ಬೆಳಗಾವಿ: ಚೀನಾದಲ್ಲಿ ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೆ ಮಾಸ್ಕ್ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ನಾಳೆ ಕಂದಾಯ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯುತ್ತಿದ್ದು, ಇದರಲ್ಲಿ ಮಾಸ್ಕ್ ಕಡ್ಡಾಯ ಕುರಿತು ನಿರ್ಧಾರ ಕೈಗೊಳ್ಳುವ ಸಾದ್ಯತೆ ಇದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡಿಲ್ಲ. ಮಾಸ್ಕ್ ಧರಿಸುವಂತೆ ಸಲಹೆ ಕೊಟ್ಟಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ ಎಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರು ಸಂಸತ್ನಲ್ಲಿ ಮಾಸ್ಕ್ ಹಾಕಿ ಆದರ್ಶ ಮೆರೆದಿದ್ದಾರೆ. ಇಡೀ ದೇಶ ಅದನ್ನು ಪಾಲನೆ ಮಾಡಬೇಕು. ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಣೆ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದರು.
ಜನತೆ ಕೊರೊನಾ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಇದು ಸರಿಯಲ್ಲ. ಚೀನಾದಲ್ಲಿ ಕೊರೊನಾ ಹೆಚ್ಚಾಗಿದೆ. ಹಾಗಾಗಿ ನಾವು ಸಹ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಮಾಸ್ಕ್ ಧರಿಸುವಂತೆ ಸಲಹೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಚೀನಾ ಮತ್ತು ಬೇರೆ ದೇಶಗಳಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ರಾಜ್ಯದ ಜನ ೩ನೇ ಡೋಸ್ ಲಸಿಕೆ ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಬೂಸ್ಟರ್ ಡೋಸ್ ಕೊರೊನಾ ಲಸಿಕೆ ಸ್ವಲ್ಪಮಟ್ಟಿಗೆ ವೇಸ್ಟ್ ಆಗಿದೆ ಎಂದರು.
ಕೊರೊನಾ ಮೊದಲ ಮತ್ತು ಎರಡನೇ ಡೋಸ್ ಲಸಿಕೆಗೆ ತೋರಿದ ಆಸಕ್ತಿಯನ್ನು ಮೂರನೇ ಡೋಸ್ ಪಡೆಯಲು ಜನ ತೋರಿಸುತ್ತಿಲ್ಲ. ಕೊರೊನಾ ಹೋಗಿಲ್ಲ. ಮೂರನೇ ಡೋಸ್ ಲಸಿಕೆ ಪಡೆಯಲು ಜನ ಮುಂದಾಗಬೇಕು ಎಂದು ಅವರು ತಿಳಿಸಿದರು.
ಜೆಡಿಎಸ್ನ ಪಂಚರತ್ನ ರಥಯಾತ್ರೆಯನ್ನು ತಡೆಯಲು ಸರ್ಕಾರ ಕೊರೊನಾ ಮಾರ್ಗಸೂಚಿ ಜಾರಿಗೊಳಿಸುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸರಿಯಲ್ಲ ಎಂದರು.




