ಪ್ರಲ್ಹಾದ್ ಜೋಷಿರವರೇ ಹುಬ್ಬಳ್ಳಿ ಬಿಟ್ಟು ಬೇರೆ ಕಡೆ ಸ್ಪಧಿಸಿ 

3 years ago

ಸಿದ್ದರಾಮಯ್ಯನವರು ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ವಿಚಾರದಲ್ಲಿ ಹಲವಾರು ಕ್ಷೇತ್ರಗಳ ಮಾಹಿತಿಯನ್ನು ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರು, ನಾಯಕರು ಮತ್ತು ಅಭಿಮಾನಿಗಳು ಇವರ ಒತ್ತಡದಂತೆ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕಾರಣದಿಂದ ಮುಂದೆ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸುತ್ತಾರೆಂಬ ಚರ್ಚೆಗಳು ಆರಂಭವಾಗುತ್ತಿದ್ದಂತೆಯೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿರವರು ಸಿದ್ಧರಾಮಯ್ಯನವರನ್ನು ಅಬ್ಬೇಪಾರಿಯೆಂದು ಕರೆದಿರುವುದು ಅವರ ಮನಸ್ಥಿತಿಯನ್ನು ತಿಳಿಸುತ್ತದೆ.

ಸಿದ್ದರಾಮಯ್ಯನವರು 1983ರಿಂದ ರಾಜ್ಯದಲ್ಲಿ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಲ್ಲಿ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿರುವುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಭಾಷಣ ಮತ್ತು ಅವರ ಪ್ರಕಾರದ ವೈಖರಿಗೆ ಹಲವಾರು ಕ್ಷೇತ್ರದ ಜನತೆ ಆತುರದಿಂದ ಕಾಯುತ್ತಿರುತ್ತಾರೆ. ಪ್ರಹ್ಲಾದ ಜೋಷಿರವರ ಭಾಷಣಕ್ಕೆ ಬಿ.ಜೆ.ಪಿ.ಯ ಎಷ್ಟು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಆಸಕ್ತರಾಗಿದ್ದಾರೆ ಎಂಬುದನ್ನು ಅರಿತು ಮಾತನಾಡಲಿ.

ಚುನಾವಣೆಯಲ್ಲಿ ಸತತವಾಗಿ ಗೆದ್ದ ಮಾತ್ರಕ್ಕೆ ನಾಯಕರಾಗುವುದಿಲ್ಲ. ಈ ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಬಾರಿ ಸಂಸತ್‌ ಗೆ ಆಯ್ಕೆಯಾದವರು, ವಿಧಾನಸಭೆಗೆ ಆಯ್ಕೆಯಾದವರು ಎಷ್ಟೋ ನಾಯಕರು ತಮ್ಮ ಪ್ರಭಾವವನ್ನು ಪಕ್ಕದ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿಲ್ಲ. ಜೋಷಿರವರು ಸಿದ್ದರಾಮಯ್ಯನವರಿಗಿಂತ ಜನಪ್ರಿಯ ನಾಯಕರು, ಜನನಾಯಕರು ಎನ್ನುವುದಾದರೆ ಮುಂದಿನ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆಯನ್ನು ಬಿಟ್ಟು ಹಳೆ ಮೈಸೂರು ಪ್ರಾಂತ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಂತು ಗೆದ್ದು ಬರಲಿ.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಕ್ಷೇತ್ರ ಬದಲಾಯಿಸುವುದು ಅಥವಾ ಚುನಾವಣೆಯಲ್ಲಿ ಸೋಲುನ್ನು ಅನುಭವಿಸಿರುವ ನಾಯಕರುಗಳಲ್ಲಿ ಸಿದ್ದರಾಮಯ್ಯನವರೊಬ್ಬರೆ ಇಲ್ಲ. ನಿಜಲಿಂಗಪ್ಪನವರು ಚುನಾವಣೆಯಲ್ಲಿ ಸೋತಿದ್ದಾರೆ, ಬಿ.ಡಿ. ಜತ್ತಿಯವರು ಸೋತಿದ್ದಾರೆ. ವೀರಪ್ಪ ಮೊಯಿಲಿ, ಗುಂಡೂರಾಯರು ಲೋಕಸಭಾ ಚುನಾವಣೆಗಳಲ್ಲಿ ಸೋತಿದ್ದಾರೆ. ಅನೇಕ ನಾಯಕರು ಚುನಾವಣೆಗಳಲ್ಲಿ ಸೋತಿದ್ದಾರೆ. ಕೆಂಗಲ್ ಹನುಮಂತಯ್ಯನವರು, ಜೆ.ಎಚ್.ಪಟೇಲ್, ಯಡಿಯೂರಪ್ಪನವರು, ಕುಮಾರಸ್ವಾಮಿರವರು ಹೀಗೆ ಅನೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಸೋತಿದ್ದಾರೆ. ಹೀಗೆಂದ ಮಾತ್ರಕ್ಕೆ ಅವರ ನಾಯಕತ್ವ, ವರ್ಚಸ್ಸು ಕಡಿಮೆಯಾಗಿರುವುದಿಲ್ಲ.

ಸಿದ್ದರಾಮಯ್ಯನವರು ಯಾವುದೇ ಕ್ಷೇತ್ರದಲ್ಲಿ ನಿಲ್ಲಲು ಸ್ವತಂತ್ರರಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್ ಒಪ್ಪಿಗೆ ಬೇಕೆ ಹೊರತು ಬಿ.ಜೆ.ಪಿ ನಾಯಕರ ಅಪ್ಪಣೆ ಬೇಕಿಲ್ಲ. ಬಿ.ಜೆ.ಪಿ. ನಾಯಕರಿಗೆ ಸಿದ್ದರಾಮಯ್ಯನವರ ಮೇಲೆ ಅದೆಷ್ಟು ಭಯವಿದೆ ಎನ್ನುವುದಕ್ಕೆ ಅವರನ್ನು ಎಲ್ಲ ಹಂತದ ನಾಯಕರು ಟೀಕೆ ಮಾಡುತ್ತಾ ಸಂಭ್ರಮಿಸುತ್ತಿರುವುದೇ ಸಾಕ್ಷಿಯಾಗಿದೆ.

ಮನಸ್ಸು ಶುದ್ಧವಾಗಿ, ನೇರವಾದ ಮಾತುಗಾರಿಕೆ, ನಡವಳಿಕೆಯಲ್ಲಿ ಮುಗ್ಧತೆ ಮತ್ತು ಗ್ರಾಮೀಣ ಸೊಗಡಿನ ಮಾತುಗಾರಿಕೆ ಸಿದ್ದರಾಮಯ್ಯನವರ ಆಕರ್ಷಣೆಯಾಗಿದೆ. ಯಾರು ಎಷ್ಟೇ ಟೀಕೆ ಮಾಡಿದರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ನೀಡಿದ ಬಡವರ ಪರವಾದಂತಹ ಯೋಜನೆಗಳು ಅವರನ್ನು ಎಷ್ಟೇ ವರ್ಷಗಳಾದರೂ ಪ್ರೀತಿಸುವ ಕೋಟಿ ಕೋಟಿ ಹೃದಯಗಳಿಗೆ ಬರ ಬರುವುದಿಲ್ಲ.

– ಕೆ.ಎಸ್‌. ನಾಗರಾಜ್, ಬೆಂಗಳೂರು

Leave a Reply