ಚುನಾವಣೆಗೆ ವೇದಿಕೆ ಸಜ್ಜು: ಮತದಾರರ ಅಂತಿಮ ಕರಡು ಪಟ್ಟಿ ಪ್ರಕಟ

3 years ago

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ರಾಜ್ಯದ ಕೇಂದ್ರ ಚುನಾವಣಾ ಆಯೋಗ ಮತದಾರರ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಿದೆ.

ಪರಿಷ್ಕೃತ ಪಟ್ಟಿಯಂತೆ ಈ ಬಾರಿ ರಾಜ್ಯದಲ್ಲಿ ಪುರುಷ ಮತದಾರರ ಸಂಖ್ಯೆ ಹೆಚ್ಚಾಗಿದೆ. ಒಟ್ಟಾರೆ 5 ಕೋಟಿ 05 ಲಕ್ಷದ, 48 ಸಾವಿರದ 553 ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ  ಪುರುಷರು 2,54,49,775, ಮಹಿಳೆಯರು 2,50,94,326, ಇತರರು 4,502 ಸೇರಿದಂತೆ ಒಟ್ಟು 5,05,48,553 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪರಿಷ್ಕೃತ ಕರಡು ಪಟ್ಟಿಯಾಗಿದ್ದು, ಉಳಿದಿರುವ ಮೂರು ವಿಧಾನಸಭಾ ಕ್ಷೇತ್ರಗಳ ಪಟ್ಟಿ ಪ್ರಾದೇಶಿಕ ಆಯುಕ್ತರ ವರದಿ ಬಂದ ನಂತರ ಪ್ರಕಟಿಸುವುದಾಗಿ ಹೇಳಿದರು.

ಮಹದೇವಪುರ, ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಿ ಒಂದು ವೇಳೆ ದುರುದ್ದೇಶ ಪೂರ್ವಕವಾಗಿ ಹೆಸರುಗಳನ್ನು ಕೈ ಬಿಟ್ಟಿದ್ದರೆ ಸೇರ್ಪಡೆ ಮಾಡಬೇಕೆಂದು ಸೂಚಿಸಲಾಗಿದೆ. ವರದಿ ಬಂದ ನಂತರ ಈ ಮೂರು ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ವಿವರಿಸಿದರು.

221 ಕ್ಷೇತ್ರಗಳ ಪೈಕಿ ಹೆಚ್ಚುವರಿಯಾಗಿ 5,80,531 ಪುರುಷರ ಮತಗಳನ್ನು ಸೇರ್ಪಡೆ ಮಾಡಲಾಯಿತು. ಇದರಲ್ಲಿ 3,07,174 ಹೆಸರುಗಳನ್ನು ತೆಗೆದು(ಡಿಲೀಟ್) ಹಾಕಲಾಗಿದೆ. ಮಹಿಳಾ ಮತದಾರರಲ್ಲಿ 6,50,667 ಹೆಸರುಗಳು ಸೇರ್ಪಡೆಯಾಗಿದ್ದವು, 3,11,748 ಮತಗಳನ್ನು ತೆಗೆದು ಹಾಕಲಾಗಿದೆ ಎಂದರು.

342 ತೃತೀಯ ಲಿಂಗಿ ಮತಗಳು ಸೇರ್ಪಡೆಯಾಗಿದ್ದು 43 ಹೆಸರುಗಳನ್ನು ಕೈ ಬಿಡಲಾಗಿದೆ. ಒಟ್ಟು ಹೊಸದಾಗಿ 26,38,990 ಮತಗಳು ಸೇರ್ಪಡೆಯಾಗಿವೆ ಎಂದು ಅವರು ವಿವರಿಸಿದರು. 2,62,854 ಮತದಾರರು ಮೃತಪಟ್ಟಿದ್ದರೆ, 3,27,488 ಮತದಾರರನ್ನು ವರ್ಗಾವಣೆ ಮಾಡಲಾಗಿದೆ. 24,137 ಪುನಾರವರ್ತಿತರಾಗಿದ್ದರು.

2023ರ ಚುನಾವಣೆಯಲ್ಲಿ 3,88,064 ಪುರುಷರು, 3,13,040 ಮಹಿಳೆಯರು, 139 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 7,01,243 ಯುವ ಮತದಾರರು ಸೇರ್ಪಡೆಯಾಗಿದ್ದಾರೆ.

2011ರಲ್ಲಿ ಲಿಂಗಾನುಪಾತ 973 ಇದ್ದರೆ, ಈ ಬಾರಿ 988ಕ್ಕೆ ಏರಿಕೆಯಾಗಿದೆ. ಲೈಂಗಿಕ ಕಾರ್ಯಕರ್ತೆಯರು 1,00,834, ಬುಡಕಟ್ಟು ವಾಸಿಗಳು 30,517, ವಿಶೇಷಚೇತನರು 5,09,553 ಹಾಗೂ ತೃತೀಯ ಲಿಂಗಿಗಳು 41,317 ಸೇರಿದ್ದಾರೆ.

ಜಿಲ್ಲಾಧಿಕಾರಿಗಳು, ಸಹಾಯಕ ಚುನಾವಣಾಕಾರಿಗಳು, ಚುನಾವಣಾ ನೋಂದಾವಣೆ ಅಧಿಕಾರಿಗಳ ಜತೆ ಸಭೆ ನಡೆಸಿ ಮತದಾರರ ಪಟ್ಟಿ ಪ್ರಕಟಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿಯ ಹೆಸರು ಬಿಟ್ಟು ಹೋಗಿದ್ದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸೇರ್ಪಡೆ ಮಾಡಿಕೊಳ್ಳಬಹುದು.

Leave a Reply