CPIM ಹಿರಿಯ ಸದಸ್ಯ ಕೊರಗಪ್ಪ ಶೆಟ್ಟಿ ಕಾಲವಶ 

3 years ago

ಮಂಗಳೂರು: CPIM ಪಕ್ಷದ ಹಿರಿಯ ಸದಸ್ಯರೂ, ದುಡಿಯುವ ವರ್ಗದ ನೇತಾರರಾದ ಕಾಂ. ಕೊರಗಪ್ಪ ಶೆಟ್ಟಿ(81 ವರ್ಷ) ಯವರು ಅನಾರೋಗ್ಯದಿಂದಾಗಿ ಇಂದು ನಿಧನ ಹೊಂದಿದರು.

ಎಳೆಯ ಪ್ರಾಯದಲ್ಲೇ ಹಂಚು ಕಾರ್ಮಿಕನಾಗಿ ದುಡಿಮೆ ಮಾಡುವ ಮೂಲಕ ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯ ಪಾತ್ರವಹಿಸಿದ ಕೊರಗಪ್ಪ ಶೆಟ್ಟಿಯವರು ಕಮ್ಯುನಿಸ್ಟ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಹಾಗೂ ಶಿಸ್ತಿನ ಸಿಪಾಯಿಗಳಾಗಿದ್ದರು. ಅವಿಭಜಿತ ಕಮ್ಯುನಿಸ್ಟ್ ಪಕ್ಷದಲ್ಲೇ ಸದಸ್ಯತ್ವ ಪಡೆದಿರುವ ಕೊರಗಪ್ಪರವರು 1964ರಲ್ಲಿ ಪಕ್ಷವು ಸೈದ್ಧಾಂತಿಕ ಬಿನ್ನತೆಯಿಂದ ಇಬ್ಭಾಗವಾದಾಗ CPIM ಜೊತೆ ಧೃಢವಾಗಿ ನಿಂತರು.ಯೌವ್ವನದಲ್ಲೇ ಪಕ್ಷ ಸೇರಿದ್ದ ಕೊರಗಪ್ಪ ಶೆಟ್ಟಿಯವರು ಕಳೆದ 60 ವರ್ಷಗಳ ಸುಧೀರ್ಘ ಕಾಲಾವಧಿಯಲ್ಲಿ ಪಕ್ಷಕ್ಕಾಗಿ, ದುಡಿಯುವ ವರ್ಗಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ. ಅದೆಷ್ಟೋ ರೈತ ಚಳುವಳಿಯಲ್ಲಿ ಭಾಗವಹಿಸಿದ ಅವರು, 1964ರಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ನಡೆದ ರೈತರ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ ಧೀರ ಸಂಗಾತಿ. 1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂ ಕೃಷ್ಣ ಶೆಟ್ಟಿಯವರ ಗೆಲುವಿಗಾಗಿ ಅಹೋರಾತ್ರಿ ದುಡಿದಿರುವ ಕೊರಗಪ್ಪರವರು ತನ್ನ ಕೊನೆಯ ಉಸಿರು ಇರುವವರೆಗೂ ಪ್ರತೀ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿರುವುದು ಪಕ್ಷದ ಮೇಲಿರುವ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಆ ಕಾಲದಲ್ಲಿದ್ದ ದುಡಿಯುವ ವರ್ಗದ ಪತ್ರಿಕೆ ಅರುಣದಿಂದ ಹಿಡಿದು ಐಕ್ಯರಂಗ, ಜನಶಕ್ತಿ ಪತ್ರಿಕೆಗಳನ್ನು ಮಾರಾಟ ಮಾಡುವುದರಲ್ಲಿ ಹಾಗೂ ಪಕ್ಷದ ನಿಧಿ ಸಂಗ್ರಹ ಮಾಡುವುದರಲ್ಲಿ ಎತ್ತಿದ ಕೈ. ಕಳೆದ 40 ವರ್ಷಗಳಿಂದ ಜಪ್ಪಿನಮೊಗರುನಲ್ಲಿ ವಾಸವಾಗಿರುವ ಅವರು, ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಹಾಗೂ ಹತ್ತಿರದ ಪಕ್ಕಲಡ್ಕ ಯುವಕ ಮಂಡಲಗಳಲ್ಲೂ ಸಕ್ರಿಯ ಪಾತ್ರ ವಹಿಸಿ ಸ್ಥಳೀಯ ಯುವಕರ ಮಧ್ಯೆಯೂ ಅತ್ಯಂತ ಪ್ರೀತಿಪಾತ್ರರಾಗಿದ್ದರು.ಅಂತಹ ಪ್ರಮುಖ ಸಂಗಾತಿಯ ನಿಧನವು ಮಂಗಳೂರಿನ ದುಡಿಯುವ ವರ್ಗದ ಚಳುವಳಿಗೆ ಅತ್ಯಂತ ದೊಡ್ಡ ನಷ್ಟವುಂಟಾಗಿದೆ ಎಂದು CPIM ತನ್ನ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.

ಮೃತರು ಪತ್ನಿ,CPIM ಮಂಗಳೂರು ನಗರ ಮುಖಂಡರಾದ ದಿನೇಶ್ ಶೆಟ್ಟಿ ಸೇರಿದಂತೆ ಇಬ್ಬರು ಗಂಡು ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕೊರಗಪ್ಪ ಶೆಟ್ಟಿಯವರ ನಿಧನಕ್ಕೆ CPIM, CITU, CWFI, DYFI, SFI, JMS, DHS ಮಂಗಳೂರು ನಗರ ಸಮಿತಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

Leave a Reply