿಲ್, ಆಫ್ರಿಕಾದ ಒಕ್ಕೂಟದ ದೇಶಗಳೂ ಸಹ ತನ್ನ ಜನಸಂಖ್ಯೆಯ ಶೇ. ೪೦ಕ್ಕೂ ಹೆಚ್ಚು ಲಸಿಕೆಗಳಿಗೆ ಆದೇಶ ನೀಡಿದ್ದವು. ಆದರೆ ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವವರು ೨೦೨೧ರ ಜನವರಿಯಲ್ಲಿ ೧ ಕೋಟಿ ೬೫ ಲಕ್ಷ ಲಸಿಕೆಗಳಿಗೆ ಮಾತ್ರ ಆದೇಶ ನೀಡಿದ್ದರು. ಇಂಥ ಮತಿಹೀನ ತೀರ್ಮಾನಗಳಿಂದಾಗಿಯೇ ದೇಶದಲ್ಲಿ ಲಕ್ಷಾಂತರ ಜನ ಮರಣ ಹೊಂದುತ್ತಿದ್ದಾರೆ. ಮೋದಿಯವರ ಇಂಥ ಭೀಕರ ತಪ್ಪುಗಳನ್ನು ಸಮರ್ಥನೆ ಮಾಡುವುದಕ್ಕಾಗಿಯೇ ಈಗ ಅವರ ಪಟಾಲಂ ಜನರನ್ನು, ವಿರೋಧ ಪಕ್ಷಗಳನ್ನು ನಿಂದಿಸುವ ಪ್ರಾಪಗಾಂಡ ಪ್ರಾರಂಭಿಸಿದೆ. ಇಂಥ ನಿರ್ಲಜ್ಜ ರಾಜಕಾರಣವನ್ನು ಮಾಡುತ್ತಿರುವವರನ್ನು ಗೊಬೆಲ್ಸ್ ಪರಂಪರೆಯವರು ಎನ್ನದೆ ಬೇರೆ ದಾರಿ ಇದೆಯೇ.
೨೫. ಬಿಜೆಪಿಯವರು ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ಜನರ ಮೇಲೆ ಆರೋಪ ಮಾಡುತ್ತಾರಲ್ಲ ಆ ಅವಧಿಯಲ್ಲಿ ಮಾರ್ಚ್ ೭ ನೇ ತಾರೀಖಿನಿಂದ ಏಪ್ರಿಲ್ ೨೫ ರವರೆಗೆ ಪ್ರತಿ ದಿನ ೨೫ ಲಕ್ಷ ಡೋಸ್ ನಿಂದ ಹಿಡಿದು ೪೫ ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಆದರೆ ಜನ ಲಸಿಕೆ ಬೇಕು ಎಂದು ಏಪ್ರಿಲ್ ೨೫ ರಿಂದ ಈಚೆಗೆ ದಿನಕ್ಕೆ ಕೇವಲ ೧೦ ರಿಂದ ೧೩ ಲಕ್ಷಕ್ಕೆ ಇಳಿಸಿರುವುದು ಏಕೆ? ಲಸಿಕೆ ಬೇಕು ಎಂದು ಜನ ಕೇಳುತ್ತಿದಾರಲ್ಲ ಕೊಡಿ ಹಾಗಿದ್ದರೆ. ಏಪ್ರಿಲ್ ೨೮ ನೇ ತಾರೀಖಿನಂದು ಒಂದೇ ದಿನ ೧.೩೩ ಕೋಟಿ ಯುವಕರು ಲಸಿಕೆ ಬೇಕು ಎಂದು ಕೋರಿದರು. ಮೇ ೧ ರಿಂದ ಲಸಿಕೆ ೧೮ ತುಂಬಿದವರಿಗೂ ಲಸಿಕೆ ನೀಡಲಾಗುವುದೆಂದು ಹೇಳಿ ಕಡೆಗೆ ಅನಿರ್ಧಿಷ್ಟಾವಧಿ ಮುಂದೂಡಿದರು. ಇನ್ನೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ ಏಕೆ? ಖಾಸಗಿ ಆಸ್ಪತ್ರೆಗಳಿಗೆ ಹೋಗಿ ೧೦೦೦ ರೂ.ಗಳಿಗೂ ಅಧಿಕ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಲಿ ಎಂದು ತೀರ್ಮಾನಿಸಿ ಸರ್ಕಾರ ಲಸಿಕೆ ನೀಡುತ್ತಿಲ್ಲವೆ? ಇದನ್ನೆಲ್ಲ ನೋಡಿದರೆ ಕೇಂದ್ರ ಸರ್ಕಾರ ಜನಪರವಾಗಿದೆ ಎನ್ನಿಸುತ್ತದೆಯೇ?
೨೬. ಕೊರೋನ ಎರಡನೇ ಅಲೆಯ ಸಾವು ನೋವುಗಳಿಗೆ, ಲಸಿಕೆ ಅಭಾವಕ್ಕೆ ಕೇಂದ್ರದ ಬಿಜೆಪಿ ನಾಯಕರುಗಳ ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ, ವಿಜ್ಞಾನಿಗಳ, ತಜ್ಞರ ಮಾತು ಕೇಳದ ಸರ್ವಾಧಿಕಾರಿ, ಹೆಸರಿಗೆ, ಕೀರ್ತಿಗೆ ಹಪಹಪಿಸುವಿಕೆಯೇ ಕಾರಣ. ಜನರ ಕಗ್ಗೊಲೆಗಳಿಗೂ ಇದೇ ಕಾರಣ.
೨೭. ಲಸಿಕೆ ನೀಡಲು ಸಿದ್ಧಪಡಿಸಿರುವ ತಂತ್ರಾಂಶದ ಗೊಂದಲ, ಬೆಲೆಯ ಗೊಂದಲ, ಅಸ್ಪಷ್ಟತೆ, ಅರಾಜಕತೆ, ಸರ್ವಾಧಿಕಾರಿ ಧೋರಣೆ, ಲಸಿಕೆಗಳ ಕೊರತೆ, ಕಾರ್ಪೊರೇಟ್‌ಗಳ ಲಾಭ ಬಡುಕತನ, ಅಪಾರದರ್ಶಕತೆ, ಅವೈಜ್ಞಾನಿಕತೆ, ಜಗತ್ತಿನ ತಜ್ಞರುಗಳೆಲ್ಲ ಭಾರತದಲ್ಲಿ ಎರಡನೇ ಅಲೆ ಬರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರೂ ಭಾರತ ಕೊರೋನಾ ವಿರುದ್ಧ ಗೆದ್ದುಬಿಟ್ಟಿದೆ ಎಂದು ಹೇಳಿಕೆ ನೀಡಿದ ಹುಂಬತನ ಮುಂತಾದವುಗಳೆಲ್ಲ ಸೇರಿಕೊಂಡು ಜನರ ಸಾವುಗಳಿಗೆ ಕಾರಣವಾಗಿದೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸದ
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು
ದಿನಾಂಕ; ೨೨-೫-೨೦೨೧

One Response
SINCE FROM INDEPENDENCE CONGRESS HELPED OUR COUNTRY PEOPLE EVERYBODY KNOWS OF CONGRESS WORK AND DEVELOPMENT FOR PEOPLE OF INDIA