ಚಾಮರಾಜನಗರ: ಸರ್ಕಾರದ ಆದೇಶದ ಮೇರೆಗೆ ಶಾಲೆಗೊಂದು ಭಾರತ ಸೇವಾದಳ ಎಂಬ ಶಾಖೆಗಳನ್ನು ತೆರೆದಿದ್ದು, ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮ, ನಾಯಕತ್ವದ ಗುಣ ಹಾಗೂ ಮಕ್ಕಳ ಸಮಗ್ರ ಶಿಕ್ಷಣದ ಜೊತೆಗೆ ಶೈಕ್ಷಣಿಕ ಪ್ರಗತಿ ಮೂಡಿಸಲು ಇದೇ ಫೆಬ್ರವರಿ 15ರಂದು ಭಾರತ ಸೇವಾದಳದಿಂದ ಮಕ್ಕಳ ಭಾವೈಕ್ಯತಾ ಮೇಳ – 2023 ಕಾರ್ಯಕ್ರಮವನ್ನು ನಡೆಸಲು ಇಂದು ಭಾರತ ಸೇವಾದಳದ ಕಛೇರಿಯಲ್ಲಿ ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಕ ಶಾಖಾ ನಾಯಕ – ನಾಯಕಿಯರ ಹಾಗೂ ಸೇವಾದಳದ ತಾಲೂಕು ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆ ಕಾರ್ಯಕ್ರಮದ ಜೊತೆಗೆ ಮಕ್ಕಳಿಂದ ಪ್ರಭಾತ್ ಪೇರಿ, ಯೋಗ ಪ್ರದರ್ಶನ, ಸೇವಾ ದಳದ ಸಾಬಿನಯ ಗೀತೆಗಳು, ಸರ್ವಧರ್ಮೀಯ ಸಾಮೂಹಿಕ ಪ್ರಾರ್ಥನೆ, ಜಾದು ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯು ತೀರ್ಮಾನಿಸಿತು. ಜೀ ಕನ್ನಡ ಬಾಲ ಪ್ರತಿಭೆ ಗೌತಮ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯು ತೀರ್ಮಾನಿಸಲಾಯಿತು. ತಾಲೂಕು ಸಮಿತಿ ಮಹಿಳಾ ನಾಮ ನಿರ್ದೇಶಿತ ನಿರ್ದೇಶಕಿಯಾಗಿ ಶಿಕ್ಷಕರಾದ ಜ್ಯೋತಿ ಅವರನ್ನು ಸಭೆಯು ಒಮ್ಮತದಿಂದ ಆಯ್ಕೆ ಮಾಡಲಾಯಿತು.ಬೆಂಗಳೂರು ಗ್ರಾಮಾಂತರದಿಂದ ಚಾಮರಾಜನಗರ ಜಿಲ್ಲೆಗೆ ವರ್ಗಾವಣೆಗೊಂಡು ಬಂದಿರುವ ನೂತನ ಜಿಲ್ಲಾ ಸಂಘಟಕ ಅರುಣ್ ಕುಮಾರ್ ಅವರನ್ನು ಸಭೆ ಸ್ವಾಗತಿಸಿತು.
ಮೊದಲಿಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು. ಕಾರ್ಯದರ್ಶಿ ನಾಗರಾಜು ಅವರು ಸಭೆಗೆ ಸರ್ವರನ್ನು ಸ್ವಾಗತಿಸಿದರು. ತಾಲೂಕು ಅದಿನಾಯಕ ನಾಗಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಗಡೂರಯ್ಯ , ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿಕ್ಕಬಸವಯ್ಯ, ಕೋಶಾಧ್ಯಕ್ಷ ಪ್ರಸಾದ್ ಹಾಗೂ ಸೇವಾದಳದ ಶಿಕ್ಷಕರು ಭಾಗವಹಿಸಿದ್ದರು.



