ಜಾರುವ ಅಮಲು: ಅಮಲಿಗೆ ಒಳಗಾಗುವುದಕ್ಕೆ ನಾನಾ ವಸ್ತುಗಳಿವೆ

3 years ago

ಜಾರುವೆ ಜಾರುವೆ ಜಾರುವದರಲೇಕೋ ಮೋಹ
ಜಾರಿಕೆಯಲಿ ಇರುವುದೆಂತ ಚೆಲುವು,
ಜಾರುವುದಲ್ಲೇನೋ ನನ್ನ ಒಲವು.

ಜಾರಿದ ಮೇಲೆ ಜಾರದಿರಲು
ಜಾಗರನಾಗುವೆ ಜಾಣನಿರಲು
ಜಾದುಗಾರನು ಜಾಲ ಬೀಸುವನು
ಜಾಗ್ರತೆಯ ಜಾಡಿಸಿ ಜಾರುವೆ ಮತ್ತೆ ಜಾರುವೆ.

ಜಾರುವ ಜಾಗದ ಜಾಡು ತಿಳಿದರು
ಜಾರುವ ಜಾಡ್ಯದ ಜಾಯಮಾನವು
ಜಾರೋ ಸುಖ ಸವಿದು ಜಾರದಿರಲು
ಜಾನಿಸುತ್ತಲೇ ಜಾರುವೆ ಮತ್ತೆ ಜಾರುವೆ.

ಏಕೋ ಈ ಹಾಡು ಪದೇ ಪದೇ ನೆನಪಿಗೆ ಬರುತ್ತಿರುತ್ತದೆ.
ವ್ಯಕ್ತಿಯ ಜಾಗ್ರತೆಯನ್ನೂ ಮೀರಿ ಮನಸ್ಸು ವಿಷಯಗಳಿಗೆ ಜಾರುವಂತಹ ಪರಿಯನ್ನು ಧ್ವನಿಸುವ ಈ ಕವನ ಒಂದು ರೀತಿಯಲ್ಲಿ ಒಬ್ಬ ತನ್ನನ್ನು ತಾನು ಪರೀಕ್ಷಿಸಿಕೊಳ್ಳುವಂತಿದೆ.

ಮನಸ್ಸು ಒಂದು ವಸ್ತು ಅಥವಾ ಶರೀರ ರೂಪದಲ್ಲಿ ಇಲ್ಲವೇ ಇಲ್ಲ. ಆದರೂ ಅದಕ್ಕೆ ಸೆಳೆತವೊಂದಿದೆ. ಆ ಸೆಳೆತದಿಂದಾಗಿ ದೇಹವೂ ಕೂಡ ಸೋಲುತ್ತದೆ. ಆ ಸೋಲುವಿಕೆಯೋ ಒಂದು ವರ್ಣಿಸಲಾಗದಂತಹ ತಾಧ್ಯಾತ್ಮದ ಸ್ಥಿತಿ. ಆ ಸ್ಥಿತಿಯನ್ನು ಒಂದು ಹಂತಕ್ಕೆ ಹೀಗೆ ವರ್ಣಿಸಬಹುದು.

ವ್ಯಕ್ತಿಯೊಬ್ಬ ಕಾಮಾತುರನಾಗಿದ್ದಾನೆ. ಲೈಂಗಿಕಾಂಗವು ಬಿಗಿಯಾಗಿದೆ. ಮೈ ಬಿಸಿಯಾಗಿದೆ. ಅವನ ಕಣ್ಣುಗಳಿಗೆ ತನ್ನ ಕಾಮದಾಹವನ್ನು ತೀರಿಸಬಲ್ಲ ಮೂಲವೊಂದೇ ಕಾಣುತ್ತಿರುವುದು. ಅದೋ ಉನ್ಮತ್ತವಾಗಿ ಅತ್ತ ಕಡೆಯೇ ಕೇಂದ್ರೀಕೃತವಾಗಿದೆ. ಹೋಗಬೇಕಾದ ದಿಕ್ಕನ್ನು ಬದಲಿಸಿದ್ದಾನೆ. ಮಾಡಬೇಕಾದ ಕೆಲಸವನ್ನು ಬದಿಗಿಟ್ಟಿದ್ದಾಗಿದೆ. ತನ್ನ ತೃಷೆ ತೀರಿಸಬಲ್ಲ ಆ ಮೂಲವು ಅದ್ಯಾವುದೋ ಸ್ಥಳದಲ್ಲಿದೆ. ಅದರಿಂದ ಒಂದು ರೀತಿಯ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಕ್ಕಿದೆ ಅಥವಾ ಸ್ವಲ್ಪ ಮನಸ್ಸು ಮಾಡಿದರೆ ಒದಗುತ್ತದೆ. ಅದರ ಮುಂದೆಯೇ ತಾನಿದ್ದಾನೆ. ಅದನ್ನು ಹೇಗಾದರೂ ಹಿಂಬಾಲಿಸಿ, ಒಲಿಸಿಕೊಂಡು ಸಂಭೋಗಿಸಿಬಿಡಬೇಕು ಎಂದು ಅಲ್ಲಲ್ಲಿಯೇ ತಿರುಗುತ್ತಿದ್ದಾನೆ. ಆ ಸಮಯದಲ್ಲಿ ತನ್ನ ಮೈಯಲ್ಲಿ ಏರಿರುವ ಆ ಬಿಸಿಯೋ ಮತ್ತೊಂದು ಮೈಯ ಬಿಸಿಯ ಹಸಿಹಸಿ ಕೂಡುವಿಕೆಯನ್ನು ಬಯಸುತ್ತಿದೆ. ಅದು ಬೆವರಿನ ವಾಸನೆಯಿಂದ ಕೂಡಿರಲಿ, ದೇಹ ಅಂಟುಅಂಟಾಗಿರಲಿ, ಶುಭ್ರತೆ ಕಳಕೊಂಡು ಜಿಡ್ಡುಜಿಡ್ಡಾಗಿರಲಿ, ಎಲ್ಲವೂ ಹಸಿಹಸಿಯ ಸುಖವೇ. ಆ ಕೂಡುವಿಕೆಯ ಕ್ರಿಯಾಭಾವ ಅನಂತವಾಗಿರುವುದೇನೋ ಎಂಬ ನಿರೀಕ್ಷೆ. ಆ ರುಚಿಗಾಗಿ ನಾಲಿಗೆಯ ಕೆಳಗೆ ಲಾಲಾರಸ ಹೊರಳಾಡುತ್ತಿದೆ. ದವಡೆಯ ಬಿಗಿತ, ಲೈಂಗಿಕಾಂಗದ ಬಿರುಸು, ಎದೆಯಲ್ಲಿ ಎದ್ದಿರುವ ವೇಗ ಇವಕ್ಕೆಲ್ಲಾ ಒಂದೇ ಮಾರ್ಗ ಆ ಹಸಿಬಿಸಿಯ ಕೂಡುವಿಕೆ.

ಏಕೆಂದರೆ ಅದಕ್ಕೆ ಭೂತಕಾಲದ ಯಾವುದೋ ಚರಿತ್ರೆಯೊಂದಿದೆ ಎಂಬುದೂ ತಿಳಿದಿಲ್ಲ. ಈ ಹೊತ್ತಿನ ನಂತರದ ಭವಿಷ್ಯತ್ತಿನ ಕಾಲವೂ, ಮುಂದೆ ವಿದ್ಯಮಾನಗಳೂ ಇವೆ ಎಂಬುದೂ ತಿಳಿದಿಲ್ಲ. ಅಲ್ಲಿ ಆಗ ಅದೇನೋ ಆಗಿಬಿಡಲೇ ಬೇಕು.

ಇದೊಂದು ಸ್ಥಿತಿ.

ಕಾಮಕ್ಕೆ ಮಾತ್ರವೇ ಇಂತಹ ಸ್ಥಿತಿ ಇರುವುದು ಎಂಬ ಕಾಟೇವಾಡ ತೊಡಬೇಕಾಗಿಲ್ಲ. ಕೋಪಕ್ಕೂ ಈ ಸ್ಥಿತಿಯಿದೆ. ಅದೇ ರೀತಿ ಆಸೆಗಿದೆ, ನಿರಾಸೆಗಿದೆ, ಅಹಂಗಿದೆ, ಅಸೂಯೆಗಿದೆ, ದ್ವೇಷಕ್ಕಿದೆ, ಲೋಭಕ್ಕಿದೆ, ಪ್ರತಿಷ್ಠೆಗಿದೆ, ಅಧಿಕಾರಕ್ಕಿದೆ, ಕೀರ್ತಿಗಿದೆ, ಸಂತೋಷಕ್ಕಿದೆ, ದುಃಖಕ್ಕಿದೆ, ಪ್ರತಿಭೆಗಿದೆ, ಕೌಶಲ್ಯಕ್ಕಿದೆ, ಅರಿಮೆಗಳಲ್ಲಿದೆ (ಕೀಳರಿಮೆ, ಮೇಲರಿಮೆ), ಸ್ವಜನಪಕ್ಷಪಾತಕ್ಕಿದೆ; ಹೀಗೆ ಹಲವಾರು ಮನಸ್ಥಿತಿಗಳಲ್ಲಿದೆ. ಈ ಸ್ಥಿತಿಯನ್ನು ಅರ್ಥ ಮಾಡಿಸಲು ಬಳಸಬಹುದಾದ ಸರಳ ಪದವೆಂದರೆ ಅದು ಅಮಲು.

ಅಮಲಿಗೆ ಒಳಗಾಗುವುದಕ್ಕೆ ನಾನಾ ವಸ್ತುಗಳಿವೆ. ಅಧ್ಯಾತ್ಮ ಜಿಜ್ಞಾಸುಗಳಾರೋ ಆರು ವಿಷಯಗಳಾಗಿ ವಿಭಾಗಿಸಿದ್ದಾರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರವೆಂದು. ನಿಜ ಇವೆಲ್ಲವೂ ಕೂಡ ಅಮಲಿನ ವಸ್ತುಗಳು. ಈ ಅಮಲಿನ ಸ್ಥಿತಿಯನ್ನು ಉಂಟು ಮಾಡುವ ಇದರ ಬಗ್ಗೆ ಜಾಗೃತವಾಗಲು ನಾನಾ ರೀತಿಗಳಲ್ಲಿ ಜಿಜ್ಞಾಸುಗಳು ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರು.

ಅತ್ಯಾಚಾರವೆಂಬುದು ಉಂಟಾಗುವುದು ಇಂತಹುದೇ ಅಮಲಿನಿಂದ. ಅದೋ ಕಾಮದ ಅಮಲು. ಆ ಅಮಲಿಗೆ ಬಲ ನೀಡಲು ಯಾವುದಾದರೂ ಮದ್ಯದ ಅಮಲು ಅಥವಾ ಜೊತೆಗಾರರೂ ಇದ್ದಾರೆಂಬ ಧೈರ್ಯದ ಅಮಲುಗಳೂ ಸೇರಿದರೆ ಭೂತ ಭವಿಷ್ಯತ್ತನ್ನೆಲ್ಲಾ ಸಂಪೂರ್ಣ ಗಣನೆಗೇ ಇಲ್ಲದೆ, ಅಪ್ರಜ್ಞಾವಸ್ಥೆಯಲ್ಲಿ ದಾಹ ತೀರಿಸಿಕೊಳ್ಳುವ ಕೆಲಸ ಮಾಡುತ್ತಾರೆ.

ದಾಹಕ್ಕೆ ಅಮಲು ಆಹಾರವಲ್ಲ. ಅಮಲಿಗಾಗುವ ದಾಹಕ್ಕೆ ಪ್ರಜ್ಞೆ ಇರುವುದಿಲ್ಲ. ಪ್ರಜ್ಞೆಯ ಕೊರತೆ, ಸೆಳೆತಕ್ಕೆ ಕೂಡಲೇ ಸೋಲುವಿಕೆ ಇವೆಲ್ಲವನ್ನೂ ದೌರ್ಬಲ್ಯ ಎನ್ನಲಾಗುವುದು. ದೌರ್ಬಲ್ಯವೆಂಬುದು ಅತ್ಯಂತ ಸಬಲವಾದುದು.

ಆತನೊಬ್ಬ ನಾಗರಿಕ ಸೇವೆಯ ಅಧಿಕಾರಿ, ಯುವಕ, ದಕ್ಷ. ಸ್ವಹಿತಾಸಕ್ತಿಯ ರಾಜಕಾರಣಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದ. ಅಧಿಕಾರ ಮತ್ತು ಆಸೆಬುರುಕ ಶಾಸಕರೋ, ತೆರಿಗೆಗಳ್ಳರೋ, ಲೋಭಿ ಬಂಡವಾಳದಾರರು ತಮ್ಮ ಕಳ್ಳಮಾರ್ಗಗಳಿಂದ ಹೊರಗೆ ಬರಲೇ ಬೇಕಾಗಿ ಬಂದು ತೆರಿಗೆ ಕಟ್ಟುವಂತಾದರು. ಅವನಿಗೆ ಅಭಿಮಾನಿಗಳೂ ಮತ್ತು ಶತ್ರುಗಳೂ ಹುಟ್ಟಿಕೊಂಡರು.

ಪ್ರಾಮಾಣಿಕವಾಗಿ ತೊಡಗುವವರು ದ್ವೇಷಿಸುವ ಮತ್ತು ಪ್ರೀತಿಸುವ ಎರಡೂ ಬಗೆಯ ಜನಗಳನ್ನು ನೋಡಬೇಕಾಗುತ್ತದೆ. ಮೋಹದ ದಾಹವು ತೀರಿಸಿಕೊಳ್ಳಲಾಗದೇ ಜೀವನವನ್ನು ಪರಿಗಣಿಸಿಕೊಳ್ಳದೇ, ಜೀವವನ್ನೂ ಗಣಿಸದಂತಾದಾಗ ಸಮಾಜಕ್ಕೆ ಆಘಾತವಾಗುತ್ತದೆ. ಆತನ ಆತ್ಮಹತ್ಯೆಯನ್ನು ಹತ್ಯೆಯೇನೋ ಎಂದು ಎಲ್ಲಾ ದೃಷ್ಟಿಕೋನಗಳಿಂದ ನೋಡುತ್ತಾರೆಯೇ ಹೊರತು, ಅಂಥಾ ಗಟ್ಟಿತನದ ಮನುಷ್ಯ ತನ್ನ ತಾನು ಕೊಂದುಕೊಳ್ಳುವಷ್ಟು ದುರ್ಬಲನಲ್ಲ ಎಂದು ಸ್ಪಷ್ಟ ನಿಲುವುಗಳನ್ನು ತಾವೇ ತಳೆಯುತ್ತಾರೆ. ಪಕ್ಕದಲ್ಲಿರುವ ಎಲ್ಲರನ್ನೂ ಅನುಮಾನದಿಂದ ನೋಡುತ್ತಿರುತ್ತಾರೆ. ಸಿನಿಮೀಯವಾದಂತಹ ಸೀನ್‌ಗಳನ್ನು ಸೃಷ್ಟಿಸಿಕೊಂಡು ತಾವೇ ಗೂಢಾಚಾರರಾಗಿ ಉಗುರಿನಲ್ಲಿ ವಿಷದ ಸೂಜಿ ಚುಚ್ಚಿ ಕೊಲ್ಲುವಂತಹ ತಂತ್ರಗಾರಿಕೆಗಳನ್ನೆಲ್ಲಾ ಪತ್ತೆಹಚ್ಚಿಕೊಂಡಿರುತ್ತಾರೆ.

ಅದೇನೇ ಇರಲಿ. ಆ ಒಂದು ವ್ಯಕ್ತಿಗೂ ಒಳಗೊಂದು, ಸಮಾಜಕ್ಕೆ ತೋರಿಸುವ ಅಗತ್ಯವಿಲ್ಲದಂತಹ ಗುಪ್ತವಾದ ಸೆಳೆತ ಇಲ್ಲವೆನ್ನಲು ಮನಶಾಸ್ತ್ರಜ್ಞನೊಬ್ಬ ಒಪ್ಪುತ್ತಾನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ನಾಯಕರೊಬ್ಬರು ತಮ್ಮೆಲ್ಲಾ ಸಮಾಜ ಕಾರ್ಯ, ಹೋರಾಟ, ಬಂಧನ, ಬರವಣಿಗೆಗಳ ನಡುವೆ ತಮ್ಮ ಅತಿಕಾಮವನ್ನು ಪ್ರಯೋಗಕ್ಕೆ ಈಡು ಮಾಡಿಕೊಳ್ಳುತ್ತಿದ್ದರು. ಇಡೀ ದೇಶವನ್ನೇ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸುತ್ತಾ ಅಷ್ಟು ಬಿಜಿಯಾಗಿರುವಂತಹ ವಯೋವೃದ್ಧ, ತನ್ನ ಕಾಮದ ಅಮಲು ತನ್ನ ಪ್ರಜ್ಞೆಯನ್ನು ಮೀರುತ್ತದೋ ಇಲ್ಲವೋ ಎಂದು ನೋಡಲು ಬ್ರಹ್ಮಚರ್ಯೆ ಪರೀಕ್ಷೆಯನ್ನು ಮಾಡಿಕೊಳ್ಳುವಷ್ಟು ಸಮಯಾವಕಾಶ ಮಾಡಿಕೊಳ್ಳುತ್ತಿದ್ದದ್ದು ನನಗಂತೂ ಅಚ್ಚರಿಯೇನಿಲ್ಲ. ಅವರು ತಮ್ಮ ತಂದೆ ಸತ್ತು ಹೆಣವಾಗಿ ಮಲಗಿದ್ದಾಗಲೂ ತಮ್ಮ ಹೆಂಡತಿಯನ್ನು ಹಾಸುಗೆಗೆ ಬಲವಂತ ಮಾಡುವಷ್ಟರಮಟ್ಟಿಗೆ ಉದ್ದೀಪಿತರಾಗಿರುತ್ತಿದ್ದರು.

ಆತನೊಬ್ಬ ಜನಪ್ರಿಯ ನಟ. ಅವರ ಜನಪ್ರಿಯತೆಯ ಉತ್ತುಂಗವನ್ನು ನೋಡುವ ಜನಕ್ಕೆ ಅವರ ಸಹನಟಿಯು ಗರ್ಭಿಣಿಯಾಗಿ, ತಾಯಿಯಾಗಿ ಕೊನೆಗೆ ತಾನು ಒಂಟಿಯಾಗಿ ಆ ಮಗುವನ್ನು ನೋಡಿಕೊಂಡು ಬದುಕುತ್ತಿರುವುದನ್ನು ನೋಡುವುದಿಲ್ಲ. ಗಲಾಟೆ ಮಾಡುವುದಿಲ್ಲ. ಸಾರ್ವಜನಿಕ ವಲಯದಲ್ಲಿ ಚರ್ಚೆ ಮಾಡುವುದಿಲ್ಲ. ಅಲ್ಲಿ ರಾಜಕೀಯವಿಲ್ಲ, ಅಧಿಕಾರ ಅಥವಾ ಸಾರ್ವಜನಿಕ ವಿಭಾಗಗಳ ಪ್ರವೇಶವಿಲ್ಲ. ಜೊತೆಗೆ ತಮ್ಮ ನೆಚ್ಚಿನ, ಅಭಿಮಾನ ನಟ. ಅದು ಅವರ ವೈಯಕ್ತಿಕ ಬದುಕು ಅಂತ ಬಿಟ್ಟುಬಿಡುತ್ತಾರೆ. ಇಷ್ಟಕ್ಕೂ ಅಲ್ಲಿ ಯಾವುದೂ ಹೆಣ ಬಿದ್ದಿಲ್ಲ. ಹೊರಬಿದ್ದಿದ್ದು ಒಂದು ಗಂಡು ಮಗು. ಅದೇನು, ಹೆಂಗೋ ಬೆಳ್ಕೋತದೆ. ಹಾಗಾಗಿ ಆ ನಟನ ಅಮಲು ಪ್ರಜ್ಞೆಯನ್ನು ಮೀರಿದ್ದು ಜನಕ್ಕೆ ಮರೆತು ಹೋಗುತ್ತದೆ. ಆ ನಟನ ಜಾರುವಿಕೆಯ ಅಮಲು ಅದೆಷ್ಟರ ಮಟ್ಟಿಗೆ ಹೋಗುತ್ತಿತ್ತೆಂದರೆ ತನ್ನ ಸಹನಟಿಯೊಬ್ಬಳನ್ನು ಗುಪ್ತವಾಗಿ ಮದುವೆಯಾಗುವ ಮಟ್ಟಿಗೆ ಹೋಗಿದ್ದು, ಅವರ ಧರ್ಮಪತ್ನಿ ರಾತ್ರೋರಾತ್ರಿ ಪ್ರಯಾಣ ಬೆಳೆಸಿ ಬಂದು ಆ ಗಂಧರ್ವವಿವಾಹವು ವಿಫಲವಾಗುವಂತೆ ನೋಡಬೇಕಾಯ್ತು. ಕೊನೆಗೆ ಆ ಧರ್ಮಪತ್ನಿ ಬರಿಯ ಹೆಂಡತಿಯಾಗಿ ಉಳಿಯದೇ ಅವರನ್ನು ಸಂಪೂರ್ಣ ನೋಡಿಕೊಳ್ಳಬೇಕಾದ ತಾಯಿಯಾಗಿಯೂ ಮಾರ್ಪಡಬೇಕಾಯಿತು.

ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಆತ ಜಗತ್ತಿನ ಗಮನವನ್ನೇ ತನ್ನ ಕಡೆಗೆ ಸೆಳೆದುಕೊಂಡಿದ್ದ. ವಿಡಂಬನೆಯ ಮೂಲಕ ಗಂಭೀರ ವಿಷಯವನ್ನು ಅತ್ಯಂತ ಕಾಳಜಿಯಿಂದ ತನ್ನ ಅಭಿನಯದ ಮತ್ತು ನಿರ್ಮಾಣದ ಚಲನಚಿತ್ರಗಳಲ್ಲಿ ಮಾತಿಲ್ಲದೇ ಹೇಳುತ್ತಿದ್ದ. ನಗಿಸುತ್ತಾ ನಗಿಸುತ್ತಾ ಅಳುವಿನ ಕಥೆಯನ್ನು, ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯನ್ನು, ರಾಜಕೀಯ ಧೋರಣೆಗಳ ವಿರುದ್ಧ ಬಂಡಾಯವನ್ನು, ತಮ್ಮದೇ ವಿಚಿತ್ರ ಧೋರಣೆಗಳಿಂದಿರುವ ವ್ಯಕ್ತಿಗಳು ಕಟ್ಟಿರುವಂತಹ ಸಮಾಜದಲ್ಲಿ ಅಮಾಯಕರು ನರಳವ ಪರಿಯನ್ನು ಆತ ಹೇಳುತ್ತಿದ್ದ.

ತನ್ನ ತಾನು ಟೋಪಿ, ಹಳೆಯ ಕೋಟು ಮತ್ತು ಹರಿದ ಬೂಟಿನಲ್ಲಿಟ್ಟುಕೊಂಡು ವಾಕಿಂಗ್ ಸ್ಟಿಕ್ ತಿರುಗಿಸುತ್ತಾ ಅಮಾನವೀಯವೆನಿಸುವ ಸ್ಯಾಡಿಸ್ಟ್ ಜನಗಳಿಂದ ಒದೆಸಿಕೊಂಡು, ಬಡಿಸಿಕೊಂಡು, ಅಂಡು ಸುಟ್ಟುಕೊಂಡು ನೋಡುಗರ ಕಣ್ಣಲ್ಲಿ ಮಾನವೀಯತೆಯ ಕಂಬನಿಯನ್ನು ಮಿಡಿಯುತ್ತಿದ್ದ. ಆದರೆ ಅವನೋ ಹೆಂಗಸರನ್ನು ನಂಬುತ್ತಿರಲಿಲ್ಲವಂತೆ. ಅದಕ್ಕೇ ನಾಲ್ಕು ಹೆಂಡತಿಯರು ವೈವಾಹಿಕ ಜೀವನದಲ್ಲಿ ಬದಲಾದರು.

ಹದಿನೆಂಟು ವರ್ಷದ ಹುಡುಗಿಯರ ಮೇಲೆ ವಿಪರೀತ ಮೋಹದ ದಾಹವಿದ್ದ ಆತ ಅವರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ವರದಿಗಳಿವೆ. ತನ್ನ ಪ್ರೇಯಸಿಯರ ಪಟ್ಟಿ ಎರಡು ಸಾವಿರಕ್ಕೆ ಮುಟ್ಟಿಸಿಕೊಂಡ ಹಾಸ್ಯ ಚಕ್ರವರ್ತಿಯ ಕಲಾ ಪ್ರತಿಭೆಯ ದಾಖಲುಗಳನ್ನು ಮಾತ್ರ ನೋಡುತ್ತೇವೆ.

ಜಗತ್ತೇ ಬೆರಗಾಗಿ ನೋಡಿದ ನರ್ತಕನಾದ ಆತ ಲೆಜೆಂಡ್. ಹೊಸ ಬಗೆಯ ನರ್ತನವನ್ನು ತನ್ನ ಪೀಳಿಗೆಗೆ ಪರಿಚಯಿಸಿದ. ಆತನ ಪ್ರೀತಿಸುವ ಅಭಿಮಾನಿಗಳೋ ಕೋಟಿ ಕೋಟಿ. ಆತ ಬರೆಯುತ್ತಿದ್ದ, ಅದ್ಭುತವಾಗಿ ಹಾಡುತ್ತಿದ್ದ, ಮೈಯಲ್ಲಿ ಎಲುಬೇ ಇಲ್ಲವೇನೋ ಎಂಬಂತೆ ನರ್ತಿಸುತ್ತಿದ್ದ ಅವನು ಅಸಂಖ್ಯಾತ ನರ್ತಕರಿಗೆ ಮಾದರಿಯಾಗಿದ್ದ. ಆದರೆ ಹದಿಹರೆಯದ ಹುಡುಗರನ್ನು ನೋಡಿದರೆ ಅವನ ಮೈಯಲ್ಲಿ ಬಿಸಿಯೇರುತ್ತಿತ್ತು. ಎಳೆಯ ಬಾಲಕರ ದೇಹಗಳನ್ನು ತನ್ನ ಹಾಸುಗೆಯಲ್ಲಿ ಹೊರಳಾಡಿಸಿಕೊಳ್ಳುತ್ತಿದ್ದ. ಅವರ ಜೊತೆ ಹಸಿಬಿಸಿಯಾಗಿ ತನ್ನ ಅಮಲನ್ನು ಭಾವುಕನಾಗಿ ತೀರಿಸಿಕೊಳ್ಳುತ್ತಿದ್ದ. ತಾನು ಪ್ರೀತಿಸುವ ಆ ಎಳೆಯ ದೇಹದ ಹುಡುಗರಿಗಾಗಿ ಹುಚ್ಚನಂತಾಗುತ್ತಿದ್ದ.

ಒಂದಲ್ಲ ಎರಡಲ್ಲ. ಅಸಂಖ್ಯಾತ ಪ್ರತಿಭಾನ್ವಿತ ವ್ಯಕ್ತಿಗಳು ಜಾರಿ ಹೋಗಿದ್ದಾರೆ. ಅವರಿಗೂ ಅಮಲಿದೆ ಎಲ್ಲರಿಗಿರುವಂತೆ. ಪ್ರಜ್ಞೆ ಕಳಕೊಂಡಾಗ ಜಾರಿರುವ ದೃಷ್ಟಾಂತಗಳಿವೆ. ಅದೇ ರೀತಿ ತಮ್ಮ ಬದುಕನ್ನು ಕೊನೆಗೊಳ್ಳಿಸಿಕೊಳ್ಳುವಂತ ಕುಣಿಕೆಗೆ ನೇತುಬಿದ್ದು ಜೀವ ಕಳೆದುಕೊಳ್ಳುತ್ತಾರೆ. ಯಾರೊಪ್ಪಲಿ ಬಿಡಲಿ, ಕಾಣುವ ಬದುಕಿನ ಬಟ್ಟೆಯೊಳಗೆ ಅಮಲೊಂದು ಬೆತ್ತಲಾಗಿರುತ್ತದೆ. ಅದಕ್ಕೆ ಸೆಳೆತವೇನೋ, ಮೋಹವೇನೋ, ದಾಹವೇನೋ ಎಲ್ಲವೂ ಅದರ ಗುಣವಾಗಿರುತ್ತದೆ.

ಸಂತ ದಂಪತಿಗೆ ಹಸಿಬಿಸಿಯಾದ ಮೋಹವೆಂಬುದು ಇರದಿದ್ದರೆ ಉದ್ದರಣೆಯ ಪ್ರೋಕ್ಷಣೆಯಿಂದ ಮಗುವೊಂದು ಹುಟ್ಟದು.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

One Response

  1. ತುಂಬಾ ವಾಸ್ತವವಾಗಿ ಬರೆದಿದ್ದಿರಿ ಸರ್.💐👌🙏

Leave a Reply