ಕಿಚ್ಚ ಸುದೀಪ್ ಭೇಟಿ ಹಿಂದೆ ರಾಜಕೀಯ ಉದ್ದೇಶವಿಲ್ಲ: ಡಿ.ಕೆ.ಶಿವಕುಮಾರ್

3 years ago

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ಭೇಟಿ ರಾಜಕಾರಣಕ್ಕೆ ಸಂಬಂಧಿಸಿದಲ್ಲ. ಇದೊಂದು ವೈಯಕ್ತಿಕ ಭೇಟಿ ಅಷ್ಟೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಚ್ಚ ಸುದೀಪ್‌ರವರ ಭೇಟಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಲಾವಿದರಿಗೆ ವಿಶೇಷ ಸಹಾಯ ಮಾಡುವ ಅಂಶಗಳನ್ನು ಸೇರಿಸಲು ತೀರ್ಮಾನಿಸಲಾಗಿದೆ. ಆ ಸಂಬಂಧ ಸುದೀಪ್‌ರವರ ಜತೆ ಚರ್ಚೆ ಮಾಡಿದ್ದೇನೆ. ಇದು ಪೊಲಿಟಿಕಲ್ ಮೀಟಿಂಗ್ ಅಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ ನಟ ಸುದೀಪ್ ಅವರ ಸಹೋದರಿಗೆ ಕಾಂಗ್ರೆಸ್‌ನ ಟಿಕೆಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಇಲ್ಲ ಎಂದು ಕೈ ಸನ್ನೆ ಮಾಡಿ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸಲಿಲ್ಲ.
ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಜನ ರೋಸಿ ಹೋಗಿದ್ದಾರೆ. ಒಂದು ಪೋಡಿ ಮಾಡಲು ೪೦ ಸಾವಿರ ಲಂಚ ಕೊಡುವ ಸ್ಥಿತಿ ಇದೆ. ಸಚಿವ ಆರ್. ಅಶೋಕ್ ಹಳ್ಳಿಗಳಿಗೆ ಹೋಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಏನು ಪ್ರಯೋಜನ ಎಂದರು.
ಕಾಂಗ್ರೆಸ್ ಪಕ್ಷದ ಉಚಿತ ಘೋಷಣೆಗಳನ್ನು ಜಾರಿ ಮಾಡೇ ಮಾಡುತ್ತೇವೆ. ಯಾವ ರೀತಿ ಇವುಗಳನ್ನು ಜಾರಿ ಮಾಡುತ್ತೇವೆ ಎಂಬುದನ್ನು ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.

Leave a Reply