ಬಿಜೆಪಿಯಲ್ಲಿ ಪಿಂಪ್ ಜಗಳ ತಾರಕಕ್ಕೆ: ಯತ್ನಾಳ್, ನಿರಾಣಿ ಕೆಸರೆರಚಾಟ

3 years ago

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನಡುವಿನ ವಾಕ್ಸಮರ ತಾರಕಕ್ಕೇರಿದೆ ಏಕವಚನ ಪ್ರಯೋಗದ ಟೀಕೆ ಮುಂದುವರೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಿರಾಣಿ, ಅವರದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ  ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪದೇ ಪದೇ ಒಬ್ಬರನ್ನು ಹಿಯಾಳಿಸಿ ಮಾತನಾಡುವುದು, ಬಾಯಿಗೆ ಬಂದಂತೆ ಟೀಕೆ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಕೂಡ ಅದೇ ಧಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಾಲಿಗೆ ಉದ್ದ ಇದೆ ಎಂದು ಚಾಚಿದರೆ ಕತ್ತರಿಸುವ ಕೆಲಸವೂ ನಮಗೆ ಗೊತ್ತಿದೆ ಎಂದು ಎಚ್ಚರಿಸಿದರು.

ಹಿರಿಯ ನಾಯಕರಾಗಿರುವ ಅವರು ನನ್ನನ್ನು ಪಿಂಪ್ ಎಂದು ಕರೆದಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ. ಆ ಸಂಸ್ಕೃತಿಯಲ್ಲಿ ಇದ್ದವರೆ ಆ ರೀತಿ ಮಾತನಾಡುತ್ತಾರೆ. ಒಳ್ಳೆಯ ಮನೆತನವಿದ್ದವರೂ ಈ ರೀತಿ ಮಾತನಾಡಲ್ಲ. ನಾಲಿಗೆ ಹರಿಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಬಂದಮೇಲೆ ಮುಸ್ಲಿಮರು, ಹಿಂದುತ್ವದ ಬಗ್ಗೆ ಮಾತನಾಡುವ ಮೂಲಕ ಎಡಬಿಡಂಗಿತನ ಪ್ರದರ್ಶಿಸುತ್ತಿದ್ದಾರೆ. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಆದರೂ ಇವರ ವರ್ತನೆ ಸರಿಯಾಗಿಲ್ಲ ಎಂದು ಕಿಡಿಕಾರಿದರು.

ಪಕ್ಷದಲ್ಲಿ ಇರಲು ಆಗುವುದಿಲ್ಲವೆಂದರೆ ರಾಜೀನಾಮೆ ಕೊಟ್ಟು ಹೊರಗೆಹೋಗಿ ಪ್ರತಿಭಟನೆ ಮಾಡಬೇಕು ಅದನ್ನು ಬಿಟ್ಟು ಇಲ್ಲಿಯೇ ಇದ್ದು, ಇಲ್ಲಿಯೇ ಪ್ರತಿಭಟನೆ ಮಾಡುವುದು‌ ಸರಿಯಲ್ಲ. ಇಂತಹ ಆಟಕ್ಕೆ ವಿಜಯಪುರದ ಜನ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡುವುದು ಶೋಭೆ ತರುವುದಿಲ್ಲ. ಸ್ಥಾನಮಾನಕ್ಕೆ ತಕ್ಕಂತೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ. ಒಂದು ವೇಳೆ ಆಗದಿದ್ದರೆ ಪಕ್ಷ ಬಿಟ್ಟು ಹೋಗಲು ಸ್ವತಂತ್ರರು ಎಂದರು.

ಕೆಲವರು ತಾವು ಮಾಡಿದ್ದೇ ಸರಿ ಎಂದು ಭಾವಿಸಿದ್ದಾರೆ. ರಾಜಕೀಯದಲ್ಲಿ ಇವೆಲ್ಲ ಬಹಳ ದಿನ ನಡೆಯುವುದಿಲ್ಲ. ಈ ಆಟಕ್ಕೆ ವಿಜಯಪುರದ ಜನ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ವೀರಶೈವ, ಲಿಂಗಾಯತ ಸಮುದಾಯಕ್ಕೆ 2ಎ ಕೊಡಬೇಕೆಂಬ ಬೇಡಿಕೆ ಇಂದು, ನೆನ್ನೆಯದಲ್ಲ. ಈ ಹೋರಾಟದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು. ಅದರ ಪ್ರತಿಫಲವಾಗಿಯೇ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಸೂಚನೆ ಕೊಟ್ಟಿದ್ದರು. ಆದರೆ ಅವರ ವಿರುದ್ಧವೂ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಎಂದೂ ಕೂಡ ಮೀಸಲಾತಿ ನೀಡಲು ವಿರೋಧಿಸಿಲ್ಲ. ಇದು ಕೆಲವರು ಸೃಷ್ಟಿಸಿರುವ ಷಡ್ಯಂತ್ರ ಎಂದರು.

ಆಗ ಜಾತಿ ಕಾಲಮ್ನಲ್ಲಿ ತರಬೇಕು ಎಂದು 3ಎ ಗೆ ತರಲಾಗಿತ್ತು. ಈ ಗಣ್ಯಾತಿಗಣ್ಯರಿಗೆ ಇಷ್ಟು ದಿನ 2ಎ ಬಗ್ಗೆ ಗೊತ್ತಿರಲಿಲ್ಲ. 2016ರಲ್ಲಿ ಕಾಂತರಾಜು ವರದಿ ಕೊಡುತ್ತಾರೆ. 2ಎ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಹೇಳಿದ್ದರು. ಇಂದು ಹೋರಾಟ ಮಾಡುವವರು ಅಂದು ಎಲ್ಲಿ ಮಲಗಿದ್ದೀರಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬದ್ದತೆಯಿದೆ. 2ಸಿ, 2ಡಿ ಮರುಸ್ಥಾಪನೆ ಮಾಡಿ ಮೀಸಲಾತಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇಡಬ್ಲ್ಯುಎಸ್ನಡಿ 4-5% ಮಾತ್ರ ಬರುತ್ತದೆ, ಉಳಿದಿದ್ದನ್ನು ಸಮುದಾಯಕ್ಕೆ ನೀಡುವ ನಿರ್ಧಾರವನ್ನು ಸಿಎಂ ಮಾಡಿದ್ದರು ಎಂದರು.

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಲಿದೆ. ಈಗ ಮೀಸಲಾತಿ ಘೋಷಣೆಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ. ಇಷ್ಟೆಲ್ಲಾ ಮಾಡಿದರೂ ಕೂಡ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂದು ಪ್ರಶ್ನಿಸಿದರು.

Leave a Reply